ಬೆಂಗಳೂರು,ಆ.11- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು, ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಅಂಗವಿಕಲರ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಹಾಲು ಉತ್ಪಾದಕರಿಗೆ ನೀಡಬೇಕಾದ ಪ್ರೋತ್ಸಾಹಧನವನ್ನು ಸರ್ಕಾರ ಬಿಡುಗಡೆ ಮಾಡದೆ, ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಮತ್ತೊಂದೆಡೆ, ಮಳೆ ವಿಳಂಬದಿಂದಾಗಿ ಬೆಳೆಗಳು ಕೈಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಬರದ ಸಂಕಷ್ಟದಿಂದ ರೈತರು ತತ್ತರಿಸಿದ್ದಾರೆ ಎಂದು ಹೇಳಿದರು.
ಪಕ್ಷದ ಕಚೇರಿಯಲ್ಲಿ ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ರಾಜ್ಯದ ಜನರು ಎದುರಿಸುತ್ತಿರುವ ಈ ಜ್ವಲಂತ ಸಮಸ್ಯೆಗಳ ಕುರಿತು ವಿಧಾನಮಂಡಲದ ಅಧಿವೇಶನದಲ್ಲಿ ಬಿಜೆಪಿ ಸಮರ್ಥವಾಗಿ ಧ್ವನಿ ಎತ್ತಲಿದೆ. ಜನರ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ನಡೆಯಬೇಕಾದರೆ ಅಧಿವೇಶನವು ಸುಸೂತ್ರವಾಗಿ ಮತ್ತು ಸಮರ್ಪಕವಾಗಿ ನಡೆಯಬೇಕು. ಸರ್ಕಾರವು ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವ ಸರ್ಕಾರದ ನಿರ್ಧಾರವನ್ನು ಖಂಡಿಸಿದ ಅವರು, 186 ಕೋಟಿ ಮೊತ್ತದ ಹಗರಣ ನಡೆದಿರುವುದನ್ನು ಅವರೇ ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಸಂಪೂರ್ಣ ಕ್ಲೀನ್ ಚಿಟ್ ದೊರೆತಿಲ್ಲ. ಇಂತಹ ಸಂದರ್ಭದಲ್ಲಿ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವುದು ಅಕ್ಷಮ್ಯ ಎಂದರು.
ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಲೇಬೇಕಾದ ಅನಿವಾರ್ಯತೆ ಏನಿತ್ತು? ಸರ್ಕಾರಕ್ಕೆ ಯಾವ ಭಯವಿತ್ತು? ಎಂದು ಪ್ರಶ್ನಿಸಿದ ಅವರು, ಅಧಿವೇಶನ ಆರಂಭವಾಗುವ ಮುನ್ನವೇ ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ನಾಗೇಂದ್ರ ಅವರ ರಾಜೀನಾಮೆ ಪಡೆಯದಿದ್ದರೆ ಸದನದ ಒಳಗೂ-ಹೊರಗೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಬರದ ಪರಿಸ್ಥಿತಿ ಗಂಭೀರವಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಸರ್ಕಾರಕ್ಕೆ ರಾಜ್ಯದ ಜನರ ಸಮಸ್ಯೆಗಳಿಗಿಂತ ಕಾಂಗ್ರೆಸ್ ಹೈಕಮಾಂಡ್ನ ರಾಜಕಾರಣವೇ ಮುಖ್ಯವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರವೇ ಬರ ಘೋಷಣೆ ಮಾಡದೆ ಕೇಂದ್ರ ಸರ್ಕಾರ ಹೇಗೆ ಬರ ಪರಿಹಾರ ನೀಡುತ್ತದೆ? ಬರ ಘೋಷಣೆ ಮಾಡದೆಯೇ ಕೇಂದ್ರ ಸರ್ಕಾರ ಪರಿಹಾರ ನೀಡಿರುವ ಒಂದು ಉದಾಹರಣೆಯನ್ನು ಖರ್ಗೆ ತೋರಿಸಲಿ ಎಂದು ಸವಾಲು ಹಾಕಿದರು.
ಬಿಡದಿ ರೈತರ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡುವ ವಿಚಾರದಲ್ಲಿ ಯಾವುದೇ ಗೊಂದಲವಿಲ. ರೈತರ ಪರವಾಗಿ ಬಿಜೆಪಿ ಯಾವತ್ತೂ ಇರುತ್ತದೆ. ಬಿಡದಿ ಪಾದಯಾತ್ರೆಯನ್ನು ನಾವು ಮೊದಲೇ ಘೋಷಣೆ ಮಾಡಿದ್ದೆವು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ದಿನಾಂಕ ನಿಗದಿ ಮಾಡಬೇಕು ಎಂದುಕೊಂಡಿದ್ದೆವು. ಆದರೆ ಅಷ್ಟರಲ್ಲಿ ಚನ್ನಮ ದೇವೇಗೌಡರು ನಿಧನರಾದರು ಎಂದರು.
ಅವರ ಅಂತ್ಯಕ್ರಿಯೆ ಕಾರ್ಯಗಳು ಮುಗಿದ ಬಳಿಕ ನಿಖಿಲ್ ಕುಮಾರಸ್ವಾಮಿ ಅವರು ಪಾದಯಾತ್ರೆಯ ದಿನಾಂಕವನ್ನು ಘೋಷಿಸಿದರು. ನಂತರ ಬಿಜೆಪಿ ಕೋರ್ ಕಮಿಟಿಯಲ್ಲಿ ಈ ಕುರಿತು ಚರ್ಚಿಸಿ, ಪಾದಯಾತ್ರೆಗೆ ಸಾಂಕೇತಿಕ ಬೆಂಬಲ ನೀಡಲು ನಿರ್ಧರಿಸಲಾಯಿತು. ಅದರಂತೆ ಪಾದಯಾತ್ರೆ ಉದ್ಘಾಟನೆಯ ದಿನ ವಿರೋಧ ಪಕ್ಷದ ನಾಯಕ ಅಶೋಕ್ ಭಾಗವಹಿಸಿ ಸಾಂಕೇತಿಕವಾಗಿ ಬೆಂಬಲ ಸೂಚಿಸಿ ಬಂದಿದ್ದಾರೆಂದು ವಿಜಯೇಂದ್ರ ತಿಳಿಸಿದರು.
ಮಧು ಬಂಗಾರಪ್ಪ ಅವರೊಂದಿಗೆ ತಾನು ಮಾತನಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಕಡೆ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಮಧು ಬಂಗಾರಪ್ಪ ಅವರೊಂದಿಗೆ ನಾನು ಯಾವುದೇ ಉಲ್ಟಾ-ಸೀದಾ ಮಾತುಗಳನ್ನು ಆಡಿಲ್ಲ. ನೇರವಾಗಿಯೇ ಮಾತನಾಡಿದ್ದೇನೆ. ಜೆಡಿಎಸ್ ಪಾದಯಾತ್ರೆಗೆ ಬಿಜೆಪಿ ಸಾಂಕೇತಿಕ ಬೆಂಬಲ ನೀಡಿರುವುದನ್ನೂ ಸ್ಪಷ್ಟವಾಗಿ ತಿಳಿಸಿದ್ದೇನೆ.
ನಮ ಹೋರಾಟಕ್ಕೂ ಮುನ್ನ ಕೆಲವು ರೈತರು ಪರಿಹಾರ ಪಡೆದು ಹಿಂದಕ್ಕೆ ಸರಿದಿರುವ ವಿಚಾರವನ್ನೂ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.ಜೆಡಿಎಸ್ ನೇತೃತ್ವದ ಪಾದಯಾತ್ರೆಗೆ ಬಿಜೆಪಿ ಸಾಂಕೇತಿಕವಾಗಿ ಬೆಂಬಲ ನೀಡಿದೆ. ಆದರೆ ಇದನ್ನು ಬಿಡದಿ ರೈತರ ಹೋರಾಟಕ್ಕೆ ಬಿಜೆಪಿ ಕೇವಲ ಸಾಂಕೇತಿಕ ಬೆಂಬಲ ನೀಡಿದೆ ಎಂಬ ಅರ್ಥದಲ್ಲಿ ವ್ಯಾಖ್ಯಾನಿಸಬಾರದು ಎಂದು ವಿಜಯೇಂದ್ರ ತಿಳಿಸಿದರು.
