ಬೆಂಗಳೂರು,ಆ.13-ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊನ್ನೆ ಸಿಸಿಬಿ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಪತ್ತೆಯಾಗಿರುವ ಎಂಟು ಮೊಬೈಲ್ಗಳ ಸಿಮ್ಗಳು ಆಂಧ್ರದಲ್ಲಿ ಖರೀದಿಸಿರುವುದು ತನಿಖೆಯಿಂದ ಗೊತ್ತಾಗಿದೆ.
ಈ ಎಂಟು ಮೊಬೈಲ್ಗಳು 5ಜಿ ಎಂಬುವುದು ವಿಶೇಷವಾಗಿದ್ದು, ಆಂಧ್ರದಲ್ಲಿ ಆಕ್ಟೀವ್ ಆಗಿರುವುದು ಪೊಲೀಸರ ಇದುವರೆಗಿನ ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಕಾರಾಗೃಹದಲ್ಲಿ ತಪಾಸಣೆ ಕಟ್ಟುನಿಟ್ಟಾಗಿ ನಡೆಯುತ್ತಿದ್ದರೂ ಸಹ ನಿಷೇಧಿತ ವಸ್ತುಗಳು ಬ್ಯಾರಕ್ಗಳೊಳಗೆ ಹೇಗೆ ಹೋದವು ಎಂದು ಕಾರಾಗೃಹಗಳ ಡಿಜಿಪಿ ಅಲೋಕ್ ಕುಮಾರ್ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಜೈಲಿನೊಳಗೆ ಜಾಮರ್ ಅಳವಡಿಸಿದ್ದರೂ ಸಹ ಮೊಬೈಲ್ಗಳನ್ನು ಹೇಗೆ ಬಳಸುತ್ತಿದ್ದರು ಎಂಬ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಅಷ್ಟೇ ಅಲ್ಲದೇ ಈ ಮೊಬೈಲ್ನ್ನು ಯಾರು ತಂದು ಕೊಟ್ಟಿದ್ದಾರೆ, ಎಲ್ಲಿಂದ ತಂದುಕೊಟ್ಟಿದ್ದಾರೆ ಎಂಬುವುದರ ಬಗ್ಗೆಯೂ ತನಿಖೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ತನಿಖೆಗೆ ಡಿಐಜಿ ಜಿನೇಂದ್ರ ಕಣಗಲಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಅವರು ಈಗಾಗಲೇ ತನಿಖೆ ಆರಂಭಿಸಿದ್ದಾರೆ.
ಕಾರಾಗೃಹದೊಳಗೆ ಮೊಬೈಲ್ ಪತ್ತೆಯಾದ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಹ ದಾಖಲಾಗಿದೆ.ಸಿಸಿಬಿ ಪೊಲೀಸರ ದಾಳಿ ಸಂದರ್ಭದಲ್ಲಿ ಖೈದಿ ಹಾಗೂ ವಿಚಾರಣಾಧೀನ ಖೈದಿಗಳಿದ್ದ ಬ್ಯಾರಕ್ನಲ್ಲಿ ಪತ್ತೆಯಾದ ಮೊಬೈಲ್ ಪಾಸ್ವರ್ಡ್ ಬಗ್ಗೆ ಅವರುಗಳು ಮಾಹಿತಿ ನೀಡಲಿಲ್ಲ ಹಾಗಾಗಿ ಆ ಮೊಬೈಲ್ನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದೆ. ಅದರ ವರದಿ ಬಂದನಂತರವಷ್ಟೇ ಮೊಬೈಲ್ಗಳಲ್ಲಿರುವ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿವೆ.
ಈ ಕಾರಾಗೃದ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಿದ ಸಂದರ್ಭದಲ್ಲಿ 8 ತಿಂಗಳ ಅವಧಿಯಲ್ಲಿ 300ಕ್ಕೂ ಹೆಚ್ಚು ಮೊಬೈಲ್ಗಳು ಸಿಕ್ಕಿದ್ದವು. ಇದೀಗ ಮತ್ತೆ ಬ್ಯಾರಕ್ಗಳೊಳಗೆ ಮೊಬೈಲ್ಗಳು ಪತ್ತೆಯಾಗಿರುವುದು ಕಾರಾಗೃಹ ಸಿಬ್ಬಂದಿಯ ಕರ್ತವ್ಯ ಲೋಪವನ್ನು ಪ್ರಶ್ನಿಸುವಂತಾಗಿದೆ.
