Homeರಾಜ್ಯಇನ್ನೂ ಮುಗಿಯದ ಸಂಪುಟ ಸರ್ಕಸ್, ಇನ್ನೂ ರಾಜ್ಯ ನಾಯಕರ ಕೈಸೇರಿಲ್ಲ ಸಚಿವರ ಪಟ್ಟಿ

ಇನ್ನೂ ಮುಗಿಯದ ಸಂಪುಟ ಸರ್ಕಸ್, ಇನ್ನೂ ರಾಜ್ಯ ನಾಯಕರ ಕೈಸೇರಿಲ್ಲ ಸಚಿವರ ಪಟ್ಟಿ

ಬೆಂಗಳೂರು, ಜು.31- ರಾಜ್ಯ ನಾಯಕರ ನಡುವಿನ ಪೈಪೋಟಿಯಿಂದಾಗಿ ಸಚಿವ ಸಂಪುಟ ವಿಸ್ತರಣೆ ಕಾಂಗ್ರೆಸ್‌‍ ಹೈಕಮಾಂಡ್‌ ಗೆ ಕಬ್ಬಿಣದ ಕಡಲೆಯಾಗಿದ್ದು, ಸೋಮವಾರ ಮಹೂರ್ತ ನಿಗದಿಯಾಗಿದ್ದರೂ, ಸಚಿವರ ಪಟ್ಟಿ ಇನ್ನೂ ರಾಜ್ಯ ನಾಯಕರ ಕೈ ಸೇರಿಲ್ಲ.

ಕಳೆದ ನಾಲ್ಕು ದಿನಗಳಿಂದ ಮುಖ್ಯಮಂತ್ರಿಯಾದಿಯಾಗಿ 70ಕ್ಕೂ ಹೆಚ್ಚು ಶಾಸಕರು ದೆಹಲಿಯಲ್ಲೇ ಬೀಡು ಬಿಟ್ಟಿದ್ದರು. ನಿನ್ನೆ ಸಂಜೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೇವಾಲ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು ಸಭೆ ಸೇರಿ ಚರ್ಚೆ ನಡೆಸಿದ್ದರು.

ಮೂಲಗಳ ಪ್ರಕಾರ ಸಭೆಯಲ್ಲಿ ಸಂಭವನೀಯ ಸಚಿವರ ಪೈಕಿ ಸುಮಾರು 16 ಹೆಸರುಗಳು ಅಖೈರುಗೊಂಡಿವೆ. ಚಿಕ್ಕಮಗಳೂ, ಬೆಂಗಳೂರು, ತುಮಕೂರು, ಕೋಲಾರ, ಬೆಳಗಾವಿ, ಮಂಡ್ಯ ಜಿಲ್ಲೆಯಿಂದ ಸಚಿವರನ್ನು ಆಯ್ಕೆ ಮಾಡಿಕೊಳ್ಳುವುದು ಕಾಂಗ್ರೆಸ್‌‍ ಹೈಕಮಾಂಡ್‌ ಗೆ ತಲೆ ನೋವಾಗಿದೆ. ಹೀಗಾಗಿ ದೆಹಲಿಯಿಂದ ರವಾನಿಸಿದ ಪಟ್ಟಿಯನ್ನು ಎಲ್ಲರೂ ಒಪ್ಪಿಕೊಳ್ಳಬೇಕು, ಯಾವುದೇ ರೀತಿಯ ಅಪಸ್ವರಗಳಿಗೆ ಅವಕಾಶ ನೀಡಬಾರದು ಎಂದು ಹೈಕಮಾಂಡ್‌ ಷರತ್ತು ವಿಧಿಸಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು ಜಾತಿ, ಧರ್ಮ ಆಧಾರಿತವಾಗಿ ಆದ್ಯತೆ ನೀಡಬೇಕು ಎಂದು ಪಟ್ಟು ಹಿಡಿದಿದ್ದರೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹೊಸಬರಿಗೆ ಮತ್ತು ಪಕ್ಷ ನಿಷ್ಠರಿಗೆ ಮಣೆ ಹಾಕಬೇಕು ಎಂಬ ಧೋರಣೆಯಲ್ಲಿದ್ದಾರೆ.

ನಿನ್ನೆ ಖರ್ಗೆ ಅವರ ನಿವಾಸದಲ್ಲಿ ನಡೆದ ಸಭೆಯ ಬಳಿಕ ರಾಜ್ಯ ನಾಯಕರ ಮುಖದಲ್ಲಿ ನಗು ಮಾಯವಾಗಿತ್ತು. ಎಲ್ಲರೂ ಬಿಗುವಿನಿಂದಲೇ ಹೊರ ನಡೆದಿದ್ದರು. ಹೈಕಮಾಂಡ್‌ ನ ಪ್ರತಿನಿಧಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿ, ಎಲ್ಲವನ್ನೂ ರಾಜ್ಯ ನಾಯಕರು ನೋಡಿಕೊಳ್ಳುತ್ತಾರೆ ಎಂದು ಹೇಳಿ ಜವಾಬ್ದಾರಿಯಿಂದ ನುಣಚಿಕೊಳ್ಳುವ ಯತ್ನ ನಡೆಸಿದರು. ಅಲ್ಲಿಗೆ ಸಂಪುಟ ವಿಸ್ತರಣೆಯ ಕಸರತ್ತು ಸುಲಲಿತವಾಗಿ ನಡೆದಿಲ್ಲ ಎಂಬ ಸಂದೇಶವಂತೂ ರವಾನೆಯಾಯಿತು.

ಸಚಿವರ ಪಟ್ಟಿ ಅಖೈರುಗೊಂಡರೆ ತಕ್ಷಣವೇ ಪ್ರಮಾಣ ವಚನ ಬೋಧನಾ ಕಾರ್ಯಕ್ರಮ ಆಯೋಜಿಸುವುದಾಗಿ ಮುಖ್ಯಮಂತ್ರಿ ಹೇಳುತ್ತಿದ್ದರು. ಬಹುತೇಕ ಎಲ್ಲಾ ಶಾಸಕರು ಅದೇ ನಿರೀಕ್ಷೆಯಲ್ಲಿದ್ದರು. ಎಲ್ಲವೂ ಅಂದುಕೊಂಡತೆ ನಡೆದಿದ್ದರೆ ಇಂದು ಸಂಜೆ ಅಥವಾ ನಾಳೆ ಮಧ್ಯಾಹ್ನಾ ನೂತನ ಸಚಿವರು ಸಂಪುಟ ಸೇರಬೇಕಿತ್ತು. ಆದರೆ ಒಮತದ ಅಭಿಪ್ರಾಯಗಳು ಕೇಳಿ ಬರದ ಹಿನ್ನೆಲೆಯಲ್ಲಿ ಹೈಕಮಾಂಡ್‌ ವರಿಷ್ಠರು ಮತ್ತೊಮೆ ಪರಿಶೀಲನೆ ನಡೆಸಿ ಭಾನುವಾರ ಸಂಜೆ ಅಂತಿಮ ಪಟ್ಟಿ ರವಾನಿಸುವುದಾಗಿ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.

ನಾಲ್ಕು ದಿನಗಳ ಕಸರತ್ತಿನ ನಂತರವೂ ರಾಜ್ಯ ನಾಯಕರಿಗೆ ಸಚಿವ ಸಂಪುಟದ ಅಂತಿಮ ಪಟ್ಟಿಯನ್ನು ಜೊತೆಯಲ್ಲೇ ಬೆಂಗಳೂರಿಗೆ ತರಲು ಸಾಧ್ಯವಾಗದಿರುವುದು ಆಂತರಿಕ ಬೇಗುದಿಯ ಮುನ್ಸೂಚನೆ ನೀಡಿದೆ.ಪಕ್ಷ ನಿಷ್ಠರಿಗೆ, ವ್ಯಕ್ತಿಗತ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಕೆಲಸ ಮಾಡುವವರಿಗೆ, ನಾಯಕತ್ವದ ವಿರುದ್ಧ ಬೇಕಾಬಿಟ್ಟಿ ಮಾತನಾಡುವವರನ್ನು ಸಂಪುಟದಿಂದ ದೂರ ಇಡಬೇಕು ಎಂಬ ಷರತ್ತುಗಳನ್ನು ಹೈಕಮಾಂಡ್‌ ನಾಯಕರು ವಿಧಿಸಿದ್ದಾರೆ.

ಮುಂದಿನ ಒಂದುವರೆ ವರ್ಷಗಳ ಬಳಿಕ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಬೇಕಿರುವುದರಿಂದ ಸಂಪನೂಲ ವ್ಯಕ್ತಿಗಳಿಗೆ ಆದ್ಯತೆ ನೀಡಬೇಕು. ಪಕ್ಷ ನಿಷ್ಠೆ, ಆರ್ಥಿಕ ಸದೃಢತೆ, ಕ್ರಿಯಾಶೀಲ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದರಿಂದ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ವಿರುದ್ಧ ಪಬಲ ಹೋರಾಟ ನಡೆಸಲು ಸಾಧ್ಯವಾಗಲಿದೆ ಎಂದು ಡಿ.ಕೆ.ಶಿವಕುಮಾರ್‌ ಪ್ರತಿಪಾದಿಸಿದ್ದು, ಅದಕ್ಕನುಗುಣವಾಗಿ ಸಚಿವರ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಅವರು ಶೋಷಿತ ಅಹಿಂದ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ವಲಸಿಗರು, ಮೂಲ ನಿವಾಸಿಗಳು ಎಂದು ಬೇಧ ಭಾವ ಮಾಡಬಾರದು. ತಮನ್ನು ನಂಬಿ ಬಂದವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ಜಟಾಪಟಿ ವರಿಷ್ಠರಿಗೆ ತಲೆ ನೋವಾಗಿದೆ.

ಕೆ.ಸಿ.ವೇಣುಗೋಪಾಲ್‌ ಅವರ ಜೊತೆ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌ ಅವರು ಹಲವು ಸುತ್ತಿನವರೆಗೂ ಸಭೆ ನಡೆಸಿದ ಬಳಿಕವೂ ವಿಷಯ ಇತ್ಯರ್ಥ್ಯವಾಗದ ಹಿನ್ನೆಲೆಯಲ್ಲಿ ವರಿಷ್ಠರ ಸೂಚನೆ ಮೇರೆಗೆ ನಿನ್ನೆ ಮಧ್ಯಾಹ್ನ ಡಿ.ಕೆ.ಶಿವಕುಮಾರ್‌ ಕರ್ನಾಟಕ ಭವನಕ್ಕೆ ಭೇಟಿ ನೀಡಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದರು.

ರಾಜ್ಯದ ಮೂವರು ಪ್ರಮುಖ ನಾಯಕರು ದೆಹಲಿಯಲ್ಲೇ ಇದ್ದರೂ, ಒಬ್ಬರಿಗೊಬ್ಬರು ಸಂಧಿಸಿ ಸೌಹಾರ್ದಯುತ ಚರ್ಚೆ ನಡೆಸುವ ಪ್ರಯತ್ನಗಳಾಗಲಿಲ್ಲ. ಎಲ್ಲವನ್ನೂ ಹೈಕಮಾಂಡ್‌ ಮುಂದಿಟ್ಟು ಇತ್ಯರ್ಥ್ಯ ಪಡಿಸಿಕೊಳ್ಳುವ ಧೋರಣೆಗೆ ಅಂಟಿಕೊಂಡರು.

ಪರಿಸ್ಥಿತಿಯ ಗಂಭೀರತೆ ಅರಿತ ಹೈಕಮಾಂಡ್‌ ನಾಯಕರು ತಮದೇ ಆದ ಪಟ್ಟಿಯನ್ನು ಮುಂದಿಟ್ಟು ಸಚಿವ ಸಂಪುಟ ವಿಸ್ತರಣೆಯಲ್ಲಿ ಹಸ್ತಕ್ಷೇಪ ಮಾಡಿದೆ. ಸಂಪುಟ ರಚನೆ ಮುಖ್ಯಮಂತ್ರಿಯವರ ಪರಮಾಧಿಕಾರ ಎಂಬ ಹೇಳಿಕೆ ಪೇವಲಾಗುವಂತಹ ವಾತಾವರಣ ನಿರ್ಮಾಣವಾಗಿದೆ. ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಕಾಂಗ್ರೆಸ್‌‍ ಶಾಸಕರು ಇಂದು ಮತ್ತು ನಿನ್ನೆ ರಾಜ್ಯಕ್ಕೆ ಮರಳಿದ್ದಾರೆ.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಸೇರಿ ಮೂರು ಸ್ಥಾನಗಳು ಹಳೆ ಮೈಸೂರು ಭಾಗಕ್ಕೆ ದೊರೆತಿರುವುದರಿಂದ, ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮೂವರು ಮಹಿಳೆಯರಿಗೆ ಮಣೆ ಹಾಕಬೇಕು ಎಂಬ ನಿರ್ಣಯಗಳಾಗಿರುವುದಾಗಿ ತಿಳಿಸಲಾಗಿದೆ.

ಸಂಭವನೀಯರ ಪಟ್ಟಿ:
ವಿಜಯಾನಂದ ಕಾಶಪ್ಪನವರ್‌, ಅಪ್ಪಾಜಿ ನಾಡಗೌಡ, ಯಶವಂತರಾಯಗೌಡ ಪಾಟೀಲ, ಹಂಪನಗೌಡ ಬಾದರ್ಲಿ, ಶಿವರಾಜ ತಂಗಡಗಿ, ರಾಘವೇಂದ್ರ ಹಿಟ್ನಾಳ್‌, ಹೆಚ್‌.ಕೆ.ಪಾಟೀಲ್‌, ಸಂತೋಷ್‌ ಲಾಡ್‌, ಶ್ರೀನಿವಾಸ ಮಾನೆ, ಬಸವರಾಜ ನೀಲಣ್ಣನವರ್‌, ಜೆ.ಎನ್‌.ಗಣೇಶ್‌, ಟಿ.ರಘುಮೂರ್ತಿ, ಡಿ.ಜಿ.ಶಾಂತನಗೌಡ, ಎ.ಎಸ್‌‍.ಪೊನ್ನಣ್ಣ, ಪ್ರದೀಪ್‌ ಈಶ್ವರ್‌, ಕೆ.ಎಂ.ಶಿವಲಿಂಗೇಗೌಡ ಸಂಪುಟ ಸೇರುವವರ ಪಟ್ಟಿಯಲ್ಲಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಗಣೇಶ್‌ ಹುಕ್ಕೇರಿ, ಲಕ್ಷ್ಮೀ ಹೆಬ್ಬಾಳ್ಕರ್‌, ಪಿ.ಎಂ.ಅಶೋಕ್‌, ಶಿವಾನಂದ ಕೌಜಲಗಿ ನಡುವೆ ಪೈಪೋಟಿಯಿದೆ. ತುಮಕೂರು ಜಿಲ್ಲೆಯಿಂದ ಟಿ.ಬಿ.ಜಯಚಂದ್ರ/ ಕೆ.ಷಡಾಕ್ಷರಿ, ಶಿವಮೊಗ್ಗ ಜಿಲ್ಲೆಯಲ್ಲಿ ಬಿ.ಕೆ.ಸಂಗಮೇಶ್ವರ್‌/ ಮಧು ಬಂಗಾರಪ್ಪ/ ಬೇಳೂರು ಗೋಪಾಲಕೃಷ್ಣ ನಡುವೆ ಸ್ಪರ್ಧೆಯಿದೆ.

ಪ್ರಮುಖವಾಗಿ ಚಿಕ್ಕಮಗಳೂರು, ಕಲ್ಬರ್ಗಿ ಜಿಲ್ಲೆಗಳಲ್ಲಿ ಆಕಾಕ್ಷಿಗಳ ನಡುವೆ ಭಾರೀ ಪೈಪೋಟಿ ಇದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಟಿ.ಡಿ.ರಾಜೇಗೌಡ, ನಯನಾ ಮೋಟಮ, ಆರತಿಕೃಷ್ಣ, ಕೆ.ಎಸ್‌‍.ಆನಂದ ಸಂಪುಟ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ.

ಕಲ್ಬುರ್ಗಿ ಜಿಲ್ಲೆಯಲ್ಲಿ ಅಜಯ್‌ ಸಿಂಗ್‌/ ಕನೀಜ್‌ ಫಾತಿಮಾ ನಡುವೆ, ಕೋಲಾರ ಜಿಲ್ಲೆಯಲ್ಲಿ ಎಸ್‌‍.ಎನ್‌.ನಾರಾಯಣಸ್ವಾಮಿ/ಕೆ.ವೈ.ನಂಜೇಗೌಡ, ಮಂಡ್ಯ ಜಿಲ್ಲೆಯಲ್ಲಿ ಚಲುವರಾಯಸ್ವಾಮಿ/ಪಿ.ಎಂ. ನರೇಂದ್ರ ಸ್ವಾಮಿ/ ರಮೇಶ್‌ ಬಂಡಿಸಿದ್ದನೇಗೌಡ ನಡುವೆ ಪೈಪೋಟಿಯಿದೆ.
ವಿಧಾನ ಪರಿಷತ್‌ ಸದಸ್ಯರ ಪೈಕಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಸಂಪುಟ ಸೇರುವ ಸಾಧ್ಯತೆ ಇದೆ. ಸಲೀಂ ಅಹಮದ್‌ ಸಭಾಪತಿಯಾಗುವ ಸಾಧ್ಯತೆ ಇದೆ.

RELATED ARTICLES

Latest News