Homeರಾಜ್ಯಪೊಲೀಸ್‌‍ ಕಾನ್‌ಸ್ಟೇಬಲ್‌ ನೇಮಕಾತಿ ಪರೀಕ್ಷೆ : ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮಗಳೇನು..?

ಪೊಲೀಸ್‌‍ ಕಾನ್‌ಸ್ಟೇಬಲ್‌ ನೇಮಕಾತಿ ಪರೀಕ್ಷೆ : ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮಗಳೇನು..?

Police Constable Recruitment Exam: Guidelines for Candidates

ಬೆಂಗಳೂರು, ಆ.1: ಪೊಲೀಸ್‌‍ ಕಾನ್ಸ್ ಟೆಬಲ್‌ ಗಳ ನೇಮಕಾತಿಗಾಗಿ ನಾಳೆ ನಡೆಯಲಿರುವ ಸ್ಪರ್ಧಾತಕ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳು ತರಬಹುದಾದ ಹಾಗೂ ತರಬಾರದ ವಸ್ತುಗಳ ಕುರಿತು ಸಮಗ್ರ ಮಾರ್ಗಸೂಚಿ ಪ್ರಕಟಿಸಿದೆ.

ಪ್ರಾಧಿಕಾರ ಬಿಡುಗಡೆ ಮಾಡಿರುವ ಸೂಚನೆಯ ಪ್ರಕಾರ, ಪರೀಕ್ಷಾ ಕೇಂದ್ರಗಳಲ್ಲಿ ಎಲೆಕ್ಟ್ರಾನಿಕ್‌ ಸಾಧನಗಳು, ಆಹಾರ ಪದಾರ್ಥಗಳು, ಬರವಣಿಗೆ ಸಾಮಗ್ರಿಗಳು ಹಾಗೂ ಕೆಲವು ರೀತಿಯ ಉಡುಪು ಮತ್ತು ಪರಿಕರಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೆಇಎ ಸೂಚಿಸಿದೆ.

ಎಲೆಕ್ಟ್ರಾನಿಕ್‌ ಉಪಕರಣ ನಿಷೇಧ: ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್‌ ಫೋನ್‌, ಸಾರ್ಟ್‌ ವಾಚ್‌, ಬ್ಲೂಟೂತ್‌ ಸಾಧನಗಳು, ಇಯರ್‌ಫೋನ್‌, ಕ್ಯಾಲ್ಕುಲೇಟರ್‌, ಪೆನ್‌ ಡ್ರೈವ್‌, ಕ್ಯಾಮೆರಾ, ಮೈಕ್ರೋಫೋನ್‌, ಮೈಕ್ರೋಚಿಪ್‌, ಬ್ಲೂಟೂತ್‌, ಸ್ಕ್ಯಾನರ್‌, ವೈರ್‌ಲೆಸ್‌‍ ಸಂವಹನ ಸಾಧನಗಳು ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ತರಲು ಅವಕಾಶ ಇರುವುದಿಲ್ಲ.

ಆಹಾರ ಪದಾರ್ಥ ನಿಷೇಧ:
ತಂಪು ಪಾನೀಯಗಳು, ನೀರಿನ ಬಾಟಲಿಗಳು, ಆಹಾರ ಪದಾರ್ಥಗಳು, ಸಿಹಿ ತಿಂಡಿಗಳು, ಚಾಕೊಲೇಟ್‌, ಬಿಸ್ಕತ್‌ ಸೇರಿದಂತೆ ಯಾವುದೇ ಆಹಾರ ವಸ್ತುಗಳನ್ನು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ಬರವಣಿಗೆ ಸಾಮಗ್ರಿಗಳ ಪೈಕಿ ಬರೆದಿಟ್ಟುಕೊಂಡಿರುವ ಅಥವಾ ಪ್ರಿಂಟ್‌ ಇರುವ ಚೀಟಿಗಳು, ಪುಸ್ತಕಗಳು, ಜಾಮಿಟ್ರಿ ಬಾಕ್ಸ್ , ಪೆನ್ಸಿಲ್‌ ಬಾಕ್ಸ್ , ಪ್ಲಾಸ್ಟಿಕ್‌ ಪೌಚ್‌, ಸ್ಕೇಲ್‌, ಬರೆಯುವ ಪೇಪರ್‌, ಎರೇಸರ್‌, ಲಾಗ್‌ ಟೇಬಲ್‌ ಇತ್ಯಾದಿ ಪರಿಕರಗಳನ್ನು ಸಹ ಪರೀಕ್ಷಾ ಕೇಂದ್ರಕ್ಕೆ ತರಬಾರದು ಎಂದು ತಿಳಿಸಲಾಗಿದೆ.

ಡ್ರೆಸ್‌‍ಕೋಡ್‌ ಪಾಲಿಸಿ:
ಉಡುಪುಗಳ ವಿಚಾರದಲ್ಲಿಯೂ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಶೂಗಳು ಅಥವಾ ಬೂಟುಗಳು, ಕ್ಯಾಪ್‌, ಮುಖ ಮುಚ್ಚುವಂತಹ ಯಾವುದೇ ಉಡುಪುಗಳು, ಬ್ಯಾಗ್‌ಗಳು, ಪರ್ಸ್‌, ಹೆಚ್ಚು ಜೇಬುಗಳಿರುವ ಪ್ಯಾಂಟ್‌ ಗಳಿಗೆ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ.

ಇದೇ ವೇಳೆ ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳು ಕಡ್ಡಾಯವಾಗಿ ತರಬೇಕಾದ ದಾಖಲೆಗಳ ಪಟ್ಟಿಯನ್ನೂ ಪ್ರಾಧಿಕಾರ ಪ್ರಕಟಿಸಿದೆ. ಅಭ್ಯರ್ಥಿಗಳು ತಮ ಪ್ರವೇಶ ಪತ್ರ, ಮೂಲ ಗುರುತಿನ ಚೀಟಿ ಹಾಗೂ ಅದರಲ್ಲಿರುವ ವಿವರಗಳಿಗೆ ಹೊಂದುವ ಮೂಲ ಗುರುತಿನ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು.

ಪರೀಕ್ಷಾ ದಿನದಂದು ಅಭ್ಯರ್ಥಿಗಳು ಸಮಯಕ್ಕಿಂತ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಬೇಕು. ಗುರುತು ಹಾಗೂ ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಮಾತ್ರ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡಲಾಗುತ್ತದೆ.ಪುರುಷರು ಮತ್ತು ಮಹಿಳೆಯರು ಧರಿಸಬಹುದಾದ ಉಡುಪುಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಪುರುಷರು ಜನಿವಾರ, ಶಿವದಾರ-ಲಿಂಗ, ಉಡುದಾರ, ತಾಯತ, ರುದ್ರಾಕ್ಷಿ, ಕೈಗೆ ಕಟ್ಟುವ ಧಾರ್ಮಿಕ ಕ್ಷೇತ್ರದ ದಾರಗಳನ್ನು ಧರಿಸಲು ಅವಕಾಶ ಇದೆ.

ಮಹಿಳೆಯರು, ವಿದ್ಯಾರ್ಥಿನಿಯರು ಮಾಂಗಲ್ಯ ಸರ, ಕೈ ಬಳೆಗಳು, ಮೂಗುತಿ, ಕಾಲುಂಗುರ, ಕಾಲುಗೆಜ್ಜೆ, ಕುಂಕುಮ-ಹಣೆಬಟ್ಟು, ಉಂಗುರ ಧರಿಸಲು ಅವಕಾಶ ಇದೆ.ಕೆಲವು ಸಮುದಾಯದ ವಿದ್ಯಾರ್ಥಿಗಳು ಧಾರ್ಮಿಕ ಉಡುಪುಗಳನ್ನು ಧರಿಸಿಕೊಂಡು ಪರೀಕ್ಷೆ ಬರೆಯಲು ಇಚ್ಛಿಸಿದಲ್ಲಿ, ಪರೀಕ್ಷೆ ಆರಂಭಕ್ಕೆ 2.30 ಗಂಟೆಗೆ ಮೊದಲು ಪರೀಕ್ಷಾ ಕೇಂದ್ರದ ವಸ್ತ್ರ ಸಂಹಿತೆ ಅಧಿಕಾರಿ ಮುಂದೆ ಹಾಜರಾಗಬೇಕು.

ವಸ್ತ್ರ ಸಂಹಿತೆ ಅಧಿಕಾರಿ ಪ್ರತ್ಯೇಕ ಕೊಠಡಿಯಲ್ಲಿ ನಿಯಮಾನುಸಾರ ತಪಾಸಣೆಗೆ ಒಳಪಡಿಸಿ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡುತ್ತಾರೆ ಎಂದು ತಿಳಿಸಲಾಗಿದೆ. ಕೆಇಎ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪರೀಕ್ಷೆಗಳು ಪಾರದರ್ಶಕ ಹಾಗೂ ಸುಗಮವಾಗಿ ನಡೆಯಲು ಸಹಕರಿಸುವಂತೆ ಪ್ರಾಧಿಕಾರ ಅಭ್ಯರ್ಥಿಗಳಿಗೆ ಗೃಹ ಇಲಾಖೆ ಮನವಿ ಮಾಡಿದೆ.

RELATED ARTICLES

Latest News