Homeಇದೀಗ ಬಂದ ಸುದ್ದಿಉದ್ಯಮಿ ಹ*ತ್ಯೆ ಪ್ರಕರಣ: ಶಾರ್ಪ್‌ ಶೂಟರ್‌ಗೆ ಗುಂಡೇಟು

ಉದ್ಯಮಿ ಹ*ತ್ಯೆ ಪ್ರಕರಣ: ಶಾರ್ಪ್‌ ಶೂಟರ್‌ಗೆ ಗುಂಡೇಟು

ಬೆಂಗಳೂರು,ಆ.8- ಉಡುಪಿಯಲ್ಲಿ ಉದ್ಯಮಿಯನ್ನು ಗುಂಡು ಹಾರಿಸಿ ಕೊ*ಲೆ ಮಾಡಿ ಪರಾರಿಯಾಗಿದ್ದ ಶಾರ್ಪ್‌ ಶೂಟರ್‌ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿಬಿದ್ದಿದ್ದಾನೆ. ಉತ್ತರ ಪ್ರದೇಶ ಮೂಲದ ರಾಜು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಜೊತೆಗೆ ಸುಪಾರಿ ಕಿಲ್ಲರ್‌ರ‍ಸಗಳಾದ ಬಿಹಾರದ ದೀಪಕ್‌ ಮತ್ತು ಉತ್ತರ ಖಾಂಡದ ಅನ್‌ಮೋಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಮುದುರಂಗಡಿ ಪೇಟೆಯಲ್ಲಿ ನಿನ್ನೆ ಮಧ್ಯಾಹ್ನ ಹಾಡಹಗಲೇ ಉದ್ಯಮಿ, ಕಾಂಗ್ರೆಸ್‌‍ ಮುಖಂಡ ಡೇವಿಡ್‌ ಡಿಸೋಜ ಎಂಬುವವರ ಮೇಲೆ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕಾಪು ಠಾಣೆಯ ಪಿಎಸ್‌‍ಐ ತೇಜಸ್ವಿ, ಕಾರ್ಕಳ ಗ್ರಾಮಾಂತರ ಪೊಲೀಸ್‌‍ ಠಾಣೆಯ ಪಿಎಸ್‌‍ಐ ಪ್ರಸನ್ನ ಅವರನ್ನೊಳಗೊಂಡ ಸಿಬ್ಬಂದಿ ತಂಡ ಕಾರ್ಯಾಚರಣೆ ಕೈಗೊಂಡಿತ್ತು.

ಆ ಸಂದರ್ಭದಲ್ಲಿ ಈ ತಂಡಕ್ಕೆ ಮೂವರು ಕೊಲೆ ಆರೋಪಿಗಳು ಗಡಿ ಭಾಗದಲ್ಲಿರುವ ಬೈಂದೂರು ಸಮೀಪದ ಒತ್ತಿನೆಣೆ ಬಳಿ ಇರುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಈ ತಂಡ ಸ್ಥಳಕ್ಕೆ ಹೋಗುತ್ತಿದ್ದಂತೆ ಪೊಲೀಸರನ್ನು ಕಂಡು ಅವರ ಮೇಲೆಯೇ ಶಾರ್ಪ್‌ ಶೂಟರ್‌ ರಾಜು ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಪಿಎಸ್‌‍ಐ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ. ಪೊಲೀಸರ ಮಾತಿಗೆ ಕಿವಿಗೊಡದೇ ಮತ್ತೆ ಅವರ ಮೇಲೆಯೇ ದಾಳಿ ಮಾಡಿದಾಗ ಆತರಕ್ಷಣೆಗಾಗಿ ಹಾರಿಸಿದ ಗುಂಡು ಆರೋಪಿ ರಾಜು ಬಲಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ.

ಪೊಲೀಸರು ಆತನನ್ನು ಸುತ್ತುವರೆದು ವಶಕ್ಕೆ ಪಡೆದು ನಂತರ ಚಿಕಿತ್ಸೆಗಾಗಿ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆ ವೇಳೆ ಪಿಎಸ್‌‍ಐ ತೇಜಸ್ವಿ ಅವರಿಗೂ ಗಾಯವಾಗಿದ್ದು, ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ದೀಪಕ್‌ನನ್ನು ಭಟ್ಕಳ ರೈಲ್ವೆ ನಿಲ್ದಾಣದ ಬಳಿ ಬಂಧಿಸಿ ಕರೆತಂದರೆ, ಮತ್ತೊಬ್ಬ ಆರೋಪಿ ಅನ್‌ಮೋಲ್‌ನನ್ನು ಕುಮಟ ಟೋಲ್‌ ಪ್ಲಾಜಾ ಬಳಿ ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೃತ್ಯಕ್ಕೆ ಬಳಸಲಾಗಿದ್ದ ಬೈಕ್‌ನ್ನು ವಶಪಡಿಸಿಕೊಂಡಿರುವ ಪೊಲೀಸರು, ಬೈಕ್‌ನ ಮೂಲ ವಾರಸುದಾರನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
ಈ ಆರೋಪಿಗಳು ವ್ಯಕ್ತಯೊಬ್ಬರಿಂದ ಹಣ ಪಡೆದು ಡೇವಿಡ್‌ ಡಿಸೋಜ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆಂಬುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

RELATED ARTICLES
spot_img

Latest News