ಮೈಸೂರು,ಆ.6- ಕ್ರಿಕೆಟ್ ಹಾಗೂ ಇನ್ನಿತರೆ ಆಟಗಳ ಬೆಟ್ಟಿಂಗ್ ಮಾಮೂಲಿ. ಆದರೆ ಸಾಂಸ್ಕೃತಿಕ ನಗರಿಯಲ್ಲಿ ವಿದೇಶಿ ಗೇಮ್‌ಗಳಲ್ಲಿ ಒಂದಾದ ಒಂದೇಟಿಗೆ ಒಂದು ನೋಟು ಎಂಬಂತೆ ಯುವಕರು ಬ್ಲಡ್ ಗೇಮ್ ಫೈಟ್‌ಗೆ ಬೆಟ್ಟಿಂಗ್ ಕಟ್ಟಿಕೊಂಡು ಹೊಡೆದಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಒಂದು ಹೊಡೆತ… ಒಂದು ನೋಟು… ನಿಯಮದೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಯುವಕರು ಫೈಟ್ ಮಾಡಿರುವ ಘಟನೆ ಆರ್.ಟಿ.ನಗರದಲ್ಲಿ ನಡೆದಿದೆ.ಯಾರಿಗಾದರೂ ರಕ್ತ ಬರುವವರೆಗೂ ಹೊಡೆಯುವ ವಿದೇಶಿ ಶೈಲಿಯ ಫೈಟ್ ನಡೆಸಿದ ಆರೋಪದ ಮೇಲೆ ಮೂವರು ಯುವಕರ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್.ಟಿ.ನಗರ ನಂದಿನಿ ಪಾರ್ಲರ್ ಸಮೀಪದ ಮುಖ್ಯರಸ್ತೆಯಲ್ಲಿ ಯುವಕರಿಬ್ಬರು ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಿದ್ದರು.ಈ ವೇಳೆ ಮತ್ತೊಬ್ಬ ಯುವಕ ಇನ್ನೂ ಹೊಡಿ, ಜೋರಾಗಿ ಹೊಡಿ ಎಂದು ಪ್ರಚೋದನೆ ನೀಡುತ್ತಿದ್ದ. ಇದಕ್ಕೆ ಬ್ಲಡ್ ಫೈಟ್ ಗೇಮ್ ಎಂದೇ ಹೆಸರಿದೆ. ಇದಕ್ಕೆ ಬೆಟ್ಟಿಂಗ್ ಕೂಡಾ ಕಟ್ಟಲಾಗುತ್ತದೆ.
ಹೊಡೆದಾಟದ ಸಂದರ್ಭದಲ್ಲಿ ಪೊಲೀಸರು ಬರುತ್ತಿದ್ದಂತೆ ಮೂವರು ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರು ಮೂವರನ್ನು ಪತ್ತೆ ಹಚ್ಚಿದ್ದು, ದಟ್ಟಹಳ್ಳಿ ಮತ್ತು ವಿದ್ಯಾರಣ್ಯಪುರಂನ ನಿವಾಸಿಗಳೆಂದು ತಿಳಿದುಬಂದಿದೆ.
ಈ ಗೇಮ್ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದಿರುವ ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಮನವಿ ಮೇರೆಗೆ ಪೊಲೀಸರೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಜಯಪುರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
