ನವದೆಹಲಿ/ಢಾಕಾ,ಆ.6-ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರು ಭಾರತದಿಂದ ವರ್ಚುವಲ್ ಮೂಲಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೆಲವೇ ಗಂಟೆಗಳಲ್ಲಿ, ಮಾಜಿ ಕ್ರಿಕೆಟ್ ನಾಯಕ ಹಾಗೂ ಅವಾಮಿ ಲೀಗ್‌ನ ಮಾಜಿ ಸಂಸದ ಶಕೀಬ್ ಹಲ್ ಹಸನ್ ಅವರ ಮಾಗುರಾ ಜಿಲ್ಲೆಯ ಕೇಶಬ್‌ಮೋರ್ ಪ್ರದೇಶದಲ್ಲಿರುವ ಪೂರ್ವಜರ ಮನೆಯ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿರುವುದು ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿಯ ಗಂಭೀರತೆಯನ್ನು ಮತ್ತೊಮೆ ಬೆಳಕಿಗೆ ತಂದಿದೆ.
ಸ್ಥಳೀಯ ವರದಿಗಳ ಪ್ರಕಾರ, ರಾತ್ರಿ ಸುಮಾರು 8.45ರ ವೇಳೆಗೆ ದುಷ್ಕರ್ಮಿಗಳು ಮನೆಯ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದು, ಬಳಿಕ ಮನೆಗೆ ಹಾನಿಯಾಗಿದೆ. ಘಟನೆಯ ಕುರಿತು ಸ್ಥಳೀಯ ಆಡಳಿತ ತನಿಖೆ ಆರಂಭಿಸಿದ್ದು, ದಾಳಿಕೋರರ ಗುರುತು ಮತ್ತು ಉದ್ದೇಶವನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.
ನವದೆಹಲಿಯ ವಿದೇಶಿ ವರದಿಗಾರರ ಕ್ಲಬ್‌ನಲ್ಲಿ ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶೇಖ್ ಹಸೀನಾ, ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುವುದಾಗಿ ಘೋಷಿಸಿದರು.
ತಮ್ಮ ವಾಪಸ್ಸು ಅಧಿಕಾರಕ್ಕಾಗಿ ಅಲ್ಲ, ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಯ ಹಾದಿಯನ್ನು ಮರುಸ್ಥಾಪಿಸುವ ಪ್ರಯತ್ನ ಎಂದು ಅವರು ಹೇಳಿದರು. ತಾವು ದೇಶಕ್ಕೆ ಮರಳಿದರೆ ಬಂಧನ ಅಥವಾ ಸಾವಿನ ಅಪಾಯವಿದ್ದರೂ ಹಿಂದಿರುಗುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದೂ ತಿಳಿಸಿದ್ದಾರೆ.
ಅವಾಮಿ ಲೀಗ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಶಕೀಬ್ ಅಲ್ ಹಸನ್ ಅವರ ಮನೆ ಮೇಲಿನ ದಾಳಿಯನ್ನು ರಾಜಕೀಯ ಪ್ರತೀಕಾರದ ಕೃತ್ಯ ಎಂದು ಆರೋಪಿಸಿದ್ದು, ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದಕ್ಕೆ ಈ ದಾಳಿ ನಡೆದಿರಬಹುದು ಎಂದು ಹೇಳಿದೆ. ಆದರೆ ಈ ಆರೋಪಗಳಿಗೆ ಸಂಬಂಧಿಸಿದಂತೆ ಸ್ವತಂತ್ರ ದೃಢೀಕರಣ ಲಭ್ಯವಾಗಿಲ್ಲ.
ಪ್ರತಿಪಕ್ಷಗಳಾದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಅಥವಾ ಇತರ ಸಂಘಟನೆಗಳು ಈ ಆರೋಪಗಳ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ. 2024ರಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಆರಂಭವಾದ ಸರ್ಕಾರ ವಿರೋಧಿ ಪ್ರತಿಭಟನೆಗಳು ಹಿಂಸಾತಕ ಸ್ವರೂಪ ಪಡೆದ ನಂತರ ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡಿತು.
ಆಗಸ್ಟ್ 5, 2024ರಂದು ಅವರು ಬಾಂಗ್ಲಾದೇಶ ತೊರೆದು ಭಾರತಕ್ಕೆ ಬಂದ ಬಳಿಕ ನವದೆಹಲಿಯಲ್ಲೇ ವಾಸಿಸುತ್ತಿದ್ದಾರೆ.ಪ್ರತಿಭಟನೆಗಳ ಸಂದರ್ಭದಲ್ಲಿ ನಡೆದ ದಮನ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ವಿಶೇಷ ನ್ಯಾಯಮಂಡಳಿ ಶೇಖ್ ಹಸೀನಾ ವಿರುದ್ಧ ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪಗಳನ್ನು ಪರಿಗಣಿಸಿದೆ. ಬಾಂಗ್ಲಾದೇಶ ಸರ್ಕಾರವು ಅವರನ್ನು ಭಾರತದಿಂದ ಹಸ್ತಾಂತರಿಸುವಂತೆ ಹಲವು ಬಾರಿ ಮನವಿ ಮಾಡಿದೆ. ಈ ಪ್ರಕರಣಗಳು ರಾಜಕೀಯವಾಗಿ ಸೂಕ್ಷ್ಮವಾಗಿದ್ದು, ಅವುಗಳ ಬಗ್ಗೆ ವಿಭಿನ್ನ ಪಕ್ಷಗಳು ಪರಸ್ಪರ ವಿರುದ್ಧವಾದ ನಿಲುವುಗಳನ್ನು ವ್ಯಕ್ತಪಡಿಸುತ್ತಿವೆ.
ಇದೇ ವೇಳೆ, ಅವಾಮಿ ಲೀಗ್‌ಗೆ ಸಂಬಂಧಿಸಿದ ಅನೇಕ ನಾಯಕರ ಮನೆಗಳು, ಕಚೇರಿಗಳು ಮತ್ತು ಆಸ್ತಿಗಳ ಮೇಲೆ ಕಳೆದ ಎರಡು ವರ್ಷಗಳಲ್ಲಿ ದಾಳಿ, ಬೆಂಕಿ ಹಚ್ಚುವ ಘಟನೆಗಳು ನಡೆದಿರುವ ವರದಿಗಳಿವೆ. ಮತ್ತೊಂದೆಡೆ, ಮಧ್ಯಂತರ ಸರ್ಕಾರ ಮತ್ತು ಅದರ ಬೆಂಬಲಿಗರು ಹಿಂದಿನ ಆಡಳಿತದ ವಿರುದ್ಧ ಕಾನೂನು ಕ್ರಮಗಳು ನ್ಯಾಯಾಂಗ ಪ್ರಕ್ರಿಯೆಯ ಭಾಗವೆಂದು ವಾದಿಸುತ್ತಿದ್ದಾರೆ.
ಭಾರತೀಯ ಭೂಪ್ರದೇಶದಿಂದ ಶೇಖ್ ಹಸೀನಾ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿರುವುದು ಭಾರತಬಾಂಗ್ಲಾದೇಶ ಸಂಬಂಧಗಳಲ್ಲಿಯೂ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆ ಕುರಿತು ಬಾಂಗ್ಲಾದೇಶ ಸರ್ಕಾರವು ಭಾರತದಿಂದ ಸ್ಪಷ್ಟೀಕರಣ ಕೋರಿರುವ ವರದಿಗಳಿವೆ.
ಭಾರತ ಇದುವರೆಗೆ ಬಾಂಗ್ಲಾದೇಶದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ತನ್ನ ಸಾಂಪ್ರದಾಯಿಕ ನಿಲುವನ್ನು ಪುನರುಚ್ಚರಿಸಿದೆ.ಶಕೀಬ್ ಅಲ್ ಹಸನ್ ಅವರ ಮನೆಯ ಮೇಲಿನ ದಾಳಿ ಬಾಂಗ್ಲಾದೇಶದಲ್ಲಿ ರಾಜಕೀಯ ಧ್ರುವೀಕರಣ ಇನ್ನೂ ತೀವ್ರವಾಗಿರುವುದನ್ನು ಸೂಚಿಸುತ್ತದೆ. ಒಂದು ಕಡೆ ಶೇಖ್ ಹಸೀನಾ ದೇಶಕ್ಕೆ ಮರಳುವ ಘೋಷಣೆ ಮಾಡಿರುವವರೆ, ಇನ್ನೊಂದೆಡೆ ಅವರ ಪಕ್ಷದ ನಾಯಕರು ಮತ್ತು ಬೆಂಬಲಿಗರ ಮೇಲಿನ ದಾಳಿಗಳ ಆರೋಪಗಳು ಮುಂದುವರಿದಿವೆ. ಆದರೆ ಈ ಘಟನೆಗಳ ಉದ್ದೇಶ, ಹೊಣೆಗಾರರು ಮತ್ತು ರಾಜಕೀಯ ಸಂಪರ್ಕಗಳ ಕುರಿತು ಅಂತಿಮ ನಿರ್ಣಯಕ್ಕೆ ಬರಲು ಅಧಿಕೃತ ತನಿಖೆಯ ಫಲಿತಾಂಶಗಳು ಮಹತ್ವದ್ದಾಗಿವೆ.
