ಬೆಂಗಳೂರು,ಆ.13- ವಿಧಾನಪರಿಷತ್‌ನ ಸಭಾ ನಾಯಕರಾಗಿ ನಗರಾಭಿವೃದ್ದಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ವಿಧಾನಪರಿಷತ್ ಕಲಾಪ ಪ್ರಾರಂಭವಾಗುತ್ತಿದ್ದಂತೆ ಹಂಗಾಮಿ ಸಭಾಪತಿ ಪುಟ್ಟಣ್ಣನವರು ಇದನ್ನು ಅಧಿಕೃತವಾಗಿ ಪ್ರಕಟಣೆ ಮಾಡಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೂಚನೆಯಂತೆ ನಗರಾಭಿವೃದ್ದಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ವಿಧಾನಪರಿಷತ್ ಸಭಾನಾಯಕರಾಗಿ ನಾಮನಿರ್ದೇಶನ ಮಾಡಲಾಗಿದೆ ಎಂದು ಪ್ರಕಟಿಸುತ್ತಿದ್ದಂತೆ ಸದನದ ಎಲ್ಲಾ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ನಂತರ ಡಿ.ಕೆ.ಶಿವಕುಮಾರ್ ಸಿಎಂ ಆಗಿ ಅ ಕಾರ ಸ್ವೀಕಾರ ಮಾಡಿದರು. ಈ ಹಿಂದೆ ವಿಧಾನಪರಿಷತ್‌ನ ಸಭಾನಾಯಕರಾಗಿ ಮಾಜಿ ಸಚಿವ ಬೋಸ್‌ರಾಜ್ ಅವರು ಕಾರ್ಯ ನಿರ್ವಹಿಸಿದ್ದರು.
ಆದರೆ ಬೋಸ್‌ರಾಜ್ ಅವರು ಸಂಪುಟಕ್ಕೆ ಸೇರ್ಪಡೆಯಾಗದ ಹಿನ್ನೆಲೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರನ್ನು ಸಭಾನಾಯಕರನ್ನಾಗಿ ನೇಮಕ ಮಾಡಲಾಗಿದೆ. ಸದ್ಯ ವಿಧಾನಪರಿಷತ್‌ನಿಂದ ಸಂಪುಟಕ್ಕೆ ಯತೀಂದ್ರ ಸಿದ್ದರಾಮಯ್ಯ ಒಬ್ಬರು ಮಾತ್ರ ಸೇರ್ಪಡೆಯಾಗಿದ್ದಾರೆ.
