Homeರಾಜ್ಯನನ್ನ ಇ-ಖಾತಾ ನನ್ನ ಹಕ್ಕು ಯೋಜನೆಗೆ ಅಡ್ಡಗಾಲಾದರೆ ಅಧಿಕಾರಿಗಳು..?

ನನ್ನ ಇ-ಖಾತಾ ನನ್ನ ಹಕ್ಕು ಯೋಜನೆಗೆ ಅಡ್ಡಗಾಲಾದರೆ ಅಧಿಕಾರಿಗಳು..?

ಬೆಂಗಳೂರು, ಆ.11- ಸರ್ಕಾರದ ನನ್ನ ಇ-ಖಾತಾ ನನ್ನ ಹಕ್ಕು ಯೋಜನೆಗೆ ಅಧಿಕಾರಿಗಳೇ ಅಡ್ಡಗಾಲಾಗ್ತಿದ್ದಾರಾ ಎಂಬ ಅನುಮಾನ ಕಾಡತೊಡಗಿದೆ.ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದೀಗ ಅಧಿಕಾರಿಗಳ ಲಾಗಿನ್‌ನಲ್ಲೇ ಸಿಲುಕಿಕೊಂಡಿದೆ ಅನ್ನೋ ಆರೋಪ ಕೇಳಿಬರ್ತಿದೆ.

ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ಮಾಡಿಸಿಕೊಳ್ಳಬೇಕು ಅಂತಾ ಜನ ಅರ್ಜಿ ಹಾಕಿ ತಿಂಗಳುಗಟ್ಟಲೆ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಅರ್ಜಿದಾರರ ಎಲ್ಲಾ ಪರಿಶೀಲನೆ ಮುಗಿದಿದ್ರೂ, ಅಂತಿಮ ಅನುಮತಿಗಾಗಿ ಜಂಟಿ ಆಯುಕ್ತರ ಲಾಗಿನ್‌ನಲ್ಲಿ ಸಾವಿರಾರು ಅರ್ಜಿಗಳು ಪೆಂಡಿಂಗ್‌ ಇವೆ ಅನ್ನೋ ಆರೋಪ ಕೇಳಿಬಂದಿದೆ.

ನಗರದಲ್ಲಿ ಈವರೆಗೆ 57 ಸಾವಿರಕ್ಕೂ ಅಧಿಕ ಮಂದಿ ಎ ಖಾತೆಗಾಗಿ ಅರ್ಜಿ ಸಲ್ಲಿಸಿದ್ದಾರೆ.ಆದರೆ, ಈ ಪೈಕಿ ಸುಮಾರು 20 ಸಾವಿರ ಅರ್ಜಿಗಳಷ್ಟೇ ವಿಲೇವಾರಿ ಆಗಿವೆ ಎನ್ನಲಾಗ್ತಿದೆ.ಅಂದರೆ ಇನ್ನೂ 37 ಸಾವಿರಕ್ಕೂ ಅಧಿಕ ಅರ್ಜಿಗಳು ವಿಲೇವಾರಿಗೆ ಬಾಕಿ ಇದೆ. ಅರ್ಜಿದಾರರ ದಾಖಲೆ ಪರಿಶೀಲನೆ ಸೇರಿದಂತೆ ಬಹುತೇಕ ಪ್ರಕ್ರಿಯೆಗಳು ಪೂರ್ಣಗೊಂಡಿದ್ದರೂ, ಅಂತಿಮ ಅನುಮತಿಗಾಗಿ ಜಂಟಿ ಆಯುಕ್ತರ ಲಾಗಿನ್‌ನಲ್ಲಿ ಅರ್ಜಿಗಳು ಪೆಂಡಿಂಗ್‌ ಇವೆ ಅನ್ನೋ ಆರೋಪ ಕೇಳಿ ಬಂದಿದೆ.

ಲಂಚಕ್ಕಾಗಿ ಅರ್ಜಿ ಪೆಂಡಿಂಗ್‌ ?
ಕೆಲಸ ಮಾಡಿಕೊಡಲು ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.ಅರ್ಜಿಗಳಿಗೆ ಅನುಮತಿ ನೀಡದೇ ಬೇಕಂತಲೇ ಪೆಂಡಿಂಗ್‌ನಲ್ಲಿ ಇಟ್ಟು, ಲಂಚಕ್ಕೆ ಬೇಡಿಕೆ ಇಡಲಾಗ್ತಿದೆ ಅನ್ನೋ ಆರೋಪಗಳು ಕೇಳಿಬರುತ್ತಿವೆ.

ರಾಜ್ಯ ಸರ್ಕಾರ ನಿಗದಿಪಡಿಸಿರುವ ನಿಯಮದಂತೆ ಮಾರ್ಗಸೂಚಿ ಬೆಲೆಯ ಶೇ.2 ರಷ್ಟು ಶುಲ್ಕ ಪಾವತಿಸಬೇಕಾಗುತ್ತದೆ.ಆದ್ರೆ ಮಾರ್ಗಸೂಚಿ ಬೆಲೆಗಿಂತ ಹೆಚ್ಚಿನ ದರಕ್ಕೆ ಆಸ್ತಿ ಮೌಲ್ಯ ನಿಗದಿ ಮಾಡಿದರೆ, ಅರ್ಜಿದಾರರು ಸಹಜವಾಗಿಯೇ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ.ಇದರಿಂದಾಗಿ ಕೆಲವರಿಗೆ ಎರಡು ಪಟ್ಟು, ಮೂರು ಪಟ್ಟು ಹೆಚ್ಚುವರಿ ಮೊತ್ತದ ಹೊರೆ ಬೀಳುತ್ತಿದೆ ಅನ್ನೋ ಆರೋಪ ಕೇಳಿಬರುತ್ತಿದೆ.

ಮೊದಲು ಹೆಚ್ಚುವರಿ ಹೊರೆ ಬೀಳುವಂತೆ ಮಾಡಿ, ಬಳಿಕ ಮೊತ್ತ ಕಡಿಮೆ ಮಾಡಲು ಲಂಚಕ್ಕೆ ಬೇಡಿಕೆ ಇಡಲಾಗ್ತಿದೆ ಅನ್ನೋ ಗಂಭೀರ ಆರೋಪವೂ ಕೇಳಿಬಂದಿದೆ.

ಐದೂ ನಗರ ಪಾಲಿಕೆಗಳಲ್ಲೂ ಇದೇ ಕಥೆ?
ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ ಐದೂ ನಗರ ಪಾಲಿಕೆಗಳಲ್ಲೂ ಜಂಟಿ ಆಯುಕ್ತರ ಲಾಗಿನ್‌ನಲ್ಲಿ ಸಾವಿರಾರು ಅರ್ಜಿಗಳು ಪೆಂಡಿಂಗ್‌ ಇರುವ ಆರೋಪ ಕೇಳಿಬಂದಿದೆ.ಅಂದಹಾಗೆ, ಖಾತೆ ಪರಿವರ್ತನೆಗೆ ಸಂಬಂಧಿಸಿದಂತೆ ಲಂಚ ಕೇಳಿದ ಆರೋಪದ ಮೇಲೆ ಪಶ್ಚಿಮ ನಗರ ಪಾಲಿಕೆಯ ಜಂಟಿ ಆಯುಕ್ತೆಯೊಬ್ಬರು ಇತ್ತೀಚೆಗೆ ಸಿಕ್ಕಿಬಿದ್ದಿರುವ ಪ್ರಕರಣವೂ ನಡೆದಿದೆ.

ಹೀಗಾಗಿ, ಒಂದೆಡೆ ಸರ್ಕಾರ ಜನರಿಗೆ ಅನುಕೂಲ ಕಲ್ಪಿಸಲು ಯೋಜನೆ ಜಾರಿಗೆ ತಂದಿದೆ. ಮತ್ತೊಂದೆಡೆ ಅದೇ ಯೋಜನೆ ಅಧಿಕಾರಿಗಳ ಕಚೇರಿ ಹಂತದಲ್ಲೇ ಸಿಲುಕಿಕೊಂಡಿದೆ ಅನ್ನೋ ಆರೋಪ.ಅರ್ಜಿ ಹಾಕಿದ ಜನ ಕಚೇರಿಗಳಿಗೆ ಅಲೆದಾಡಬೇಕು.. ಅರ್ಜಿ ಪೆಂಡಿಂಗ್‌ ಯಾಕೆ ಅಂತ ಅಧಿಕಾರಿಗಳನ್ನು ಕೇಳಬೇಕು.. ಕೊನೆಗೆ ಕೆಲಸ ಮಾಡಿಸಿಕೊಳ್ಳಲು ಲಂಚ ಕೊಡಬೇಕಾದ ಪರಿಸ್ಥಿತಿ ಎದುರಾಗ್ತಿದೆಯಾ ಅನ್ನೋ ಪ್ರಶ್ನೆ ಇದೀಗ ಎದುರಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಬಿಎ ಮುಖ್ಯ ಅಯುಕ್ತರು ಮಾತಾನಾಡಿ ಇನ್ನೂ ಕೂಡ 37 ಸಾವಿರಕ್ಕೂ ಅಧಿಕ ಅರ್ಜಿಗಳು ವಿಲೇವಾರಿಗೆ ಬಾಕಿ ಇದೆ,ಇದನ್ನು ಶೀಘ್ರವೇ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ, ಜನರಿಗೂ ಎ ಖಾತೆ ಪಡೆಯುವ ನಿಟ್ಟಿನಲ್ಲಿ ಮಾಹಿತಿಯ ಕೊರತೆ ಇದೆ. ಜನರು ಯಾರ ಮಾತೂ ಕೇಳ ಬಾರದು ನಮ್ಮ ವೆಬ್‌ ಸೈಟ್‌ ನಲ್ಲಿ ಈ ಸಂಬಂಧ ಮಾಹಿತಿ ಪ್ರಕಟಿಸಿದ್ದೇವೆ. ಮಧ್ಯವರ್ತಿಗಳು, ದಳ್ಳಾಳಿಗಳ ಕಾಟ ಇದೆ. ಈ ಬಗ್ಗೆ ಹಲವು ದೂರುಗಳು ನಮ್ಮ ಗಮನಕ್ಕೆ ಬಂದಿದೆ. ಜನರಿಗೆ ಅನುಕೂಲ ಆಗುವ ರೀತಿಯಲ್ಲಿ ಶೀಘ್ರವೇ ಅರ್ಜಿ ವಿಲೇವಾರಿ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

RELATED ARTICLES
spot_img

Latest News