Homeಇದೀಗ ಬಂದ ಸುದ್ದಿಸಂಪುಟದಲ್ಲಿ ಯಾವುದೇ ಬದಲಾವಣೆ ಇಲ್ಲ 'ಹೈ' ಖಡಕ್‌ ಸಂದೇಶ

ಸಂಪುಟದಲ್ಲಿ ಯಾವುದೇ ಬದಲಾವಣೆ ಇಲ್ಲ ‘ಹೈ’ ಖಡಕ್‌ ಸಂದೇಶ

ಬೆಂಗಳೂರು, ಆ.8- ಸಚಿವ ಸಂಪುಟ ವಿಸ್ತರಣೆ ಮುಗಿದ ಅಧ್ಯಾಯ. ಯಾರು ಎಷ್ಟೇ ಗದ್ದಲ ಮಾಡಿದರೂ ಉಳಿದ ಯಾವ ಸ್ಥಾನಗಳು ಬದಲಾಗುವುದಿಲ್ಲ. ಸಂಪುಟದಲ್ಲಿ ಖಾಲಿಯಿರುವ ಒಂದು ಸ್ಥಾನಕ್ಕೆ ಮಹಿಳೆಯರನ್ನು ನೇಮಿಸುವುದು ಹೊರತು ಪಡಿಸಿದರೆ ಉಳಿದಂತೆ ಯಥಾಸ್ಥಿತಿ ಮುಂದುವರೆಯಲಿದೆ ಎಂಬ ಸಂದೇಶ ರವಾನಿಸಲಾಗಿದೆ. ಈ ಮೂಲಕ ಕೆಲ ಸಚಿವರನ್ನು ಬದಲಾವಣೆ ಮಾಡಿ, ಹಿರಿಯರಿಗೆ ಅವಕಾಶ ನೀಡಲಾಗುತ್ತಿದೆ ಎಂಬ ವದಂತಿಗಳನ್ನು ತಳ್ಳಿ ಹಾಕಲಾಗಿದೆ. ಡಿ.ಕೆ.ಶಿವಕುಮಾರ್‌ ಅವರು ದೆಹಲಿ ಪ್ರವಾಸಕ್ಕೆ ತೆರಳುತ್ತಿರುವುದರಿಂದಾಗಿ ಸಂಪುಟ ಪುನರ್‌ ರಚನೆಯ ವದಂತಿಗಳಿಗೆ ರೆಕ್ಕೆಪುಕ್ಕ ಬಂದಿದೆ.

ಮುಖ್ಯಮಂತ್ರಿಯವರ ತವರು ಜಿಲ್ಲೆ ದಕ್ಷಿಣ ಬೆಂಗಳೂರಿಗೆ ಎರಡು ಸಚಿವ ಸ್ಥಾನಗಳು ದೊರೆತಿವೆ. ಹೀಗಾಗಿ ಎಚ್‌.ಸಿ.ಬಾಲಕೃಷ್ಣ ಅವರನ್ನು ಕೈ ಬಿಡಲಾಗುತ್ತದೆ. ಮಂಡ್ಯ ಜಿಲ್ಲೆಗೂ ಎರಡು ಸ್ಥಾನಗಳು ದೊರತ್ತಿದ್ದು, ಅದರಲ್ಲಿ ಚೆಲುವರಾಯಸ್ವಾಮಿಯವರ ಹೆಸರು ಕೈ ಬಿಡುವವರ ಪಟ್ಟಿಯಲ್ಲಿ ಗುರುತಿಸಲಾಗಿದೆ. ಬೆಂಗಳೂರು ನಗರದಲ್ಲಿ ಮುಸ್ಲಿಂ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ರಿಜ್ವಾನ್‌ ಅರ್ಷದ್‌ ಉಳಿಸಿಕೊಂಡು ಜಮೀರ್‌ ಅಹಮದ್‌ಖಾನ್‌ ಅವರನ್ನು ಕೈ ಬಿಡಲಾಗುತ್ತದೆ ಎಂಬ ವದಂತಿಗಳು ನಿನ್ನೆ ವ್ಯಾಪಕವಾಗಿದ್ದವು.

ಆದರೆ ಹೈಕಮಾಂಡ್‌ ಸಂದೇಶ ರವಾನಿಸಿದ್ದು, ಯಾವುದೇ ಕಾರಣಕ್ಕೂ ಈಗ ರಚನೆಯಾಗಿರುವ ಸಂಪುಟದಲ್ಲಿ ಬದಲಾವಣೆ ಇಲ್ಲ ಎಂಬ ಖಚಿತ ಆಶ್ವಾಸನೆ ನೀಡಲಾಗಿದೆ. ತಮಗೆ ಸಚಿವ ಸ್ಥಾನ ನೀಡಲೇ ಬೇಕು. ಇಲ್ಲವಾದರೆ ಬೇರೆ ಯಾವುದೇ ಸಂಧಾನಗಳಿಗೆ ತಮ ಸಮತಿ ಇಲ್ಲ ಎಂದು ಹಿರಿಯ ಶಾಸಕರಾದ ಟಿ.ಬಿ.ಜಯಚಂದ್ರ ಮತ್ತು ಎಂ. ಕೃಷ್ಣಪ್ಪ ಬಲವಾದ ಪಟ್ಟು ಹಿಡಿದಿದ್ದರು. ಕಷ್ಣಪ್ಪ ಅವರು ಪಟ್ಟು ಸಡಿಲಿಸಿಲ್ಲ. ಜಯಚಂದ್ರ ಅವರು ನಿನ್ನೆ ಡಿ.ಕೆ.ಶಿವಕುಮಾರ್‌ ಅವರ ಸಂಧಾನದಿಂದ ಸಮಾಧಾನಗೊಂಡಿದ್ದಾರೆ.

ಸಿದ್ದರಾಮಯ್ಯ ಅವರು ಶಿಫಾರಸ್ಸು ಮಾಡಿದ್ದ ಬಸವರಾಜ್‌ ಶಿವಣ್ಣನವರ್‌, ರಾಘವೇಂದ್ರ ಹಿಟ್ನಾಳ್‌ ಅವರಲ್ಲಿ ಒಬ್ಬರನ್ನು ಪರಿಗಣಿಸಬೇಕು ಎಂಬ ಚರ್ಚೆಗಳಿದ್ದವು. ಬಿ.ನಾಗೇಂದ್ರ ಅವರ ಸೇರ್ಪಡೆಯಿಂದ ವಿರೋಧ ಪಕ್ಷಗಳಿಗೆ ಅಸ್ತ್ರ ಕೊಟ್ಟಂತಾಗಿದೆ. ಅವರನ್ನು ಬದಲಾವಣೆ ಮಾಡಬೇಕು ಎಂಬ ಒತ್ತಡಗಳಿವೆ. ನಾಗೇಂದ್ರ ಅವರ ಬದಲಿಗೆ ಅದೇ ಸಮುದಾಯದ ಅನ್ನಪೂರ್ಣ ತುಕಾರಾಮ್‌ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಚರ್ಚೆಗಳು ನಡೆಯುತ್ತಿದ್ದವು.

ಬಾಕಿಯಿರುವ ಒಂದು ಸ್ಥಾನಕ್ಕೆ ಗಾಯತ್ರಿ ಶಾಂತೇಗೌಡ ನಿಯೋಜನೆಗೊಳ್ಳುವುದು ಬಹುತೇಕ ಖಚಿತವಾಗಿದೆ. ಮಹಿಳಾ ಕೋಟದ ಆಕಾಂಕ್ಷಿಗಳಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್‌, ರೂಪಕಲಾ, ಕನೀಜ್‌ ಫಾತಿಮಾ, ನಯನ ಮೋಟಮ, ವಿಧಾನ ಪರಿಷತ್‌ ಸದಸ್ಯರಾದ ಉಮಾಶ್ರೀ, ಆರತಿ ಕೃಷ್ಣ ಅವರು ಪೈಪೋಟಿ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನಿನ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು. ಈ ವೇಳೆ ಸಂಪುಟ ಪುನರ್‌ ರಚನೆ, ಖಾತೆ ಹಂಚಿಕೆ ವಿಚಾರವಾಗಿ ಚರ್ಚೆಗಳಾಗಿದ್ದವು. ಆದರೆ ಹೈಕಮಾಂಡ್‌ನ ಅಂಕಿತ ಪಡೆಯಲು ಮುಖ್ಯಮಂತ್ರಿಯವರು ಇಂದು ಅಥವಾ ನಾಳೆ ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಂಪುಟ ಪನರ್‌ ರಚನೆ ವಿಚಾರವಾಗಿ ಯಾವುದೇ ಚರ್ಚೆ ಇಲ್ಲ. ಪಕ್ಷದ ವರಿಷ್ಠರು, ರಾಜ್ಯ ನಾಯಕರ ಜೊತೆ ಚರ್ಚೆ ನಡೆಸಿದ ಬಳಿಕವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೈಕಮಾಂಡ್‌ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ.

RELATED ARTICLES
spot_img

Latest News