ಬೆಂಗಳೂರು, ಆ.8- ಮಹಿಳೆಯರಿಗೆ ಯಾವುದೇ ಘಟನೆ ಸಂಭವಿಸಿದ ತಕ್ಷಣವೇ ಕಾನೂನು ನೆರವು ದೊರೆಯುವಂತಿರಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಪ್ರತಿಪಾದಿಸಿದ್ದಾರೆ.
ಇದೇ ವೇಳೆ, ನಿಯಮಿತ ಮೊದಲ ಮೇಲ್ಮನವಿಗಳನ್ನು ವಿಚಾರಿಸುವ ಕರ್ನಾಟಕ ಹೈಕೋರ್ಟ್‌ನ ಅಧಿಕಾರವನ್ನು ಮೊಟಕುಗೊಳಿಸಿರುವ ಇತ್ತೀಚಿನ ತಿದ್ದುಪಡಿಗಳ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗವು ಕರ್ನಾಟಕ ಹೈಕೋರ್ಟ್ ಮತ್ತು ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿಸಿರುವ ಮಹಿಳೆಯರಿಗೆ ನ್ಯಾಯ ವಿಷಯದ ಎರಡು ದಿನಗಳ ದಕ್ಷಿಣ ವಲಯ ಪ್ರಾದೇಶಿಕ ಸಮೇಳನವನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
ಘಟನೆ ನಡೆದ ತಕ್ಷಣವೇ ಪೊಲೀಸ್ ಠಾಣೆ ಅಥವಾ ಆಸ್ಪತ್ರೆಗಳಲ್ಲಿ ಮಹಿಳೆಯರಿಗೆ ಕಾನೂನು ನೆರವು ದೊರೆಯುವ ವ್ಯವಸ್ಥೆ ಇರಬೇಕು ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು. ರಾಜ್ಯ ಕಾನೂನು ಸೇವಾ ಪ್ರಾಧಿಕಾರಗಳಿಂದ ತಾಲೂಕು ಮಟ್ಟದವರೆಗೆ ಇರುವ ವ್ಯವಸ್ಥೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಗ್ರಾಮೀಣ ಸರ್ಕಾರಿ ಆಸ್ಪತ್ರೆಗಳು ಮತ್ತು ಪೊಲೀಸ್ ಠಾಣೆಗಳ ನಡುವೆ ಸಮನ್ವಯ ಕಲ್ಪಿಸುವ ಸುಸಂಘಟಿತ ವ್ಯವಸ್ಥೆ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.
ಕಾನೂನು ನೆರವು ಪಡೆದ ಫಲಾನುಭವಿಗಳ ಸಂಖ್ಯೆಯನ್ನು ಮಾತ್ರ ಪರಿಗಣಿಸುವ ಬದಲು, ಆ ನೆರವಿನಿಂದ ದೊರೆತ ಪರಿಣಾಮ ಮತ್ತು ಫಲಿತಾಂಶದ ಆಧಾರದ ಮೇಲೆ ಅದರ ಪರಿಣಾಮಕಾರಿತ್ವವನ್ನು ಅಧ್ಯಯನ ಮಾಡಬೇಕು ಎಂದು ಅವರು ಹೇಳಿದರು. ಮಹಿಳೆಯರಿಗೆ ತ್ವರಿತ ಪರಿಹಾರ ಒದಗಿಸಲು ಪ್ಯಾರಾಲೀಗಲ್ ಸ್ವಯಂಸೇವಕರು ಕಡಿಮೆ ಸಮಯದಲ್ಲಿ ಲಭ್ಯವಾಗುವಂತಿರಬೇಕು ಎಂದರು.
ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ನೀಡಿರುವ ಅಂಕಿಅಂಶಗಳನ್ನು ಉಲ್ಲೇಖಿಸಿದ ಅವರು,2025ರ ಏಪ್ರಿಲ್‌ನಿಂದ 2026ರ ಮಾರ್ಚ್‌ವರೆಗೆ 4,14,795 ಮಹಿಳೆಯರು ಕಾನೂನು ನೆರವು ಪಡೆದಿದ್ದಾರೆ. ಇದು ಶ್ಲಾಘನೀಯ ಸಾಧನೆ ಎಂದು ಹೇಳಿದರು. ಸುಪ್ರೀಂ ಕೋರ್ಟ್ ಕಾನೂನು ಸೇವಾ ಸಮಿತಿಯ ಅಧ್ಯಕ್ಷೆಯಾಗಿ, ಹೈಕೋರ್ಟ್‌ನಲ್ಲಿ ಕಾನೂನು ನೆರವಿನ ಮೂಲಕ ಪ್ರಕರಣವೊಂದು ಇತ್ಯರ್ಥವಾದಾಗ ಅದರ ಮಾಹಿತಿಯನ್ನು ಸುಪ್ರೀಂ ಕೋರ್ಟ್ ಕಾನೂನು ಸೇವಾ ಸಮಿತಿಗೆ ಕಳುಹಿಸಬೇಕು. ಸೋತ ಪಕ್ಷ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಬಯಸಿದರೆ, ಈ ಮುನ್ನೆಚ್ಚರಿಕೆಯ ಮಾಹಿತಿ ನೆರವಾಗಲಿದೆ ಎಂದು ಅವರು ಹೇಳಿದರು.
ಹೈಕೋರ್ಟ್ ಅಧಿಕಾರ ಮೊಟಕಿಗೆ ಆಕ್ಷೇಪ: ಕರ್ನಾಟಕಕ್ಕೆ ಸಂಬಂಧಿಸಿದ ವಿಷಯ ಪ್ರಸ್ತಾಪಿಸಿದ ನ್ಯಾಯಮೂರ್ತಿ ನಾಗರತ್ನ, ಕರ್ನಾಟಕ ಸಿವಿಲ್ ಕೋರ್ಟ್‌ಗಳ ತಿದ್ದುಪಡಿ ಕಾಯ್ದೆ, 2023 ಮತ್ತು ಕರ್ನಾಟಕ ಹೈಕೋರ್ಟ್ ತಿದ್ದುಪಡಿ ಕಾಯ್ದೆ, 2023ರ ಇತ್ತೀಚಿನ ತಿದ್ದುಪಡಿಗಳಿಂದ ನಿಯಮಿತ ಮೊದಲ ಮೇಲನವಿಗಳನ್ನು ವಿಚಾರಿಸುವ ಹೈಕೋರ್ಟ್‌ನ ಅಧಿಕಾರ ಮೊಟಕುಗೊಂಡಿದೆ ಎಂದು ಹೇಳಿದರು.
ತಿದ್ದುಪಡಿ ವ್ಯವಸ್ಥೆಯಡಿ ಸಿವಿಲ್ ನ್ಯಾಯಾಧೀಶರು (ಹಿರಿಯ ವಿಭಾಗ) ನೀಡುವ ತೀರ್ಪು ಮತ್ತು ಡಿಕ್ರಿ ವಿರುದ್ಧ ಮೇಲ್ಮನವಿ ಹೈಕೋರ್ಟ್ ಬದಲಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಬೇಕಾಗುತ್ತದೆ ಎಂದು ಅವರು ವಿವರಿಸಿದರು.
ಆಸ್ತಿ ಅವಿಭಕ್ತ ಕುಟುಂಬದ ಆಸ್ತಿಯೇ ಅಥವಾ ಪ್ರತ್ಯೇಕ ಆಸ್ತಿಯೇ ಎಂಬಂತಹ ವಾಸ್ತವಾಂಶಗಳ ಕುರಿತು ತೀರ್ಪಿನಿಂದ ಅನ್ಯಾಯಕ್ಕೊಳಗಾದ ಮಹಿಳೆಯರು ಸಂವಿಧಾನದ ವಿಧಿ 136ರ ಅಡಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಹೇಗೆ ತೆರಳಲು ಸಾಧ್ಯ ಎಂದು ಅವರು ಪ್ರಶ್ನಿಸಿದರು. ಕರ್ನಾಟಕದಲ್ಲಿ ಎಷ್ಟು ಮಹಿಳೆಯರು ಸುಪ್ರೀಂ ಕೋರ್ಟ್‌ಗೆ ತೆರಳಲು ಸಾಧ್ಯ? ನಿಯಮಿತ ಮೊದಲ ಮೇಲ್ಮನವಿಗಳ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್‌ನ ಅಧಿಕಾರವನ್ನು ರಾಜ್ಯ ಸರ್ಕಾರ ಏಕೆ ಮೊಟಕುಗೊಳಿಸಿದೆ ಎಂಬುದು ನನಗೆ ಆಶ್ಚರ್ಯವಾಗುತ್ತದೆ ಎಂದು ಅವರು ಹೇಳಿದರು.
ಈ ಕ್ರಮವು ಪ್ರಕರಣಗಳನ್ನು ನಿರ್ಧರಿಸುವ ಹೈಕೋರ್ಟ್‌ನ ಸ್ವಾಯತ್ತತೆಗೆ ಅಡ್ಡಿಪಡಿಸುವುದಲ್ಲದೆ, ಮಹಿಳಾ ಅರ್ಜಿದಾರರಿಗೆ ಅನನುಕೂಲ ಉಂಟುಮಾಡುತ್ತದೆ. ಇತರ ರಾಜ್ಯಗಳಲ್ಲಿನ ಅರ್ಜಿದಾರರಿಗೆ ಹೋಲಿಸಿದರೆ ಕರ್ನಾಟಕದ ಪುರುಷ ಅರ್ಜಿದಾರರೂ ಈ ವ್ಯವಸ್ಥೆಯಿಂದ ಅನನುಕೂಲಕ್ಕೊಳಗಾಗುತ್ತಿದ್ದಾರೆ ಎಂದು ಅವರು ಹೇಳಿದರು.ರಾಜ್ಯ ಸರ್ಕಾರ ಮತ್ತು ಅಡ್ವೊಕೇಟ್ ಜನರಲ್ ಈ ನಿಬಂಧನೆಯನ್ನು ತಿದ್ದುಪಡಿ ಮಾಡಿ ರದ್ದುಪಡಿಸುವಂತೆ ಅವರು ಮನವಿ ಮಾಡಿದರು.
