ಬೆಂಗಳೂರು, ಆ.8- ಕಳೆದ ಮೂರು ತಿಂಗಳಲ್ಲಿ ರಾಜ್ಯಾದ್ಯಂತ ನಡೆಸಿದ ಕಾರ್ಯಾಚರಣೆಯಲ್ಲಿ ಆಫ್ರಿಕಾ ರಾಷ್ಟ್ರಗಳು ಹಾಗೂ ಬಾಂಗ್ಲಾದೇಶ ಸೇರಿದಂತೆ ವಿವಿಧ ದೇಶಗಳಿಂದ ಬಂದಿರುವ ಒಂದು ಸಾವಿರಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಪತ್ತೆಹಚ್ಚಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ವಲಸೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಯಾವಾಗಲೋ ಒಮ್ಮೆ ಕಾರ್ಯಾಚರಣೆ ನಡೆಸಿ ಸುಮನಿರುವ ಬದಲು, ನಿರಂತರವಾಗಿ ಕಾರ್ಯಾಚರಣೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗುವುದು. ಗಡಿ ಭದ್ರತಾ ಪಡೆ (ಬಿಎಸ್ಎಫ್) ಹಾಗೂ ಎಫ್ಆರ್ಆರ್ಒ ಸೇರಿದಂತೆ ಸಂಬಂಧಿತ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅಕ್ರಮ ವಲಸಿಗರನ್ನು ಎಫ್ಆರ್ಆರ್ಒಗೆ ವಹಿಸಲಾಗಿದೆ, ಇನ್ನೂ ಮುಂದೆ ರಾಜ್ಯಾದ್ಯಂತ ಪದೇಪದೆ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದರು. ಕರ್ನಾಟಕವು ಬಾಂಗ್ಲಾದೇಶ, ನೇಪಾಳ ಸೇರಿದಂತೆ ಯಾವುದೇ ದೇಶದೊಂದಿಗೆ ನೇರವಾಗಿ ಗಡಿ ಹಂಚಿಕೊಂಡಿಲ್ಲ. ಗಡಿ ರಕ್ಷಣೆ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ.
ಈ ಜವಾಬ್ದಾರಿಯನ್ನು ಕೇಂದ್ರ ಸರಿಯಾಗಿ ನಿರ್ವಹಿಸಬೇಕಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ತ್ರಿಪುರ ಸೇರಿದಂತೆ ಈಶಾನ್ಯ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ನಿಗಾ ಅಗತ್ಯವಿದೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ ಮತ್ತು ಶೇರ್ಗಳಿಗಾಗಿ ಕೆಲವರು ಕ್ಯಾಮೆರಾ ಹಿಡಿದುಕೊಂಡು ಸ್ಲಂಗಳಿಗೆ ಹೋಗಿ, ನೀವು ಯಾವ ದೇಶದವರು? ಎಲ್ಲಿಂದ ಬಂದಿದ್ದೀರಿ? ಎಂದು ಪ್ರಶ್ನಿಸುವ ಹೊಸ ಪ್ರವೃತ್ತಿ ಕಂಡುಬರುತ್ತಿದೆ. ಇಂತಹ ಸ್ವಯಂಪ್ರೇರಿತ ಚಟುವಟಿಕೆಗಳು ಅಕ್ರಮವಾಗಿ ವಲಸೆ ಬಂದವರನ್ನು ಎಚ್ಚೆತ್ತುಕೊಳ್ಳುವಂತೆ ಮಾಡುತ್ತವೆ. ಇದರಿಂದ ಪೊಲೀಸರ ಕಾರ್ಯಾಚರಣೆಗಳಿಗೆ ತೊಂದರೆಯಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಅಕ್ರಮವಾಗಿ ವಲಸೆ ಬಂದ ವ್ಯಕ್ತಿಗಿಂತಲೂ ಆತನನ್ನು ದೇಶದೊಳಗೆ ಅಕ್ರಮವಾಗಿ ಕರೆತಂದ ಟೇಕೆದಾರ್ ಎಂಬ ಏಜೆಂಟ್ ನಮಗೆ ಹೆಚ್ಚು ಮುಖ್ಯ. ವಿದೇಶಿಗರನ್ನು ಅಕ್ರಮವಾಗಿ ಭಾರತಕ್ಕೆ ಕರೆತಂದು ಅವರಿಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ದಾಖಲೆಗಳನ್ನು ಮಾಡಿಸಿಕೊಟ್ಟು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುತ್ತಿರುವ ಜಾಲವನ್ನು ಪತ್ತೆಹಚ್ಚಬೇಕಿದೆ ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂಪ್ರೇರಿತವಾಗಿ ಕಾರ್ಯಾಚರಣೆ ನಡೆಸುವುದು ದೇಶದ ಭದ್ರತೆಗೆ ಹಾನಿಕಾರಕ. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಪ್ರಶ್ನೆಗಳನ್ನು ಕೇಳಿದಾಗ ತಪ್ಪಿತಸ್ಥರು ಹಾಗೂ ಪ್ರಮುಖ ಆರೋಪಿಗಳು ಎಚ್ಚೆತ್ತುಕೊಳ್ಳುವ ಸಾಧ್ಯತೆ ಇದೆ. ಯಾರ ಬಳಿಯಾದರೂ ದಾಖಲೆ ಸಮೇತ ಮಾಹಿತಿ ಇದ್ದರೆ ಅವರುಗಳು ಪೊಲೀಸರಿಗೆ ನೀಡಬೇಕು. ನಾವು ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸುತ್ತೇವೆ. ಇನ್ನು ಮುಂದೆ ಇಂತಹ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಪೊಲೀಸರು ಕೆಲಸ ಮಾಡುತ್ತಿಲ್ಲ, ಸರ್ಕಾರ ನಿದ್ದೆ ಮಾಡುತ್ತಿದೆ ಎಂದು ಕೆಲವರು ಟೀಕಿಸುತ್ತಾರೆ. ಆದರೆ ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗುರುತಿಸುವುದಕ್ಕಿಂತಲೂ ಹೆಚ್ಚಿನ ಜನರನ್ನು ಗುರುತಿಸಲಾಗಿದೆ. ಪ್ರತಿಯೊಂದು ಕಾರ್ಯಾಚರಣೆಯ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲು ಸಾಧ್ಯವಿಲ್ಲ. ಹಲವು ರಹಸ್ಯ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದರನ ವಿರುದ್ಧ ಸಂತ್ರಸ್ತರು ದೂರು ನೀಡಿದ್ದು, ಎಫ್ಐಆರ್ ಕೂಡ ದಾಖಲಾಗಿದೆ. ಈ ವಿಚಾರದಲ್ಲಿ ಉತ್ತರ ನೀಡಬೇಕಿರುವುದು ಅವರೇ ಹೊರತು ನಾವಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
