ಲಖ್ನೋ,ಆ.11-ಉತ್ತರಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರವು, ರಾಜ್ಯವನ್ನು ಕಾಡುತ್ತಿದ್ದ ಮಾಫಿಯಾ ಹಾವಳಿ ಮತ್ತು ಮಾರಣಾಂತಿಕ ರೋಗಗಳನ್ನು ಯಶಸ್ವಿಯಾಗಿ ಮಟ್ಟಹಾಕಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಪೂರ್ವ ಉತ್ತರ ಪ್ರದೇಶದಲ್ಲಿ ಹಿಂದೆ ಮಾಫಿಯಾ ಸಂಸ್ಕೃತಿ ಮತ್ತು ಸೊಳ್ಳೆಗಳ ಹಾವಳಿ ವಿಪರೀತವಾಗಿತ್ತು. ಮಾಫಿಯಾಗಳು ಜನರ ರಕ್ತ ಹೀರುತ್ತಿದ್ದರೆ, ಸೊಳ್ಳೆಗಳು ಮಾರಣಾಂತಿಕ ರೋಗಗಳನ್ನು ಹರಡುತ್ತಿದ್ದವು ಎಂದು ತಿಳಿಸಿದ್ದಾರೆ.
ನಮಗಿಂತ ಹಿಂದಿನ ಸರ್ಕಾರಗಳು ಮಾಫಿಯಾಗಳಿಗೆ ತಲೆಬಾಗುತ್ತಿದ್ದವು ಮತ್ತು ಅವರಿಗೆ ಸಮಾನಾಂತರ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟಿದ್ದವು ಎಂದು ಆರೋಪಿಸಿದ್ದಾರೆ.
ಕೌಶಲ್ಯ ಅಭಿವೃದ್ಧಿ, ಕೃತಕ ಬುದ್ಧಿಮತ್ತೆ (ಂ) ಹಾಗೂ ಬಾಹ್ಯಾಕಾಶ ತಂತ್ರಜ್ಞಾನದಂತಹ ಆಧುನಿಕ ಶಿಕ್ಷಣಕ್ಕೆ ಒತ್ತು ನೀಡಲಾಗಿದ್ದು, ಅಭ್ಯುದಯ ಯೋಜನೆ ಮೂಲಕ ಸ್ಪರ್ಧಾತಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ.
ಪೂರ್ವ ಉತ್ತರ ಪ್ರದೇಶವು ದೀರ್ಘಕಾಲದವರೆಗೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಪ್ರದೇಶವಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಾಗಲಿ ಅಥವಾ ಸ್ವಾತಂತ್ರ್ಯದ ನಂತರದ ದಶಕಗಳಲ್ಲಾಗಲಿ ಈ ಪ್ರದೇಶವು ಪ್ರವಾಹ, ಕಾಯಿಲೆಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳಿಂದ ತತ್ತರಿಸಿತ್ತು. ವಿಶೇಷವಾಗಿ ಮೆದುಳು ಉರಿಯೂತದಂತಹ ಕಾಯಿಲೆಗಳು ಸಾವಿರಾರು ಮಕ್ಕಳ ಜೀವ ತೆಗೆದುಕೊಂಡಿದ್ದರೂ, ಹಿಂದಿನ ಸರ್ಕಾರಗಳು ಗಂಭೀರ ಕ್ರಮ ಕೈಗೊಂಡಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಸ್ತುತ ಸರ್ಕಾರದ ಆಡಳಿತದಲ್ಲಿ ಕಠಿಣ ಕಾನೂನು ಕ್ರಮಗಳ ಮೂಲಕ ಮಾಫಿಯಾ ಜಾಲಗಳನ್ನು ಮಟ್ಟಹಾಕಲಾಗಿದ್ದು, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ತಳಮಟ್ಟದಿಂದ ಬದಲಾವಣೆಗಳನ್ನು ತರಲಾಗಿದೆ ಎಂದು ಮುಖ್ಯಮಂತ್ರಿಗಳು ಸಮರ್ಥಿಸಿಕೊಂಡಿದ್ದಾರೆ.
