Homeರಾಷ್ಟ್ರೀಯದೆಹಲಿ ಲಾಠಿಚಾರ್ಜ್‌, ರಾಮಮಂದಿರ ದೇಣಿಗೆ ಕುರಿತು ಸಂಸತ್ತಿನಲ್ಲಿ ಸರ್ಕಾರದ ಉತ್ತರಕ್ಕೆ ಖರ್ಗೆ ಪಟ್ಟು

ದೆಹಲಿ ಲಾಠಿಚಾರ್ಜ್‌, ರಾಮಮಂದಿರ ದೇಣಿಗೆ ಕುರಿತು ಸಂಸತ್ತಿನಲ್ಲಿ ಸರ್ಕಾರದ ಉತ್ತರಕ್ಕೆ ಖರ್ಗೆ ಪಟ್ಟು

Kharge seeks reply in Parliament on Delhi lathicharge, Ram temple donation

ನವದೆಹಲಿ,ಆ.3- ಜುಲೈ 20ರಂದು ದೆಹಲಿಯಲ್ಲಿ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಕೈಗೊಂಡ ಕ್ರಮ ಮತ್ತು ಅಯೋಧ್ಯೆ ರಾಮ ಮಂದಿರ ದೇಣಿಗೆ ದುರುಪಯೋಗ ಪ್ರಕರಣದ ಕುರಿತು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಉತ್ತರಿಸಲೇಬೇಕು ಎಂದು ರಾಜ್ಯಸಭಾ ಪ್ರತಿಪಕ್ಷದ ನಾಯಕ ಮತ್ತು ಕಾಂಗ್ರೆಸ್‌‍ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.

ವಿಪಕ್ಷಗಳ ಸಭೆಯ ಬಳಿಕ ಇಂಡಿ ಬಣದ ಬೇಡಿಕೆಗಳನ್ನು ಮುಂದಿಟ್ಟು ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಖರ್ಗೆ, ಮೋದಿ ಸರ್ಕಾರ ಉತ್ತರಿಸಬೇಕು. ಮೊದಲನೇಯದಾಗಿ ಗೃಹ ಸಚಿವರು ಸಂಸತ್ತಿಗೆ ಬಂದು ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್‌ ಹಾಗೂ ಪೆಲೆಟ್‌ ಗುಂಡು ಹಾರಿಸುವಿಕೆಯ ಕುರಿತು ವಿವರ ನೀಡಬೇಕು. ಎರಡನೇಯದ್ದು, ರಾಮ ಮಂದಿರ ಟ್ರಸ್ಟ್‌ ಪ್ರಧಾನಿಯವರ ಮೇಲ್ವಿಚಾರಣೆಯಲ್ಲಿದ್ದರೂ ಕೂಡ ದಾನವಾಗಿ ಬಂದ ಕಾಣಿಕೆಗಳು ಹೇಗೆ ಕಳುವಾದವು ಎಂಬುದಕ್ಕೆ ಪ್ರಧಾನಿ ಮೋದಿ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಜುಲೈ 20ರಂದು ಕಾಕ್ರೋಚ್‌ ಜನತಾ ಪಕ್ಷದ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ಲಾಠಿಚಾರ್ಜ್‌ ಮತ್ತು ಪೆಲೆಟ್‌ ಗುಂಡುಗಳನ್ನು ಬಳಸಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷಗಳು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಈ ಸಂಬಂಧ, ಸಂಸತ್‌ ಆವರಣದಲ್ಲಿ ವಿಪಕ್ಷದ ಸಂಸದರು ಪ್ರತಿಭಟನೆ ನಡೆಸಿ, ಅಮಿತ್‌ ಶಾ ಅವರ ಗೈರುಹಾಜರಿ ಪ್ರಶ್ನಿಸಿದ್ದು, ಘಟನೆಯ ಹೊಣೆಗಾರಿಕೆ ಹೊರುವಂತೆ ಒತ್ತಾಯಿಸಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಮತ್ತು ಕಾಂಗ್ರೆಸ್‌‍ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪ್ರತಿಭಟನಾ ನಿರತ ಸದಸ್ಯರು, ಅಮಿತ್‌ ಶಾ ಸಂಸತ್‌ ಸೆ ಗಯಾಬ್‌ ಕ್ಯೋಂ (ಅಮಿತ್‌ ಶಾ ಸಂಸತ್ತಿನಿಂದ ಏಕೆ ಕಣರೆಯಾಗಿದ್ದಾರೆ?) ಎಂದು ಬರೆದಿರುವ ದೊಡ್ಡ ಬ್ಯಾನರ್‌ ಪ್ರದರ್ಶಿಸಿದರು.

ಈ ವೇಳೆ ಸಂಸದರು ಗೃಹ ಸಚಿವರು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಅಮಿತ್‌ ಶಾ ಜವಾಬ್‌ ದೋ (ಅಮಿತ್‌ ಶಾ, ಉತ್ತರ ನೀಡಿ) ಮತ್ತು ಅಮಿತ್‌ ಶಾ ಕಹಾ ಗಯಾಬ್‌ ಹೈ? (ಅಮಿತ್‌ ಶಾ ಎಲ್ಲಿ ಕಣರೆಯಾಗಿದ್ದಾರೆ?) ಸೇರಿದಂತೆ ಹಲವು ಘೋಷಣೆಗಳನ್ನು ಕೂಗಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌‍ ಸಂಸದ ಪವನ್‌ ಖೇರಾ, ಜಂತರ್‌ ಮಂತರ್‌ನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಈಗ ಸಂಸದರಿಗೆ ಏನಾಯಿತು ಎಂದು ಗೃಹ ಸಚಿವರನ್ನು ಕೇಳಬೇಕು. ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹೀಗಿದೆ ಎಂದು ಕಿಡಿಕಾರಿದರು.

ಇಡೀ ದೇಶವು ಪ್ರಧಾನಿಯವರು ದೇಶದ ವಿದ್ಯಾರ್ಥಿಗಳಲ್ಲಿ ಕ್ಷಮೆ ಯಾಚಿಸಬೇಕೆಂದು ಬಯಸುತ್ತದೆ. ಆದರೆ, ಇಲ್ಲಿ ಪ್ರಧಾನಿಯವರೇ ವಿದ್ಯಾರ್ಥಿಗಳನ್ನು ಕ್ಷಮಿಸುತ್ತಿದ್ದಾರೆ. ನಾಳೆ, ನೀರವ್‌ ಮೋದಿ ಅವರು ಎಲ್ಲಾ ಬ್ಯಾಂಕ್‌ಗಳನ್ನು ಕ್ಷಮಿಸುವುದಾಗಿ ಹೇಳುತ್ತಾರೆ. ಏನಿದು? ಎಂದು ಪ್ರಧಾನಿ ನರೇಂದ್ರ ಮೋದಿಯವರ ಇನ್‌ಸ್ಟಾಗ್ರಾಮ್‌‍ ವಿಡಿಯೋವನ್ನು ಉಲ್ಲೇಖಿಸಿ ಖೇರಾ ಅವರು ವಾಗ್ದಾಳಿ ನಡೆಸಿದ್ದಾರೆ.

ಆಗಸ್ಟ್‌ 1ರಂದು, ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಕೆಲವು ಕಿಡಿಗೇಡಿ ಮಕ್ಕಳು ತುಂಬಾ ಅಸಭ್ಯ ಮತ್ತು ನಿಂದನೀಯ ಭಾಷೆ ಬಳಸಿದ್ದಾರೆ. ತಮನ್ನು ಮತ್ತು ತಮ ದಿವಂಗತ ತಾಯಿಯನ್ನು ನಿಂದಿಸಲಾಗಿದೆ. ಆದರೂ ನಾನು ನಿಂದನೀಯ ಭಾಷೆ ಬಳಸಿರುವ ಮಕ್ಕಳನ್ನು ಕ್ಷಮಿಸಿರುವುದಾಗಿ ಪ್ರಧಾನಿ ಮೋದಿ ಇನ್‌ಸ್ಟಾಗ್ರಾಮ್‌‍ ವಿಡಿಯೋದಲ್ಲಿ ಹೇಳಿದ್ದರು.

RELATED ARTICLES
spot_img

Latest News