Homeರಾಷ್ಟ್ರೀಯಲೋಕಸಭೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆ : ಚರ್ಚೆಗಳಿಲ್ಲದೆ ಮುಂಗಾರು ಅಧಿವೇಶನಕ್ಕೆ ತೆರೆ

ಲೋಕಸಭೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆ : ಚರ್ಚೆಗಳಿಲ್ಲದೆ ಮುಂಗಾರು ಅಧಿವೇಶನಕ್ಕೆ ತೆರೆ

Lok Sabha adjourned indefinitely: Monsoon session ends without debate

ನವದೆಹಲಿ,ಆ.13- ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್‌‍ ಕ್ರಮ ಹಾಗೂ ಅಯೋಧ್ಯೆಯ ರಾಮಮಂದಿರ ದೇಣಿಗೆಯ ಕಳ್ಳತನದ ಆರೋಪಗಳ ಕುರಿತು ವಿರೋಧ ಪಕ್ಷಗಳ ಗದ್ದಲ ಹಾಗೂ ಚರ್ಚೆಯಿಲ್ಲದೆ ಪ್ರಮುಖ ಮಸೂದೆಗಳ ಅಂಗೀಕಾರಕ್ಕೆ ಸಾಕ್ಷಿಯಾದ ಕೋಲಾಹಲಕಾರಿ ಮುಂಗಾರು ಅಧಿವೇಶನಕ್ಕೆ ತೆರೆ ಎಳೆಯುತ್ತಾ, ಲೋಕಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಸದನವು ದಿನದ ಕಲಾಪಕ್ಕಾಗಿ ಸೇರಿದ ತಕ್ಷಣ, ರಾಷ್ಟ್ರಗೀತೆಯ ಎಲ್ಲಾ ಆರು ಚರಣಗಳನ್ನು ನುಡಿಸಲಾಯಿತು. ನಂತರ ಸ್ಪೀಕರ್‌ ಓಂ ಬಿರ್ಲಾ ಅವರು ಸದನವನ್ನು ಅನಿರ್ದಿಷ್ಟಾವಧಿಗೆ (ನಿರ್ದಿಷ್ಟ ಅವಧಿಯಿಲ್ಲದೆ) ಮುಂದೂಡಿದರು.

ಅಧಿವೇಶನದ ಅವಧಿಯಲ್ಲಿ ಲೋಕಸಭೆಯ ಕಾರ್ಯಕ್ಷಮತೆ ಮತ್ತು ಉತ್ಪಾದಕತೆಯನ್ನು ಎತ್ತಿ ತೋರಿಸುವ ವಾಡಿಕೆಯ ಸಮಾರೋಪ ಭಾಷಣವನ್ನು ಸ್ಪೀಕರ್‌ ಬಿರ್ಲಾ ಈ ಬಾರಿ ಓದಲಿಲ್ಲ. ಸದನವು ಅಲ್ಪಕಾಲದವರೆಗೆ ಸೇರಿದಾಗ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಉಪಸ್ಥಿತರಿದ್ದರು.

ಅಧಿವೇಶನದ ಪೂರ್ತಿ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ಘೋಷಣೆಗಳನ್ನು ಕೂಗಿದವು. ಚರ್ಚೆಯಲ್ಲಿ ಭಾಗವಹಿಸುವಂತೆ ಸ್ಪೀಕರ್‌ ಬಿರ್ಲಾ ಅವರು ವಿರೋಧ ಪಕ್ಷದ ಸದಸ್ಯರಿಗೆ ಪದೇ ಪದೇ ಮನವಿ ಮಾಡಿದರು. ಆದರೂ ಪಟ್ಟುಬಿಡದ ವಿರೋಧ ಪಕ್ಷಗಳು ತಮ ಪ್ರತಿಭಟನೆಯನ್ನು ಮುಂದುವರಿಸಿದ ಕಾರಣ, ಸದನವನ್ನು ಪದೇ ಪದೇ ಮುಂದೂಡಬೇಕಾಯಿತು.

ಜು.20ರಂದು ಪ್ರಾರಂಭವಾದ ಈ ಮುಂಗಾರು ಅಧಿವೇಶನವು ಪ್ರಮುಖವಾಗಿ ಎರಡು ವಿಚಾರಗಳ ಕೇಂದ್ರವಾಗಿತ್ತು. ಜು.20 ರಂದು ಜಂತರ್‌ ಮಂತರ್‌ನಲ್ಲಿ ನೀಟ್‌ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಹೊಣೆಗಾರಿಕೆಯನ್ನು ಕೋರಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್‌‍ ಕ್ರಮದ ಕುರಿತು ಗೃಹ ಸಚಿವ ಅಮಿತ್‌ ಶಾ ಅವರಿಂದ ಪ್ರತಿಕ್ರಿಯೆಯನ್ನು ವಿರೋಧ ಪಕ್ಷಗಳು ಆಗ್ರಹಿಸಿದವು.

ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನದ ಆರೋಪಗಳ ಕುರಿತು ಸದನದಲ್ಲಿ ತೀವ್ರ ಚರ್ಚೆಗೆ ಪಟ್ಟುಹಿಡಿಯಲಾಯಿತು.ವಿರೋಧ ಪಕ್ಷಗಳ ಪ್ರತಿಭಟನೆಗೆ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಅಮಿತ್‌ ಶಾ, ಚರ್ಚೆಗೆ ತಾವು ಸಂಪೂರ್ಣ ಸಿದ್ಧವಿರುವುದಾಗಿ ಮತ್ತು ವಿರೋಧ ಪಕ್ಷಗಳು ಎತ್ತಿದ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸುವುದಾಗಿ ಸ್ಪಷ್ಟಪಡಿಸಿದ್ದರು. ಅಲ್ಲದೆ, ವಿದ್ಯಾರ್ಥಿಗಳ ವಿಷಯದ ಕುರಿತು ಚರ್ಚೆಯನ್ನು ಪ್ರಾರಂಭಿಸಲು ವಿರೋಧ ಪಕ್ಷಗಳೊಂದಿಗೆ ಸಮಾಲೋಚಿಸಿ ಸೂಕ್ತ ಸಮಯ ನಿಗದಿಪಡಿಸುವಂತೆ ಸ್ಪೀಕರ್‌ ಅವರಿಗೆ ಮನವಿ ಮಾಡಿದ್ದರು. ಆದರೆ ಪ್ರತಿಭಟನೆಯ ತೀವ್ರತೆಯಿಂದಾಗಿ ಯಾವುದೇ ಸಾರ್ಥಕ ಚರ್ಚೆ ನಡೆಯದೆ ಅಧಿವೇಶನ ಮುಕ್ತಾಯಗೊಂಡಿತು.

RELATED ARTICLES
spot_img

Latest News