ಬೆಂಗಳೂರು, ಆ.13- ಇತ್ತೀಚೆಗೆ ನಿಧನರಾದ ರಾಜ್ಯದ ಹಾಲಿ ಸಚಿವರಾಗಿದ್ದ ಡಿ. ಸುಧಾಕರ್, ವಿಧಾನಸಭೆಯ ಮಾಜಿ ಉಪಾಧ್ಯಕ್ಷ ಸಿ. ವೀರಣ್ಣ, ಮಾಜಿ ಸಚಿವರಾದ ವೆಂಕಟರಮಣಪ್ಪ, ರಾಮಚಂದ್ರಗೌಡ ಸೇರಿದಂತೆ ಹಲವು ಮಾಜಿ ಶಾಸಕರು, ರಾಜ್ಯಸಭೆಯ ಮಾಜಿ ಸದಸ್ಯ ಎಚ್. ಹನುಮಂತಪ್ಪ, ಖ್ಯಾತ ಗಾಯಕಿಯರಾದ ಎಸ್. ಜಾನಕಿ, ಆಶಾ ಭೋಸ್ಲೆ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ ಸೇರಿದಂತೆ ಹಲವು ಗಣ್ಯರಿಗೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಹಂಗಾಮಿ ಅಧ್ಯಕ್ಷ ಟಿ.ಬಿ. ಜಯಚಂದ್ರ ಅವರು ಸಂತಾಪ ಸೂಚನಾ ನಿರ್ಣಯ ಮಂಡಿಸಿದರು. ನಿಧನರಾದ ಗಣ್ಯರ ಸಾರ್ವಜನಿಕ ಸೇವೆ, ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳನ್ನು ಸದನದಲ್ಲಿ ಸರಿಸಲಾಯಿತು.
ಸಚಿವ ಡಿ.ಸುಧಾಕರ್ ಸೇವೆ ಸರಣೆ:
ಯೋಜನೆ ಮತ್ತು ಸಾಂಖ್ಯಿಕ ಹಾಗೂ ಇತರ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದ ಸಚಿವ ಡಿ. ಸುಧಾಕರ್ ಅವರ ನಿಧನಕ್ಕೆ ಸದನ ತೀವ್ರ ಸಂತಾಪ ವ್ಯಕ್ತಪಡಿಸಿತು. 1961ರಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಭಾಗದಲ್ಲಿ ಜನಿಸಿದ ಡಿ. ಸುಧಾಕರ್ ಅವರು ಬಿ.ಕಾಂ ಪದವಿ ಪಡೆದ ಬಳಿಕ ಉದ್ಯಮಿಯಾಗಿ ವೃತ್ತಿಜೀವನ ಆರಂಭಿಸಿದ್ದರು. ನಂತರ ಸಹಕಾರ ಕ್ಷೇತ್ರದಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.
2004ರಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಅವರು, ಬಳಿಕ ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ 13ನೇ, 14ನೇ ಹಾಗೂ 16ನೇ ವಿಧಾನಸಭೆಗೆ ಆಯ್ಕೆಯಾಗಿದ್ದರು. ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಸಂಬಂಧಿಸಿದ ಹೋರಾಟದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಸಮಾಜ ಕಲ್ಯಾಣ, ಮುಜರಾಯಿ ಸೇರಿದಂತೆ ಹಲವು ಖಾತೆಗಳನ್ನು ನಿರ್ವಹಿಸಿದ್ದ ಅವರು, ಸಮಾಜಮುಖಿ ಕಾರ್ಯಗಳು ಹಾಗೂ ದಾನಧರ್ಮದ ಮೂಲಕವೂ ಗುರುತಿಸಿಕೊಂಡಿದ್ದರು ಎಂದು ಸದನದಲ್ಲಿ ಸರಿಸಲಾಯಿತು.
ಮಾಜಿ ಉಪಾಧ್ಯಕ್ಷ ಸಿ. ವೀರಣ್ಣ ವಿಧಾನಸಭೆಯ ಮಾಜಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವರಾಗಿ ಸಲ್ಲಿಸಿದ ಅವರ ಸೇವೆಯನ್ನು ಕೂಡ ಸದನ ಸರಿಸಿತು. ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಜನಿಸಿದ ಅವರು ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಸಣ್ಣ ನೀರಾವರಿ ಸೇರಿದಂತೆ ಹಲವು ಇಲಾಖೆಗಳ ಜವಾಬ್ದಾರಿ ನಿರ್ವಹಿಸಿದ್ದ ಅವರು, ತಮ ಅಧಿಕಾರಾವಧಿಯಲ್ಲಿ ಇಲಾಖೆಗಳ ಕಾರ್ಯವೈಖರಿಗೆ ಹೊಸ ಸ್ವರೂಪ ನೀಡಲು ಶ್ರಮಿಸಿದ್ದರು ಎಂದು ಸಂತಾಪ ಸೂಚನಾ ನಿರ್ಣಯದಲ್ಲಿ ತಿಳಿಸಲಾಯಿತು.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಹನುಮಂತನಹಳ್ಳಿಯಲ್ಲಿ ಜನಿಸಿದ ವೆಂಕಟರಮಣಪ್ಪ ಅವರು ಪೊನ್ನಸಮುದ್ರ ಮಂಡಲ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ್ದರು. 9ನೇ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದ ಅವರು ನಂತರ 11ನೇ, 13ನೇ ಹಾಗೂ 15ನೇ ವಿಧಾನಸಭೆಗೂ ಪುನರಾಯ್ಕೆಯಾಗಿದ್ದರು. ಸಣ್ಣ ಕೈಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವರು ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ್ದರು ಎಂದು ಸದನದಲ್ಲಿ ಸರಿಸಲಾಯಿತು.
ಕುಣಿಗಲ್ ತಾಲೂಕಿನ ತಿಪೂರು ಗ್ರಾಮದಲ್ಲಿ ಜನಿಸಿದ ರಾಮಚಂದ್ರಗೌಡರು ಬಿ.ಎಸ್ಸಿಪದವಿ ಪಡೆದ ಬಳಿಕ ಕೃಷಿಕರಾಗಿ ಕಾರ್ಯನಿರ್ವಹಿಸಿದ್ದರು. ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವರು ಚಲನಚಿತ್ರ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು. ಫಿಲಿ ಸ್ಪಂದನ ಎಂಬ ಪ್ರಾಯೋಗಿಕ ಚಿತ್ರ ನಿರ್ಮಾಣಕ್ಕಾಗಿ ಪ್ರಶಸ್ತಿಯನ್ನೂ ಪಡೆದಿದ್ದರು ಎಂದು ಸದನದಲ್ಲಿ ತಿಳಿಸಲಾಯಿತು.
ಮಾಜಿ ಶಾಸಕರಿಗೆ ಗೌರವ:
ಕೋಲಾರ ಜಿಲ್ಲೆಯಲ್ಲಿ ಜನಿಸಿ ಬಿ.ಎ., ಎಲ್‌ಎಲ್‌ಬಿ ಪದವಿ ಪಡೆದಿದ್ದ ಕೆ.ಆರ್. ಶ್ರೀನಿವಾಸಯ್ಯ ಅವರು ವೃತ್ತಿಯಲ್ಲಿ ವಕೀಲರಾಗಿದ್ದರು. ವಕೀಲರ ಮಂಡಳಿ ಅಧ್ಯಕ್ಷರಾಗಿ ಹಾಗೂ ತಾಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ವಿಧಾನಸಭೆಗೆ ಆಯ್ಕೆಯಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದರು.ಎಸ್.ಎಚ್. ಪುಟ್ಟರಂಗನಾಥ್ ಅವರು 1938ರಲ್ಲಿ ಸೋಮಶೆಟ್ಟಿಹಳ್ಳಿಯಲ್ಲಿ ಜನಿಸಿದ್ದು, ಬೇಲೂರು ಕ್ಷೇತ್ರದಿಂದ ಹಲವು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಕ್ಷೇತ್ರದ ಅಭಿವೃದ್ಧಿಗೆ ಅವರು ಕೊಡುಗೆ ನೀಡಿದ್ದರು ಎಂದು ಸರಿಸಲಾಯಿತು.
ಸೈಯದ್ ಯಾಸೀನ್ ಅವರು 1950ರಲ್ಲಿ ರಾಯಚೂರಿನಲ್ಲಿ ಜನಿಸಿದ್ದರು. ಎಂ.ಎಸ್ಸಿ ಮತ್ತು ಎಂ.ಎ ಪದವೀಧರರಾಗಿದ್ದ ಅವರು ವ್‌ಯಾಪಾರ ಕ್ಷೇತ್ರದಲ್ಲಿದ್ದು, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು. ರಾಯಚೂರು ವಿಧಾನಸಭಾ ಕ್ಷೇತ್ರದಿಂದ 11ನೇ ಹಾಗೂ 13ನೇ ವಿಧಾನಸಭೆಗೆ ಆಯ್ಕೆಯಾಗಿದ್ದರು.ವಿ.ಶ್ರೀನಿವಾಸನ್ ಅವರು ಟ್ರಾನ್‌್ಸ ಪೋರ್ಟ್ ಸಂಸ್ಥೆ ಮಾಲೀಕರಾಗಿ ಕಾರ್ಯನಿರ್ವಹಿಸಿದ್ದರು. ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿ ಯಲಹಂಕ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಶಿವಮೊಗ್ಗ ಜಿಲ್ಲೆಯವರಾದ ಎಚ್.ಎಂ.ಚಂದ್ರಶೇಖರಪ್ಪ ಅವರು 1948ರಲ್ಲಿ ಜನಿಸಿದ್ದರು. ಬಿ.ಎ ಪದವೀಧರರಾಗಿದ್ದ ಅವರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಶಿವಮೊಗ್ಗ ನಗರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ 11ನೇ ವಿಧಾನಸಭೆಗೆ ಆಯ್ಕೆಯಾಗಿದ್ದರು.ಆರ್.ಜಿ. ವೆಂಕಟಾಚಲಯ್ಯ ಅವರು ದೊಡ್ಡಬಳ್ಳಾಪುರ ತಾಲೂಕಿನ ಹಣಬೆ ಗ್ರಾಮದಲ್ಲಿ ಜನಿಸಿದ್ದರು. ಕೃಷಿಕರಾಗಿದ್ದ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಹಾಗೂ ತಾಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1996ರಲ್ಲಿ ನಡೆದ ಉಪಚುನಾವಣೆಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಎಸ್. ಕೃಷ್ಣಪ್ಪ ಅವರು 1941ರಲ್ಲಿ ಜನಿಸಿದ್ದು, ಬಿ.ಎ ಪದವೀಧರರಾಗಿದ್ದರು. ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಅವರು ಬನ್ನೂರು ಪುರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಬಳಿಕ ಬನ್ನೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.
ರಾಜ್ಯಸಭೆಯ ಮಾಜಿ ಸದಸ್ಯ ಎಚ್. ಹನುಮಂತಪ್ಪ ಅವರ ಸಾರ್ವಜನಿಕ ಜೀವನವನ್ನೂ ಸದನದಲ್ಲಿ ಸರಿಸಲಾಯಿತು. ಚಿತ್ರದುರ್ಗ ಜಿಲ್ಲೆಯಲ್ಲಿ 1932ರಲ್ಲಿ ಜನಿಸಿದ ಅವರು ಬಹುಭಾಷಾ ಪಾರಂಗತರಾಗಿದ್ದರು. ಪ್ರೌಢಶಾಲಾ ಶಿಕ್ಷಕರಾಗಿ, ವಕೀಲರಾಗಿ ಸೇವೆ ಸಲ್ಲಿಸಿದ್ದ ಅವರು ಕೇಂದ್ರ ರೈಲ್ವೆ ಮಂಡಳಿ ಹಾಗೂ ರೇಷೆ ಮಂಡಳಿಗಳ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಭದ್ರಾ ಮೇಲ್ದಂಡೆ ಯೋಜನೆ ಹೋರಾಟ ಸಮಿತಿಯ ಮೊದಲ ಅಧ್ಯಕ್ಷರಾಗಿ ಅವರು ಕೆಲಸ ಮಾಡಿದ್ದರು. 1982ರಿಂದ 2000ರವರೆಗೆ ಮೂರು ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು ಎಂದು ಸದನದಲ್ಲಿ ತಿಳಿಸಲಾಯಿತು.
ಗಾನಕೋಗಿಲೆ ಎಸ್. ಜಾನಕಿಗೆ ಗೌರವ:
ಇದೇ ವೇಳೆ ಖ್ಯಾತ ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ಎಸ್. ಜಾನಕಿ ಆಶಾ ಭೋಸ್ಲೆ ಅವರ ಗುಣಗಾನ ಮಾಡಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಚೆನ್ನಮ ಅವರ ಸೇವೆ ಸರಣೆ:
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ ಅವರ ನಿಧನಕ್ಕೂ ವಿಧಾನಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.1937ರಲ್ಲಿ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮುತ್ತಿಗೆ ಹಿರೇಹಳ್ಳಿಯಲ್ಲಿ ಜನಿಸಿದ ಚೆನ್ನಮ ಅವರು ತಮ ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಹೊಳೆನರಸೀಪುರದಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದಿದ್ದರು. ದೇವೇಗೌಡರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ, ಅವರ ರಾಜಕೀಯ ಪಯಣದಲ್ಲಿ ಬೆನ್ನೆಲುಬಾಗಿ ನಿಂತಿದ್ದರು ಎಂದು ಸರಿಸಲಾಯಿತು.
ವಿಧಾನಪರಿಷತ್‌ನಲ್ಲಿ ಭಾವಪೂರ್ಣ ಶ್ರದ್ದಾಂಜಲಿ
ಬೆಂಗಳೂರು,ಆ.13- ಖ್ಯಾತ ಗಾಯಕಿಯರಾದ ಆಶಾ ಬೋಸ್ಲೆ, ಎಸ್.ಜಾನಕಿ, ಮಾಜಿ ಸಚಿವರಾದ ರಾಮಚಂದ್ರೇಗೌಡ, ವೆಂಕಟರಮಣಪ್ಪ, ಡಿ.ಸುಧಾಕರ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚನ್ನಮ ಸೇರಿದಂತೆ ಅನೇಕ ಗಣ್ಯರಿಗೆ ವಿಧಾನಪರಿಷತ್‌ನಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.
ವಿಧಾನಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಹಂಗಾಮಿ ಸಭಾಪತಿ ಪುಟ್ಟಣ್ಣ ಅವರು ಅಗಲಿದ ಗಣ್ಯರಿಗೆ ಗೌರವ ಸೂಚಿಸುವ ಸಂತಾಪ ನಿರ್ಣಯವನ್ನು ಮಂಡಿಸಿದರು.ಸಂತಾಪ ನಿರ್ಣಯದ ಮೇಲೆ ಸಭಾನಾಯಕ ಡಾ.ಯತೀಂದ್ರ ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಮಾತನಾಡಿ ಅಗಲಿದ ಗಣ್ಯರ ಸೇವೆಗಳನ್ನು ಶ್ಲಾಘನೆ ಮಾಡಿದರು.
ಮಾಜಿ ಸಚಿವ ರಾಮಚಂದ್ರೇಗೌಡ ಅವರು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ವೇಳೆ ತೆಗೆದುಕೊಂಡಿದ್ದ ಕೆಲವು ನಿರ್ಧಾರಗಳನ್ನು ಹಂಗಾಮಿ ಸಭಾಪತಿ ಪುಟ್ಟಣ್ಣ ಅವರು ಶ್ಲಾಘಿಸಿದರು.ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿ ತಮ ರಾಜಕೀಯ ಜೀವನ ಆರಂಭಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ಹೆಚ್ಚು ಶ್ರಮ ವಹಿಸಿದ್ದರು. ರಾಜ್ಯವು ಓರ್ವ ಉತ್ತಮ ಸಂಸದೀಯ ಪಟುವನ್ನು ಕಳೆದುಕೊಂಡಿದೆ ಎಂದು ವಿಷಾದಿಸಿದರು.
ಮಾಜಿ ಸಚಿವ ವೆಂಕಟರಮಣಪ್ಪ ಅವರು 2008ರ ಅವಧಿಯಲ್ಲಿ ಸಚಿವರಾಗಿ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ವಿಶೇಷವಾಗಿ ಪಾವಗಡ ತಾಲ್ಲೂಕಿಗೆ ಕುಡಿಯುವ ನೀರು ಪೂರೈಕೆ ಮಾಡಲು ಅವರು ಪಟ್ಟ ಶ್ರಮವನ್ನು ಸರಿಸಿದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾದ ಮಾಜಿ ಸಚಿವ ಡಿ.ಸುಧಾಕರ್ ಕೂಡ ಚಳ್ಳಕೆರೆ ಮತ್ತು ಹಿರಿಯೂರು ವಿಧಾನಸಭಾ ಕ್ಷೇತ್ರಗಳಲ್ಲಿ ಜನಪರ ಕೆಲಸಗಳನ್ನು ಮಾಡಿದ್ದರು. ಅವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ವಿಷಾದ ವ್ಯಕ್ತಪಡಿಸಿದರು. ಖ್ಯಾತ ಹಿನ್ನಲೆ ಗಾಯಕಿಯರಾದ ಆಶಾ ಬೋಸ್ಲೆ, ಎಸ್.ಜಾನಕಿ ಅವರುಗಳು ತಮ ಸುಮಧುರ ಕಂಠದಿಂದ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ದೇಶದ ಕೀರ್ತಿ ಹೆಚ್ಚಿಸಿದ್ದರು ಎಂದು ಹೇಳಿದರು.
ಇದೇ ರೀತಿ ಮಾಜಿ ಉಪಸಭಾಧ್ಯಕ್ಷ ಸಿ.ವೀರಣ್ಣ , ಮಾಜಿ ಶಾಸಕರಾದ ಕೆ.ಆರ್.ಶ್ರೀನಿವಾಸಯ್ಯ, ಎಸ್.ಎಚ್.ಪುಟ್ಟರಂಗನಾಥ್, ಸಯ್ಯದ್ ಯಾಸೀನ್, ವಿ.ಶ್ರೀನಿವಾಸನ್, ಎಚ್.ಎಂ.ಚಂದ್ರಶೇಖರಪ್ಪ, ರಾಜಸಭೆಯ ಮಾಜಿ ಸದಸ್ಯ ಎಚ್.ಹನುಮಂತಪ್ಪ, ಎಸ್.ಕೃಷ್ಣಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ ಅವರ ಸರಳತೆಯನ್ನು ಸರಿಸಲಾಯಿತು.
ಇದೇ ರೀತಿ ಪರಿಸರ ತಜ್ಞ ಗಿರೀಶ್ ಭಾರದ್ವಾಜ್, ಬರಹಗಾರ ನರಸಿಂಹಮೂರ್ತಿ ಸೇರಿದಂತೆ ಅನೇಕ ಸಾಧನೆಗಳನ್ನು ಕೊಂಡಾಡಿದರು. ಸಂತಾಪ ನಿರ್ಣಯದ ಪರವಾಗಿ ಸಭಾನಾಯಕ ಡಾ.ಯತೀಂದ್ರ, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಸಿ.ಟಿ.ರವಿ ಸೇರಿದಂತೆ ಮತ್ತಿತರರು ಮಾತನಾಡಿ ಅಗಲಿದ ಗಣ್ಯರ ಸೇವೆಯನ್ನು ಮುಕ್ತಕಂಠದಿಂದ ಸರಿಸಿದರು. ಮೃತರ ಗೌರವಾರ್ಥವಾಗಿ ಸದಸ್ಯರೆಲ್ಲರೂ ಎದ್ದುನಿಂತು ಒಂದು ನಿಮಿಷ ಮೌನ ಆಚರಿಸಿದರು.
