ಬೆಂಗಳೂರು, ಆ.3- ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಹೈಕಮಾಂಡ್ ಸಮತಿಸಿದ್ದು, ಇಂದು ಸಂಜೆ 4.05 ನಿಮಿಷಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಹುದ್ದೆಗಳ ಸೃಷ್ಟಿಗೆ ನಿರಾಕರಿಸಿದೆ. ಸಂಪುಟದಲ್ಲಿ ಖಾಲಿಯಿರುವ 20 ಸ್ಥಾನಗಳಿಗೂ ಏಕಕಾಲಕ್ಕೆ ಸಂಪುಟ ವಿಸ್ತರಣೆಯಾಗಲಿದೆ.
ಇಂದು ಬೆಳಗ್ಗೆ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ವರಿಷ್ಠ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮನೆಯಲ್ಲಿ ಸಭೆ ಸೇರಿದರು. ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಅವರು ಸಭೆ ನಡೆಸಿ ಅಂತಿಮ ಸುತ್ತಿನ ಚರ್ಚೆಯ ಬಳಿಕ ನೂತನ ಸಚಿವರ ಪಟ್ಟಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರವಾನಿಸಿದ್ದಾರೆ.
ಜೂನ್ 3ರಂದು ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದರು. ಅವರ ಜೊತೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಇತರ 12 ಮಂದಿ ಸಚಿವ ಸಂಪುಟ ಸೇರಿದ್ದರು. ಇಂದಿಗೆ ಬರೋಬರಿ ಎರಡು ತಿಂಗಳಾಗಿದೆ. ಕಳೆದ 20 ದಿನಗಳಿಂದಲೂ ಸಂಪುಟ ವಿಸ್ತರಣೆಗಾಗಿ ಬೆಂಗಳೂರು, ದೆಹಲಿಯಲ್ಲಿ ನಾನಾ ರೀತಿಯ ಕಸರತ್ತುಗಳಾಗಿವೆ. ಕಳೆದ ಜೂನ್ 30ರಂದು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರನ್ನು ದೆಹಲಿಗೆ ಕರೆಸಿಕೊಂಡು ಚರ್ಚೆ ನಡೆಸಿತ್ತು.
ಆದರೆ ಪಟ್ಟಿಯನ್ನು ಅಖೈರುಗೊಳಿಸದೇ ಸೋಮವಾರ ಕಳುಹಿಸುವುದಾಗಿ ತಿಳಿಸಿತ್ತು. ಅದರಂತೆ ಬೆಂಗಳೂರಿನ ಲೋಕಭವನದಲ್ಲಿ ಪ್ರಮಾಣವಚನ ಸ್ವೀಕಾರಕ್ಕೆ ಎಲ್ಲಾ ತಯಾರಿಗಳಾಗಿವೆ. ಆದರೆ ನೂತನ ಸಚಿವರ ಪಟ್ಟಿಯೇ ಸಿದ್ಧವಿರಲಿಲ್ಲ ಮತ್ತು ಸಚಿವರಾಗುವವರಿಗೂ ಯಾವುದೇ ಮಾಹಿತಿ ಇರಲಿಲ್ಲ. ಆದರೆ ಸುಮಾರು 11 ಗಂಟೆ ವೇಳೆಗೆ ಹೈಕಮಾಂಡ್ ಪಟ್ಟಿ ರವಾನಿಸಿದ್ದು, ಅದನ್ನು ಮುಖ್ಯಮಂತ್ರಿಯವರು ಮುಖ್ಯ ಕಾರ್ಯದರ್ಶಿಯವರ ಮೂಲಕ ರಾಜ್ಯಪಾಲರಿಗೆ ತಲುಪಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ತಮೆಲ್ಲಾ ಕಾರ್ಯಕ್ರಮಗಳನ್ನು ಬದಿಗಿರಿಸಿ ಸಚಿವ ಸಂಪುಟ ವಿಸ್ತರಣೆಯ ಕುರಿತು ಹೈಕಮಾಂಡ್ ಜೊತೆ ನಿರಂತರವಾಗಿ ಚರ್ಚೆ ನಡೆಸುತ್ತಿದ್ದರು. ತೀವ್ರ ಒತ್ತಡದಿಂದಾಗಿ ಕೊನೆಗೂ ವರಿಷ್ಠರು ಸಚಿವರ ಪಟ್ಟಿಯನ್ನು ಅಖೈರುಗೊಳಿಸಿದ್ದಾರೆ. ಇದೇ ವೇಳೆ ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡರಿಗೂ ಅದೃಷ್ಟ ಖುಲಾಯಿಸಿದೆ. ವಿಧಾನಸಭೆಯ ಅಧ್ಯಕ್ಷ ಸ್ಥಾನಕ್ಕೆ ಜಿ.ಎಸ್.ಪಾಟೀಲ್, ಉಪಾಧ್ಯಕ್ಷ ಸ್ಥಾನಕ್ಕೆ ಎ.ಎಸ್.ಪೊನ್ನಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.
ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಸಲೀಂ ಅಹಮದ್ ಅವರನ್ನು ಉಪಾ ಸಭಾಪತಿ ಸ್ಥಾನಕ್ಕೆ ಉಮಾಶ್ರೀ ಅವರನ್ನು ನೇಮಿಸಲು ಹೈಕಮಾಂಡ್ ಅನುಮತಿಸಿದೆ.ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಹುತೇಕ ಹೊಸ ಮುಖಗಳಿಗೆ ಹಾಗೂ ಯುವ ಉತ್ಸಾಹಿಗಳಿಗೆ ಆದ್ಯತೆ ನೀಡಲಾಗಿದೆ.
ಸಂಭವನೀಯ ಸಚಿವರ ಪಟ್ಟಿ ಈ ರೀತಿ ಇದೆ:
ಪಿ.ಎಂ.ನರೇಂದ್ರಸ್ವಾಮಿ-ಮಳವಳ್ಳಿ
ಶಿವರಾಜ ತಂಗಡಗಿ-ಕನಕಗಿರಿ
ರುದ್ರಪ್ಪ ಲಮಾಣಿ- ಹಾವೇರಿ
ಕೆ.ಎಸ್.ಬಸವಂತಪ್ಪ-ಮಾಯಕೊಂಡ
ಬಿ.ನಾಗೇಂದ್ರ-ಬಳ್ಳಾರಿ
ಟಿ.ರಘುಮೂರ್ತಿ-ಚಳ್ಳಕೆರೆ
ಬಿ.ಜೆಡ್.ಜಮೀರ್ ಅಹಮದ್ ಖಾನ್-ಚಾಮರಾಜಪೇಟೆ
ರಿಜ್ವಾನ್ ಅರ್ಷದ್-ಶಿವಾಜಿನಗರ
ಸಂತೋಷ್‌ಲಾಡ್-ಕಲಗಟಗಿ
ಮಧುಬಂಗಾರಪ್ಪ-ಸೊರಬ
ಪುಟ್ಟರಂಗಶೆಟ್ಟಿ-ಚಾಮರಾಜನಗರ
ಎಸ್.ಎಸ್.ಮಲ್ಲಿಕಾರ್ಜುನ್-ದಾವಣಗೆರೆ ಉತ್ತರ
ಅಜಯ್‌ಸಿಂಗ್-ಜೇವರ್ಗಿ
ಎನ್.ಚೆಲುವರಾಯಸ್ವಾಮಿ-ನಾಗಮಂಗಲ
ಕೆ.ಎಂ.ಶಿವಲಿಂಗೇಗೌಡ-ಅರಸೀಕೆರೆ
ಎಚ್.ಸಿ.ಬಾಲಕೃಷ್ಣ-ಮಾಗಡಿ
ಗಾಯಿತ್ರಿ ಶಾಂತೇಗೌಡ-ವಿಧಾನ ಪರಿಷತ್ ಸದಸ್ಯೆ
ಬಸವರಾಜರಾಯರೆಡ್ಡಿ- ಯಲಬುರಗಿ
ವಿಜಯಾನಂದ ಕಾಶಪ್ಪನವರ್-ಹುನಗುಂದ
ಲಕ್ಷ್ಮಣ ಸವದಿ-ಅಥಣಿ
