Homeಬೆಂಗಳೂರುಸಿಎಸ್‌‍ಆರ್‌ ನಿಧಿ ಮೇಲೆ ನಿಗಾ ವಹಿಸಲು ಐಎಎಸ್‌‍ ಅಧಿಕಾರಿ ನೇಮಕ; ಡಿಕೆಶಿ

ಸಿಎಸ್‌‍ಆರ್‌ ನಿಧಿ ಮೇಲೆ ನಿಗಾ ವಹಿಸಲು ಐಎಎಸ್‌‍ ಅಧಿಕಾರಿ ನೇಮಕ; ಡಿಕೆಶಿ

ಬೆಂಗಳೂರು,ಅ.8 ಕಾರ್ಪೋರೇಟ್‌ ಸಂಸ್ಥೆಗಳು, ಕೈಗಾರಿಕೆಗಳು ಒಳಗೊಂಡಂತೆ ಸಾಮಾಜಿಕ ಹೊಣೆಗಾರಿಕೆ ನಿಧಿ ಸಿಎಸ್‌‍ಆರ್‌ ನಿಧಿ ಅಡಿ ಬರುವ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ನೀತಿ ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ. ಸಿಎಸ್‌‍ಆರ್‌ ಚಟುವಟಿಕೆಗಳ ಮೇಲೆ ನಿಗಾವಹಿಸಲು ಐಎಎಸ್‌‍ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರು ಐಟಿ ಕಂಪೆನಿಗಳು ಮತ್ತು ಕೈಗಾರಿಕೆಗಳ ಸಂಘದಿಂದ ಆಯೋಜಿಸಲಾದ ಸಿಎಸ್‌‍ಆರ್‌ ವಿಷನ್‌ -2030 ಸಮಾವೇಶದಲ್ಲಿ ಮಾತನಾಡಿದ ಅವರು, ಸಿ.ಎಸ್‌‍.ಆರ್‌ ಚಟುವಟಿಕೆಯಲ್ಲಿ ಮೊದಲ ಹಂತದಲ್ಲಿ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು, ನಂತರ ಆರೋಗ್ಯ ಸೇವೆಗೆ ಆದ್ಯತೆ ನೀಡಲಾಗುವುದು. ಕಂಪೆನಿಗಳು ಸಿಎಸ್‌‍ಆರ್‌ ಚಟುವಟಿಕೆಯಲ್ಲಿ ವೆಚ್ಚ ಮಾಡುವ ಹಣ, ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಸೂಕ್ತ ಕಣ್ಗಾವಲು ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದರು.

ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ತೆಗೆದುಕೊಳ್ಳಬೇಕು. ಬೆಂಗಳೂರು ಹೊರತುಪಡಿಸಿ ಜಿಲ್ಲಾ ಕೇಂದ್ರಗಳಲ್ಲೂ ಶಾಲೆಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳುವಂತಿಲ್ಲ. ಗ್ರಾಮ ಪಂಚಾಯತ್‌ ಹಂತದಲ್ಲಿ ಶಾಲಾಭಿವೃದ್ಧಿಗೆ ಗಮನಹರಿಸಬೇಕು. ಯಾವ ಗ್ರಾಮದ ಶಾಲೆಯನ್ನಾದರೂ ಅಭಿವೃದ್ಧಿಪಡಿಸಿದರೂ ಸರ್ಕಾರ ನಿರ್ಬಂಧ ವಿಧಿಸುವುದಿಲ್ಲ. ಯಾರಿಗೆ ಬೇಕಾದರೂ ಗುತ್ತಿಗೆ ನೀಡಿ. ಆದರೆ ಗ್ರಾಮ ಪಂಚಾಯತ್‌ ಹಂತದಲ್ಲಿ ಉತ್ತಮ ಚಿಕಿತ್ಸೆ ದೊರೆಯುವಂತಹ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ ಅಧಿಕಾರಿಗಳು, ಸಿಎಸ್‌‍ಆರ್‌ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳು ಬಿಲ್ಡರ್‌ ಗಳನ್ನು ಒಳಗೊಂಡಂತೆ ಸಮಿತಿ ರಚಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಸಿ.ಎಸ್‌‍.ಆರ್‌ ವ್ಯಾಪ್ತಿಯಡಿ ಪ್ರಸ್ತುತ 3394 ಕೋಟಿ ರೂ ವೆಚ್ಚ ಮಾಡುತ್ತಿದ್ದು, ಇದು ಅತ್ಯಂತ ಕಡಿಮೆಯಾಗಿದೆ. ವಾರ್ಷಿಕ ಸುಮಾರು 10 ಸಾವಿರ ಕೋಟಿ ರೂ ವೆಚ್ಚ ಮಾಡಬೇಕಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಐಎಎಸ್‌‍ ಅಧಿಕಾರಿಯೊಬ್ಬರು ಈ ಬಗ್ಗೆ ಗಮನಹರಿಸಲಿದ್ದಾರೆ. ಸರ್ಕಾರ ನಿರ್ಮಾಣ ಚಟುವಟಿಕೆ ಮಾಡಿದರೆ ಶೇ 18 ರಷ್ಟು ಜಿ.ಎಸ್‌‍.ಟಿ ಪಾವತಿಸಬೇಕಾಗುತ್ತದೆ. ಹಾಗಾಗಿ ಗುಣಮಟ್ಟದ ನಿರ್ಮಾಣ ಕಾರ್ಯಗಳನ್ನು ನೀವೇ ನಿರ್ವಹಿಸಬೇಕು. ಜೊತೆಗೆ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು ಸಹ ರಾಜ್ಯದಲ್ಲಿ ತಲಾ ಒಂದೊಂದು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ನಿರ್ವಹಣೆ ಮಾಡಬೇಕು. ನನ್ನ ಮಗಳು ಸಹ ಮೂರು ಶಾಲೆಗಳನ್ನು ದತ್ತು ಪಡೆದಿದ್ದಾಳೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಗ್ರಾಮೀಣ ಬಾಗದಲ್ಲಿ ಹಲವು ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಬೆಂಗಳೂರು ನಗರದ ಬೆಳವಣಿಗೆಗೆ ಪಂಡಿತ್‌ ಜವಾಹರ್‌ ಲಾಲ್‌ ನೆಹರು ಸ್ವಾತಂತ್ರೋತ್ತರದಲ್ಲಿ ಉತ್ತಮ ಅಡಿಪಾಯ ಹಾಕಿದ್ದು, ಜಗತ್ತಿನ ಅತ್ಯುತ್ತಮ ಕಂಪೆನಿಗಳು ಇಲ್ಲಿವೆ. ಈ ನಗರದಲ್ಲಿ ನಾವು ಮಾತನಾಡುವ ಎಲ್ಲವೂ ಲಭ್ಯವಿದೆ. ಆದರೆ ಮುಂಬೈನಂತೆ ಬೆಂಗಳೂರು ನಗರ ದುಬಾರಿಯಲ್ಲ. ಒಂದೂವರೆ ಕೋಟಿಗೆ ನಗರದ ಆಸುಪಾಸಿನಲ್ಲಿ ಉತ್ತಮ ಮನೆಗಳನ್ನು ಖರೀದಿಸಬಹುದು. ಮುಂಬರುವ ಬೆಂಗಳೂರು ಟೆಕ್‌ ಸಮ್ಮಿಟ್‌ ನಲ್ಲಿ ಈ ನಗರಕ್ಕೆ ಮತ್ತಷ್ಟು ಅಚ್ಚರಿಗಳು ದೊರೆಯಲಿವೆ ಎಂದರು.

ಸಮ್ಮೇಳನದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಪ್ರೊ. ರಾಜೀವ್‌ ಗೌಡ, ವಾರ್ತಾ ಇಲಾಖೆ ಕಾರ್ಯದರ್ಶಿ ಜೆ. ಮಂಜುನಾಥ್‌, ಯಶವಂತ್‌ ವಿ ಗುರುಕರ್‌, ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌ ಸಿಇಒ ಸಂಜೀವ್‌ ಕುಮಾರ್‌ ಗುಪ್ತಾ, ಜಿಬಿಐಟಿಸಿಐಎ ಚೇರ್‌ ಮನ್‌ ಆದಿತ್ಯ ಪಿ.ಎಸ್‌‍, ಜಿಬಿಐಟಿಸಿಐಎ ಅಧ್ಯಕ್ಷ ಗಿರೀಶ್‌ ಎಚ್‌.ಕೆ., ಖಜಾಂಚಿ ಎಸ್‌‍. ಮಯೂರ್‌, ಸಿಎಸ್‌‍ಆರ್‌ ಮುಖ್ಯಸ್ಥ ವಾಸುದೇವ್‌ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
spot_img

Latest News