ನವದೆಹಲಿ,ಆ.13- ಉತ್ತರಾಖಂಡದ ಹಲ್ದ್ವಾನಿಯ ರಾಮ್ ಲೀಲಾ ಮೈದಾನದಲ್ಲಿ ನಡೆದ ವಿವಾದಾತ್ಮಕ ಶುದ್ಧೀಕರಣ ಸಮಾರಂಭದ ವಿಷಯವು ಸಂಸತ್ತಿನಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ಸಮುದಾಯಕ್ಕೆ ಸೇರಿರುವುದರಿಂದ ಹಾಗೂ ಅವರು ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಸ್ಥಳದಲ್ಲಿ ಈ ಆಚರಣೆ ನಡೆದಿರುವುದು ದೇಶಾದ್ಯಂತ ರಾಜಕೀಯ ವಿವಾದವನ್ನು ಸೃಷ್ಟಿಸಿದೆ.
ಆಗಸ್ಟ್ 8ರಂದು ಹಲ್ದ್ವಾನಿಯಲ್ಲಿ ನಡೆದ ರ್ಯಾಲಿಯಲ್ಲಿ ಖರ್ಗೆ ಅವರು ಭಾಷಣ ಮಾಡಿದ್ದ ವೇದಿಕೆಯನ್ನು ಬಲಪಂಥೀಯ ಸಂಘಟನೆಯೊಂದು ೞಹವನೞ ಮಾಡುವ ಮೂಲಕ ೞಶುದ್ಧೀಕರಣೞಗೊಳಿಸಿದೆ ಎಂದು ಖರ್ಗೆ ಸಂಸತ್ತಿನಲ್ಲಿ ಆರೋಪಿಸಿದರು. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯ ಬಗ್ಗೆ ಅವರು ಕಳಳವಳ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು ಈ ಘಟನೆಯನ್ನು ದುರದೃಷ್ಟಕರ ಎಂದು ಕರೆದಿದ್ದು, ಬಿಜೆಪಿ ಇಂತಹ ಚಟುವಟಿಕೆಗಳಿಗೆ ಎಂದಿಗೂ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಈ ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ವಿಶ್ವದಲ್ಲಿ ಅಸ್ಪಶ್ಯತೆಗಿಂತ ದೊಡ್ಡ ಪಾಪವಿಲ್ಲ ಎಂದು ಹೇಳಿದ ಸಭಾಪತಿಗಳು, ಇಂತಹ ಕೃತ್ಯಗಳನ್ನು ಎಸಗಿರುವವರ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಉತ್ತರಾಖಂಡ ಕಾಂಗ್ರೆಸ್ ಮುಖ್ಯಸ್ಥ ಗಣೇಶ್ ಗೋಡಿಯಾಲ್ ಅವರು ಈ ಕೃತ್ಯದ ಹಿಂದೆ ಬಿಜೆಪಿಯೊಂದಿಗೆ ನಂಟಿರುವ ಶ್ರೀರಾಮ ಸೇನಾ ಗುಂಪು ಇದೆ ಎಂದು ಆರೋಪಿಸಿದ್ದು, ಬಿಜೆಪಿ ಸಮಾಜದಲ್ಲಿ ಜಾತಿ ವಿಭಜನೆ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಆದರೆ ಬಿಜೆಪಿ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದೆ.
ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದ್ದು, ದಲಿತ ನಾಯಕರೊಬ್ಬರು ಭಾಗವಹಿಸಿದ ಸ್ಥಳದಲ್ಲಿ ಇಂತಹ ಶುದ್ಧೀಕರಣ ಕಾರ್ಯಕ್ರಮ ನಡೆಸಿರುವುದು ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
