Homeರಾಷ್ಟ್ರೀಯಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಜಮ್ಮು ,ಆ.8- ಸುರಿಯುತ್ತಿರುವ ಭಾರೀ ಮಳೆ ಹಾಗೂ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಸುರಕ್ಷತಾ ಮುನ್ನೆಚ್ಚರಿಕೆಯಾಗಿ ಜಮ್ಮು ವಿನಿಂದ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹವಾಮಾನ ವೈಪರೀತ್ಯದ ಕಾರಣದಿಂದ ಜಮುವಿನ ಭಗವತಿ ನಗರ ಮೂಲ ಶಿಬಿರದಿಂದ ಕಾಶೀರ ಕಣಿವೆಗೆ ತೆರಳಬೇಕಿದ್ದ ಹೊಸ ಯಾತ್ರಿಕರ ಸಂಚಾರವನ್ನು ಇಂದು ಬೆಳಿಗ್ಗೆಯಿಂದ ನಿಲ್ಲಿಸಲಾಗಿದೆ.

ಆಗಸ್ಟ್‌ 11ರವರೆಗೆ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿಯನ್ನು ಕೂಲಂಕಷವಾಗಿ ವಿಶ್ಲೇಷಿಸಿದ ಬಳಿಕವಷ್ಟೇ ಯಾತ್ರೆ ಪುನರಾರಂಭದ ಬಗ್ಗೆ ಅಧಿಕೃತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಜುಲೈ 3ರಂದು ಅಧಿಕೃತವಾಗಿ ಆರಂಭವಾದ ಈ ಬಾರಿಯ ಅಮರನಾಥ ಯಾತ್ರೆಯಲ್ಲಿ, ಇದುವರೆಗೆ ಒಟ್ಟು 4.75 ಲಕ್ಷಕ್ಕೂ ಅಧಿಕ ಯಾತ್ರಿಕರು ಪವಿತ್ರ ಗುಹೆಯ ದರ್ಶನ ಪಡೆದಿದ್ದಾರೆ. ಈ ವರ್ಷದ ಯಾತ್ರೆಯು ಆಚರಣೆಯಂತೆ ಮುಂಬರುವ ಆಗಸ್ಟ್‌ 28ರಂದು ರಕ್ಷಾ ಬಂಧನದ ದಿನದಂದು ಮುಕ್ತಾಯಗೊಳ್ಳಲಿದೆ.

ಜಮ್ಮು ಪ್ರದೇಶದ ಹಲವೆಡೆ ಆಗಸ್ಟ್‌ 11ರವರೆಗೆ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ಮಳೆಯ ತೀವ್ರತೆಯಿಂದಾಗಿ ಹಠಾತ್‌ ಪ್ರವಾಹ ಹಾಗೂ ಭೂಕುಸಿತ ಸಂಭವಿಸುವ ಆತಂಕವಿರುವುದರಿಂದ ಸಾರ್ವಜನಿಕರು ಹಾಗೂ ಯಾತ್ರಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಭಾರೀ ಮಳೆಯ ನಡುವೆಯೂ ಪ್ರಮುಖ ಜೀವನಾಡಿಯಾದ ಜಮ್ಮು -ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸದ್ಯ ಸಂಚಾರವು ಸುಗಮವಾಗಿ ಮುಂದುವರಿದಿದೆ.

RELATED ARTICLES
spot_img

Latest News