Homeರಾಜ್ಯಮಡಿಕೇರಿ : ಶೌಚಾಲಯದ ಗುಂಡಿಗೆ ಬಿದ್ದು ಇಬ್ಬರು ಸಾವು

ಮಡಿಕೇರಿ : ಶೌಚಾಲಯದ ಗುಂಡಿಗೆ ಬಿದ್ದು ಇಬ್ಬರು ಸಾವು

ಮಡಿಕೇರಿ,ಆ.11-ಆಯತಪ್ಪಿ ಮಹಿಳೆಯೋರ್ವರು ಶೌಚಾಲಯದ ಗುಂಡಿಗೆ ಬಿದ್ದಿದ್ದು, ಇದನ್ನು ಕಂಡು ಅವರನ್ನು ರಕ್ಷಿಸಲು ಮುಂದಾದ ವ್ಯಕ್ತಿ ಕೂಡ ಸಾವನ್ನಪ್ಪಿದ ದಾರುಣ ಘಟನೆ ಕೊಡಗುಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹೊಸತೋಟ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಗ್ರಾಮದ ಜನಾರ್ದನ (43) ಹಾಗೂ ನಿತ್ಯ (46) ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ನಿತ್ಯ ಅವರು ತಮ ಮನೆಗೆ ಸ್ವಲ್ಪ ಶುಂಠಿ ಬೇಕೆಂದು ಸಂಬಂಧಿಕರ ಮನೆಗೆ ತೆರಳಿದ್ದರು. ಅಲ್ಲಿ ಇಲ್ಲದ ಕಾರಣ ನಾನು ಗದ್ದೆಗೆ ಹೋಗಿ ಶುಂಠಿ ತೆಗೆದುಕೊಂಡು ಬರುತ್ತೇನೆ ಎಂದು ನಿತ್ಯ ತೆರಳಿದ್ದಾರೆ.

ಗದ್ದೆಯ ಸಮೀಪದಲ್ಲಿದ್ದ ಹಳೆಯ ಶೌಚಾಲಯದ ಗುಂಡಿ ಏಕಾಏಕಿ ಕುಸಿದ ಪರಿಣಾಮ ಅವರು ಅದರೊಳಗೆ ಬಿದ್ದಿದ್ದಾರೆ.ಇದನ್ನು ಕಂಡ ಜನಾರ್ದನ ಅವರು ನಿತ್ಯ ಅವರನ್ನು ರಕ್ಷಿಸಲು ಗುಂಡಿಯೊಳಗೆ ಇಳಿದಿದ್ದಾರೆ. ಆದರೆ, ಗುಂಡಿಯೊಳಗೆ ಸಂಗ್ರಹವಾಗಿದ್ದ ವಿಷಕಾರಿ ಅನಿಲದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಡಿಕೇರಿ ಶಾಸಕ ಮಂತರ್‌ ಗೌಡ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಘಟನೆಯ ಕುರಿತು ಸೋಮವಾರಪೇಟೆ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES
spot_img

Latest News