ಬೆಂಗಳೂರು,ಆ.1- ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಇದೀಗ ಆಂತರಿಕ ರಾಜಕೀಯ ಬಿರುಗಾಳಿ ಎದ್ದಿದೆ. ಪಕ್ಷದ ಪ್ರಮುಖ ನಾಯಕರನ್ನು ದೆಹಲಿಯಲ್ಲಿ ಸತತ ನಾಲ್ಕು ದಿನಗಳ ಕಾಲ ಕಾಯುವಂತೆ ಮಾಡಿರುವುದು, ರಾಜ್ಯ ಕಾಂಗ್ರೆಸ್ ವಲಯದಲ್ಲಿ ತೀವ್ರ ಅಸಮಾಧಾನ ಮತ್ತು ಮುಖಭಂಗಕ್ಕೆ ಕಾರಣವಾಗಿದೆ. ಪ್ರಜಾಸತ್ತಾತಕವಾಗಿ ಜನಾದೇಶ ಪಡೆದು ಅಧಿಕಾರ ನಡೆಸುತ್ತಿರುವ ಸರ್ಕಾರವನ್ನು ಹೈಕಮಾಂಡ್ ನಡೆಸಿಕೊಳ್ಳುತ್ತಿರುವ ರೀತಿ ರಾಜ್ಯದ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಕಳೆದ ಕೆಲವು ದಿನಗಳಿಂದ ದೆಹಲಿ ರಾಜಕೀಯದ ಕಾರಿಡಾರ್‌ನಲ್ಲಿ ಉನ್ನತ ನಾಯಕರ ಭೇಟಿಗಾಗಿ ಕಸರತ್ತು ನಡೆಸಲಾಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸತ್ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಪ್ರಿಯಾಂಕಾ ಗಾಂಧಿ ಅವರ ಬಳಿಗೆ ರಾಜ್ಯದಿಂದ ತೆರಳಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಲೆದಾಡುವಂತಾಗಿದೆ. ಯಾರನ್ನು ಸಂಪುಟಕ್ಕೆ ಸೇರಿಸಬೇಕು, ಯಾರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬ ಬಗ್ಗೆ ಪ್ರತ್ಯೇಕ ಪಟ್ಟಿಗಳನ್ನು ಹಿಡಿದು ನಾಯಕರು ಹೈಕಮಾಂಡ್ ಕದ ತಟ್ಟುತ್ತಿದ್ದರೂ, ಸಕಲ ನಿರ್ಧಾರ ಕೈಗೊಳ್ಳದೆ ದಿನಗಳಟ್ಟಲೆ ಕಾಯಿಸಿರುವುದು ಸ್ಥಳೀಯ ನಾಯಕರಲ್ಲಿ ತೀವ್ರ ನಿರಾಶೆಯನ್ನು ಮೂಡಿಸಿದೆ.
ರಾಜ್ಯದಲ್ಲಿ ಜನಾದೇಶ ಪಡೆದು ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಆಡಳಿತ ಹಾಗೂ ಪಕ್ಷದ ಆಂತರಿಕ ವಿಚಾರಗಳಲ್ಲಿ ಹೈಕಮಾಂಡ್ ಹಸ್ತಕ್ಷೇಪ ಮತ್ತು ನಾಯಕರ ಧೋರಣೆಯು ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಪ್ರಮುಖವಾಗಿ ಸಂಸತ್ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕೆಲವು ನಿರ್ಧಾರಗಳು ಮತ್ತು ನಡೆಗಳು ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿವೆ ಎಂಬ ವರದಿಗಳು ರಾಜಕೀಯ ದೋಷಾರೋಪಣೆಗಳಿಗೆ ಮುನ್ನುಡಿ ಬರೆದಿವೆ.
ಕರ್ನಾಟಕದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ತನ್ನದೇ ಆದ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಹಾಗೂ ಜನಪರ ಆಡಳಿತ ನೀಡುವುದರಲ್ಲಿ ಸ್ವಾವಲಂಬನೆಯನ್ನು ಬಯಸುತ್ತದೆ. ಆದರೆ, ದೆಹಲಿ ವರಿಷ್ಠರ ಮಟ್ಟದಿಂದ, ನಿರ್ದಿಷ್ಟವಾಗಿ ರಾಹುಲ್ ಗಾಂಧಿ ಅವರ ಕಡೆಯಿಂದ ನಡೆಯುವ ಅನಗತ್ಯ ಹಸ್ತಕ್ಷೇಪಗಳು ಹಾಗೂ ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಬಹಿರಂಗವಾಗಿ ಅಥವಾ ಆಂತರಿಕ ಸಭೆಗಳಲ್ಲಿ ತಳಮಟ್ಟದಿಂದ ವಿಮರ್ಶಿಸುವುದು ಜನಾದೇಶ ಪಡೆದ ಸರ್ಕಾರಕ್ಕೆ ಮಾಡಲಾದ ಅವಮಾನ ಎಂದು ರಾಜ್ಯದ ಕೆಲ ಹಿರಿಯ ನಾಯಕರು ಹಾಗೂ ಸ್ವತಃ ಶಾಸಕರೇ ಆಂತರಿಕವಾಗಿ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಪಕ್ಷದ ಉನ್ನತ ಮಟ್ಟದಲ್ಲಿಯೂ ಸಮನ್ವಯದ ಕೊರತೆ ಎದ್ದು ಕಾಣುತ್ತಿದ್ದು, ನಾಯಕರ ನಡುವೆ ಒಮತದ ಅಭಿಪ್ರಾಯ ಮೂಡುತ್ತಿಲ್ಲ ಎಂಬುದು ಸುಳ್ಳಲ್ಲ. ಪಕ್ಷದ ವಲಯದಲ್ಲಿ ಕೇಳಿಬರುತ್ತಿರುವ ಮಾಹಿತಿಯಂತೆ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಕೇಂದ್ರೀಯ ನಾಯಕತ್ವದ ನಿರ್ಧಾರಗಳ ಶೈಲಿ, ಸಂಘಟನಾ ಕಾರ್ಯಗಳಲ್ಲಿ ಪ್ರಮುಖರಾದ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ಅವರ ರಾಜ್ಯ ರಾಜಕಾರಣದ ಮೇಲಿನ ಅತಿಹೆಚ್ಚು ಪ್ರಭಾವ ಹಾಗೂ ನಿರ್ಬಂಧಗಳು.
ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಲವರ್ಧನೆಗೆ ಕೇಂದ್ರದ ಕೆಲವು ನಡೆಗಳು ಅಡ್ಡಿಯಾಗುತ್ತಿವೆ ಎಂಬ ಗುಸುಗುಸು. ಇತ್ತ ಪ್ರಿಯಾಂಕಾ ಗಾಂಧಿ ಅವರ ಪಾತ್ರದ ಕುರಿತೂ ಪಕ್ಷದ ಒಳಗೇ ಭಿನ್ನಾಭಿಪ್ರಾಯದ ಮಾತುಗಳು ಕೇಳಿಬರುತ್ತಿದ್ದು, ಪ್ರತಿಯೊಬ್ಬ ನಾಯಕರಿಗೂ ಒಂದೊಂದು ಪ್ರತ್ಯೇಕ ನಿಲುವು ಹಾಗೂ ಪಟ್ಟಿಗಳಿವೆ ಎಂಬುದು ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ.
ಕರ್ನಾಟಕದಲ್ಲಿ ಸರ್ಕಾರ ರಚನೆಯ ಸಂದರ್ಭದಲ್ಲೂ ಇದೇ ರೀತಿಯ ಹೈಕಮಾಂಡ್ ಹಗ್ಗಜಗ್ಗಾಟ ನಡೆದಿತ್ತು. ಐತಿಹಾಸಿಕ ಜನಾದೇಶ ಸಿಕ್ಕರೂ ಮುಖ್ಯಮಂತ್ರಿ ಗದ್ದುಗೆಯ ನಿರ್ಧಾರಕ್ಕಾಗಿ ನಾಯಕರು ದಿನಗಟ್ಟಲೆ ದೆಹಲಿಯಲ್ಲಿ ಕಾದು ಕುಳಿತುಕೊಳ್ಳಬೇಕಾಗಿ ಬಂದಿತು.
ಇತಿಹಾಸ ಮರುಕಳಿಸಿದಂತೆ ಈಗಲೂ ಆಡಳಿತಾತಕ ನಿರ್ಣಯಗಳು ಹಾಗೂ ಸಂಪುಟ ಪುನಾರಚನೆ ವಿಚಾರದಲ್ಲಿ ದೆಹಲಿಯ ಕೃಪಾಕಟಾಕ್ಷಕ್ಕಾಗಿ ಕಾಯುವ ದುಃಸ್ಥಿತಿ ಮುಂದುವರಿದಿದ್ದು, ಇದು ರಾಜ್ಯ ಸ್ವಾವಲಂಬಿ ರಾಜಕಾರಣಕ್ಕೆ ದೊಡ್ಡ ಪೆಟ್ಟು ನೀಡಿದೆ ಎಂಬುದು ಹಿರಿಯ ನಾಯಕರ ಅಳಲು.
ಹಿಂದಿನ ಘಟನೆಗಳ ಹಿನ್ನೆಲೆ ಹಾಗೂ ಸದ್ಯದ ವಾಸ್ತವಿಕತೆ :
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಮುಖ್ಯಮಂತ್ರಿ ಆಯ್ಕೆ, ಸಂಪುಟ ರಚನೆ ಹಾಗೂ ಪ್ರಮುಖ ನಿರ್ಧಾರಗಳ ಪ್ರತಿಯೊಂದು ಹಂತದಲ್ಲೂ ದೆಹಲಿ ನಾಯಕರ ಅಂತಿಮ ಅನುಮೋದನೆಗೆ ಕಾಯುವುದು ಅನಿವಾರ್ಯವಾಗಿದೆ. ಈ ಹಿಂದೆ ಸರ್ಕಾರ ರಚನೆಯ ವೇಳೆಯಲ್ಲೂ ಹೈಕಮಾಂಡ್ ಅಂಗಳದಲ್ಲಿ ಸರಣಿ ಸಭೆಗಳು ನಡೆದು ದಿನಗಟ್ಟಲೆ ನಿರ್ಧಾರ ವಿಳಂಬವಾಗಿತ್ತು.
ಇದೀಗ ಸಂಪುಟ ವಿಸ್ತರಣೆಯ ಸನ್ನಿವೇಶದಲ್ಲೂ ಅದೇ ಪರಿಸ್ಥಿತಿ ಪುನರಾವರ್ತನೆಯಾಗುತ್ತಿದ್ದು, ಪ್ರಭಾವಿ ನಾಯಕರ ನಡುವಿನ ಪಟ್ಟಿ ಸಮರ ಮತ್ತು ಹೈಕಮಾಂಡ್ ವಿಳಂಬ ನೀತಿ ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಹೈಕಮಾಂಡ್ ಶೀಘ್ರದಲ್ಲೇ ಮಧ್ಯಪ್ರವೇಶಿಸಿ ಅಂತಿಮ ಪಟ್ಟಿಗೆ ಅಂಕಿತ ಹಾಕಲಿದೆಯೇ ಅಥವಾ ಈ ಸಚಿವ ಸಂಪುಟ ವಿಸ್ತರಣೆ ಕಸರತ್ತು ಮತ್ತಷ್ಟು ದಿನ ಮುಂದೂಡಲ್ಪಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಪ್ರತಿಪಕ್ಷಗಳ ವಾಗ್ದಾಳಿ :
ರಾಜ್ಯದ ಆಂತರಿಕ ನಿರ್ಧಾರಗಳಿಗೂ ದೆಹಲಿ ನಾಯಕರ ಅನುಮತಿ ಕಡ್ಡಾಯವಾಗಿರುವುದು ಮತ್ತು ಜನಾದೇಶ ಪಡೆದ ಮಾಜಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಹೈಕಮಾಂಡ್ ನಡೆಸಿಕೊಳ್ಳುತ್ತಿರುವ ಧೋರಣೆಯನ್ನು ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿವೆ.
ಈ ರೀತಿ ಹೈಕಮಾಂಡ್‌ನ ಪ್ರತಿಯೊಬ್ಬ ಶೀರ್ಷ ನಾಯಕರೂ ಭಿನ್ನ ಹೆಸರುಗಳನ್ನು ಪ್ರಸ್ತಾಪಿಸುತ್ತಿರುವುದರಿಂದ ಅಂತಿಮ ಪಟ್ಟಿ ತಯಾರಿಸುವುದು ಕಂಟಕಪ್ರಾಯವಾಗಿದೆ.
ರಾಜ್ಯ ನಾಯಕರ ಈ ದೆಹಲಿ ದಂಡಯಾತ್ರೆ ಮತ್ತು ರಾಹುಲ್ ಗಾಂಧಿ ಅವರ ವಿಳಂಬ ನೀತಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ಗೆ ಪ್ರಬಲ ರಾಜಕೀಯ ಅಸ್ತ್ರವಾಗಿ ಸಿಕ್ಕಿದೆ.
ಕರ್ನಾಟಕದ ಜನತೆ ಆಡಳಿತಕ್ಕಾಗಿ ಸ್ಪಷ್ಟ ಬಹುಮತ ನೀಡಿದ್ದರೆ, ಕಾಂಗ್ರೆಸ್ ನಾಯಕರು ಮಾತ್ರ ದೆಹಲಿಯ ದರ್ಬಾರಿಗೆ ಶರಣಾಗಿದ್ದಾರೆ. ಇದು ಕನ್ನಡಿಗರ ಜನಾದೇಶಕ್ಕೆ ಮತ್ತು ರಾಜ್ಯದ ಸ್ವಾಭಿಮಾನಕ್ಕೆ ಬಗೆದ ದೊಡ್ಡ ಅಪಮಾನ ಎಂದು ಪ್ರತಿಪಕ್ಷಗಳು ಮುಗಿಬಿದ್ದಿವೆ.
ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಗಳಿಸಿರುವ ಜನಾದೇಶಿತ ಸರ್ಕಾರವನ್ನು ದೆಹಲಿ ಹೈಕಮಾಂಡ್ ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಹಿರಿಯ ನಾಯಕರನ್ನು ದೆಹಲಿಯ ಬೀದಿಗಳಲ್ಲಿ 4 ದಿನ ಕಾಯಿಸಿರುವುದು ಕನ್ನಡಿಗರಿಗೆ ಹಾಗೂ ರಾಜ್ಯದ ಜನಾದೇಶಕ್ಕೆ ಮಾಡಿದ ಘೋರ ಅಪಮಾನ.
ಆಡಳಿತ ಯಂತ್ರವನ್ನು ಬದಿಗಿಟ್ಟು ಸಚಿವ ಸ್ಥಾನಕ್ಕಾಗಿ ದೆಹಲಿ ಅಂಗಳದಲ್ಲಿ ಪ್ರದಕ್ಷಿಣೆ ಹಾಕುತ್ತಿರುವ ಕಾಂಗ್ರೆಸ್ ನಾಯಕರ ನಡೆಯನ್ನು ವಿಪಕ್ಷಗಳು ತೀವ್ರವಾಗಿ ಟೀಕಿಸುತ್ತಿವೆ.
