Homeರಾಜ್ಯತಮಿಳುನಾಡಿನವರು ಮಾತ್ರ ರೈತರೇ..? ಕರ್ನಾಟಕದವರು ರೈತರಲ್ಲವೇ : ಎಚ್‌ಡಿಕೆ ಆಕ್ರೋಶ

ತಮಿಳುನಾಡಿನವರು ಮಾತ್ರ ರೈತರೇ..? ಕರ್ನಾಟಕದವರು ರೈತರಲ್ಲವೇ : ಎಚ್‌ಡಿಕೆ ಆಕ್ರೋಶ

ಹಾಸನ,ಜು.31- ತಮಿಳುನಾಡಿನ ರಾಜ್ಯದವರು ಮಾತ್ರ ರೈತರು. ಕರ್ನಾಟಕ ರಾಜ್ಯದಲ್ಲಿರುವವರು ರೈತರಲ್ಲವೇ? ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ 15 ದಿನಗಳ ಕಾಲ 3,500 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡು ವಂತೆ ಸಿಡಬ್ಲ್ಯೂಆರ್‌ಸಿ ಮತ್ತು ಸಿಡಬ್ಲ್ಯೂ ಎಂಎ ಆದೇಶಿಸಿದ್ದು, ಇದು ವಾಸ್ತವಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.

ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ತೀರ್ಪು ನೀಡುವುದಲ್ಲ. ಕರ್ನಾಟಕದ ಕಾವೇರಿ ನದಿಪಾತ್ರದ ಜಲಾಶಯಗಳಲ್ಲಿ ಎಷ್ಟು ನೀರು ಸಂಗ್ರಹವಾಗಿದೆ. ತಮಿಳುನಾಡಿನ ಮೆಟ್ಟೂರು, ಭವಾನಿ ಜಲಾಶಯಗಳಲ್ಲಿ ಎಷ್ಟು ನೀರಿದೆ ಎಂಬುದನ್ನು ಖುದ್ದು ಸ್ಥಳ ಪರಿಶೀಲನೆ ಮಾಡಿ ನೋಡಬೇಕು ಎಂದು ಅವರು ಆಗ್ರಹಿಸಿದರು.

ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಆ ನಿಟ್ಟಿನಲ್ಲಿ ಎರಡೂ ರಾಜ್ಯಗಳ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣವನ್ನು ಪರಿಶೀಲಿಸಿದ ನಂತರ ತೀರ್ಪು ನೀಡಬೇಕಿತ್ತು. ಆದರೆ ಆ ರೀತಿ ಮಾಡಿಲ್ಲ. ರಾಜ್ಯಸರ್ಕಾರ ಇಂತಹ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ರಾಜ್ಯದ ಹಿತ ಕಾಪಾಡಲು ಒತ್ತಾಯ ಮಾಡಬೇಕಿದೆ ಎಂಬ ಸಲಹೆ ಮಾಡಿದರು.

ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು 30 ಟಿಎಂಸಿ ನೀರು ಬೇಕಿದೆ. ಪರಿಸರ ರಕ್ಷಣೆಗೆ 10 ಟಿಎಂಸಿ ನೀರು ಬೇಕು. ಆದರೂ ಇನ್ನು ಮುಂದೆ 12 ಟಿಎಂಸಿ ಮಳೆ ನೀರಿನಿಂದ ಸಂಗ್ರಹವಾಗುವುದು ಎಂಬ ಆಧಾರದ ಮೇಲೆ ಸಿಡಬ್ಲ್ಯೂಎಂಎ ಆದೇಶ ನೀಡಿರುವುದು ಸರಿಯಲ್ಲ ಎಂದರು.

ಕರ್ನಾಟಕದ ರೈತರಿಗೆ ಬೆಳೆ ಬೆಳೆಯಲು ನೀರು ಬಿಡುತ್ತಿಲ್ಲ. ಆದರೂ ನಮ ರೈತರ ಬದುಕು ಹಾಳು ಮಾಡಿ ತಮಿಳುನಾಡು ರೈತರಿಗೆ ನೀರು ಕೊಡಿ ಎಂದು ಹೇಳಿದರೆ ಹೇಗೆ ಸಾಧ್ಯ ಎಂದು ರಾಜ್ಯಸರ್ಕಾರ ಪ್ರಶ್ನಿಸಬೇಕು. ಭಾರತ ಒಕ್ಕೂಟ ವ್ಯವಸ್ಥೆ ಹೆಸರಿನಲ್ಲಿ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿಯವರು ಕರೆದಿರುವ ಸರ್ವಪಕ್ಷಗಳ ಸಭೆಯಲ್ಲಿ ನಾಡಿನ ಹಾಗೂ ರೈತರ ಹಿತಕ್ಕಾಗಿ ನಾನು ಭಾಗವಹಿಸುತ್ತೇನೆ ಎಂದು ಹೇಳಿದರು.

ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಪರಿಶೀಲನೆ ಮಾಡಿ ಎಂದು ವಾಪಸ್ಸು ಕಳುಹಿಸಲಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಜಲಶಕ್ತಿ ಸಚಿವರಿಗೆ 2-3 ಬಾರಿ ಪತ್ರ ಬರೆದು ಮನವಿ ಮಾಡಿದ್ದಾರೆ. ಯಾವ ರೀತಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂಬ ಬಗ್ಗೆ ಸಲಹೆ ಮಾಡಿದ್ದಾರೆ. ನಾನೂ ಕೂಡಾ ಪತ್ರ ಬರೆದು ಸಚಿವರನ್ನು ಭೇಟಿಯಾಗಿ ಸಲಹೆ ನೀಡುತ್ತೇನೆ ಎಂದರು.

30 ಟಿಎಂಸಿ ನೀರನ್ನು ಹಿಡಿದಿಟ್ಟುಕೊಳ್ಳಲು ಕಾವೇರಿ ನ್ಯಾಯಾಧೀಕರಣ ಅನುಮತಿ ನೀಡಿದೆ. ಹೀಗಾಗಿ ರಾಜ್ಯಸರ್ಕಾರ ತಕ್ಷಣವೇ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ಸುಪ್ರೀಂಕೋರ್ಟ್‌ನಲ್ಲಿ ನಾವು ನಾಲ್ಕು ರಾಜ್ಯಗಳಿಗೆ ನ್ಯಾಯಾಧಿಕರಣ ನೀರು ಹಂಚಿಕೆ ಮಾಡಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದೆವು. 2018 ರಲ್ಲಿ ನಾನು ಮತ್ತೆ ಮುಖ್ಯಮಂತ್ರಿಯಾಗಿದ್ದಾಗ 14 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಮಾಡಲಾಗಿದ್ದು, ಅದರಲ್ಲಿ 4.5 ಟಿಎಂಸಿ ನೀರನ್ನು ಬೆಂಗಳೂರಿಗೆ ಹಂಚಿಕೆ ಮಾಡಲಾಗಿತ್ತು ಎಂದರು.

ನಮ ನೀರು, ನಮ ಹಕ್ಕು ಎಂದು ಪಾದಯಾತ್ರೆ ಮಾಡಿದ ನೀವು ಕಾಲಾಹರಣ ಮಾಡದೇ ರಾಜಕೀಯ ಬಿಟ್ಟು ಮೇಕೆದಾಟು ಯೋಜನಾ ವರದಿಯನ್ನು ಸಿದ್ಧಪಡಿಸಿ ಕೇಂದ್ರಸರ್ಕಾರಕ್ಕೆ ಸಲ್ಲಿಸಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಬರದಿಂದ ರಾಜ್ಯ ಕಂಗೆಟ್ಟಿದ್ದು, ಯಾವುದೋ ಜಾಗಕ್ಕೆ ಹೋಗಿ ಫೋಟೊಶೂಟ್‌ ಮಾಡಿಕೊಂಡರೆ ಸಾಲದು. 2 ವರ್ಷ ನಿಮ ಗ್ಯಾರಂಟಿಗಳನ್ನು ನಿಲ್ಲಿಸಿಯಾದರೂ ಈ ಯೋಜನೆ ಕಾರ್ಯಗತಗೊಳಿಸಿ. ಮಂತ್ರಿಮಂಡಲ ಹೆಸರಿನಲ್ಲಿ ಇಡೀ ಸರ್ಕಾರ ದೆಹಲಿಯಲ್ಲಿದೆ. ರೈತರು ಸಂಕಷ್ಟದಲ್ಲಿದ್ದು, ಜಾನುವಾರುಗಳು ಸತ್ತರೂ ಪರಿಹಾರ ಕೊಡಲು ಹಣವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಉದ್ಯೋಗ ಅರಸಿ ಜನ ಗುಳೇ ಹೋಗುತ್ತಿದ್ದಾರೆ ಎಂದ ಅವರು, ನಿಮ ರಾಜಕೀಯ ಶಕ್ತಿ ಹೆಚ್ಚಿಸಿಕೊಳ್ಳಲು ರಾಜಕೀಯ ಪಕ್ಷಗಳು ಆಟ ಆಡುವುದನ್ನು ನಿಲ್ಲಿಸಬೇಕು ಎಂದು ತಮಿಳುನಾಡಿನ ಮುಖ್ಯಮಂತ್ರಿಗೆ ನಮ ಮುಖ್ಯಮಂತ್ರಿ ಹೇಳಬೇಕು ಎಂದು ಆಗ್ರಹಿಸಿದರು.ಬಂದ್‌ ಮಾಡುವುದರಿಂದ ನಮಗೆ ಅನಾನುಕೂಲವಾಗಲಿದ್ದು, ತಮಿಳುನಾಡಿಗೆ ಏನೂ ಆಗುವುದಿಲ್ಲ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಹೋರಾಟ ಮಾಡೋಣ. ಅದಕ್ಕೆ ನನ್ನ ಬೆಂಬಲವಿದೆ ಎಂದು ಅವರು ಹೇಳಿದರು.

RELATED ARTICLES

Latest News