ಬೆಂಗಳೂರು, ಆ.17- ಶ್ರಾವಣ ಮಾಸದ ಮೊದಲನೇ ಹಬ್ಬವಾದ ನಾಗರ ಪಂಚಮಿಯನ್ನು ರಾಜ್ಯಾದ್ಯಂತ ಇಂದು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ನಾಗರ ಪಂಚಮಿ ಹಿಂದೂ ಧರ್ಮದ ಪ್ರಮುಖ ಪವಿತ್ರ ಹಬ್ಬಗಳಲ್ಲಿ ಒಂದಾಗಿದ್ದು, ಈ ದಿನ ನಾಗದೇವತೆಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಜೊತೆಗೆ ಸಹೋದರ-ಸಹೋದರಿಯರ ಬಾಂಧವ್ಯವನ್ನು ಬೆಸೆಯುವ ಹಬ್ಬವಾಗಿಯೂ ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ.
ದೇಶದ ವಿವಿಧ ರಾಜ್ಯಗಳಲ್ಲಿ ನಾಗರ ಪಂಚಮಿಯನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ರಾಜ್ಯದಲ್ಲಿ ನಾಗರಕಲ್ಲು, ಹುತ್ತ ಹಾಗೂ ಮನೆಗಳಲ್ಲಿರುವ ನಾಗವಿಗ್ರಹಗಳಿಗೆ ತನಿ ಎರೆದು ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸಲಾಯಿತು.
ಭಕ್ತರು ಮುಂಜಾನೆಯೇ ಮಡಿಯೊಂದಿಗೆ ಪೂಜಾ ಸಾಮಗ್ರಿಗಳನ್ನು ಸಿದ್ಧಪಡಿಸಿ, ಒಲೆಯನ್ನು ಹಚ್ಚದೆ ನಾಗರಕಲ್ಲು, ಮಣ್ಣಿನ ನಾಗಪ್ರತಿಮೆ ಹಾಗೂ ಹುತ್ತಗಳಿಗೆ ಹಾಲು ಹಾಗೂ ತನಿ ಎರೆದು ಕುಟುಂಬಕ್ಕೆ ಸುಖ, ಶಾಂತಿ, ಆರೋಗ್ಯ ಮತ್ತು ರಕ್ಷಣೆ ದೊರೆಯಲಿ ಎಂದು ಪ್ರಾರ್ಥಿಸಿದರು.
ನಾಗರ ಪಂಚಮಿಯು ಶ್ರಾವಣ ಮಾಸದ ಹಬ್ಬಗಳ ಸಾಲಿಗೆ ನಾಂದಿ ಹಾಡುವ ಹಬ್ಬವಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.
ಘಾಟಿ ಸುಬ್ರಹ್ಮಣ್ಯದಲ್ಲಿ ಭಕ್ತರ ದಂಡು
ನಾಗರ ಪಂಚಮಿ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಇಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು. ದೇವಾಲಯದ ಆವರಣದಲ್ಲಿರುವ ನೂರಾರು ನಾಗರಕಲ್ಲುಗಳಿಗೆ ತನಿ ಎರೆದು ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದರು.
ಸುಬ್ರಹ್ಮಣ್ಯ ಸ್ವಾಮಿಗೆ ಅಡಕೆ ಹೊಂಬಾಳೆ, ಕಮಲ, ಕನಕಾಂಬರ ಸೇರಿದಂತೆ ವಿವಿಧ ಬಗೆಯ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ತುಮಕೂರು, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಕುಕ್ಕೆ ಸುಬ್ರಹ್ಮಣ್ಯದಲ್ಲೂ ವಿಶೇಷ ಪೂಜೆ
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲೂ ಇಂದು ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಮುಂಜಾನೆಯಿಂದಲೇ ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.ನಿನ್ನೆಯೇ ಅಪಾರ ಸಂಖ್ಯೆಯಲ್ಲಿ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದರು. ಇಂದು ಬೆಳಿಗ್ಗೆ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.
ವಿಧುರಾಶ್ವತ್ಥದಲ್ಲೂ ಪೂಜಾ ಕೈಂಕರ್ಯ
ಚಿಕ್ಕಬಳ್ಳಾಪುರ ಜಿಲ್ಲೆಯ ವಿಧುರಾಶ್ವತ್ಥದಲ್ಲೂ ಇಂದು ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಮಂಗಳೂರು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಕ್ತರು ಮುಂಜಾನೆಯೇ ಹುತ್ತ ಹಾಗೂ ನಾಗರಕಲ್ಲುಗಳಿಗೆ ತನಿ ಎರೆದು ಶ್ರದ್ಧಾಭಕ್ತಿಯಿಂದ ನಾಗರ ಪಂಚಮಿಯನ್ನು ಆಚರಿಸಿದರು.
ಮೈಸೂರಿನಲ್ಲಿ ವಿಶೇಷ ನಾಗರಪಂಚಮಿ ಆಚರಣೆ
ಶ್ರಾವಣ ಮಾಸದ ಶುಕ್ಲ ಪಂಚಮಿ ದಿನವಾದ ಇಂದು ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ನಾಗರ ಪಂಚಮಿಯನ್ನು ಅತ್ಯಂತ ಭಕ್ತಿ ಶ್ರದ್ಧೆಯಿಂದ ಆಚರಿಸಲಾಯಿತು. ಬೆಳಗ್ಗಿನ ಜಾವದಿಂದಲೇ ನಗರದ ಪ್ರಮುಖ ದೇವಸ್ಥಾನಗಳು ಮತ್ತು ನಾಗಬನಗಳಲ್ಲಿ ಭಕ್ತರ ದಂಡು ನೆರೆದಿತ್ತು. ಮಹಿಳೆಯರು ಉಪವಾಸವಿದ್ದು, ನಾಗದೇವತೆಗೆ ಹಾಲು, ಅರಿಶಿನ, ಕುಂಕುಮ ಮತ್ತು ಬಿಲ್ವಪತ್ರೆಗಳನ್ನು ಅರ್ಪಿಸಿ ಸುಖ-ಸಮೃದ್ಧಿ ಕೋರಿದರು.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಪ್ರಾಚೀನ ನಾಗಬನಗಳು ಇಂದು ವಿಶೇಷವಾಗಿ ಕಂಗೊಳಿಸಿದವು. ನಾಡದೇವತೆ ಚಾಮುಂಡೇಶ್ವರಿಯ ಸನ್ನಿಧಾನದ ಬಳಿ ಇರುವ ಈ ನಾಗಬನಗಳಿಗೆ ಮೈಸೂರು ನಗರದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ಕ್ಷೀರಾಭಿಷೇಕ ನೆರವೇರಿಸಿದರು.ಪುರೋಹಿತರು ಮಂತ್ರಗಳೊಂದಿಗೆ ಪೂಜೆ ನಡೆಸಿದರು.
ಅಂತೆಯೇ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಾಲಯದಲ್ಲಿಯೂ ನಾಗದೋಷ ನಿವಾರಣೆಗೆ ಬಂದ ಭಕ್ತರ ಸಂಖ್ಯೆ ಗಮನಾರ್ಹವಾಗಿತ್ತು. ಮೈಸೂರು, ಚಾಮರಾಜನಗರ, ಕೊಡಗು ಭಾಗಗಳಿಂದಲೂ ಭಕ್ತರು ಇಲ್ಲಿಗೆ ಬಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಗರದ ಸರಸ್ವತಿಪುರಂ, ವಿಜಯನಗರ, ಗೋಕುಲಂ, ಹೆಬ್ಬಾಳ ಸೇರಿದಂತೆ ಬಹುತೇಕ ಬಡಾವಣೆಗಳಲ್ಲಿರುವ ನಾಗಬನಗಳು ಇಂದು ಹೂವು ಮತ್ತು ದೀಪಗಳಿಂದ ಅಲಂಕೃತವಾಗಿದ್ದವು.
ನಗರದ ಹಲವೆಡೆ ಇರುವ ಹುತ್ತಕ್ಕೆ ಮಹಿಳೆಯರು ಬೆಳಗ್ಗೆಯೇ ಹಾಲು ಎರಿದು, ಎಳ್ಳು-ಬೆಲ್ಲದ ನೈವೇದ್ಯ ಇಟ್ಟರು ನಾಗದೇವತೆಯನ್ನು ಭಕ್ತಿ ಶ್ರದ್ಧೆಯಿಂದ ಪೂಜಿಸಿದರು. ಮಕ್ಕಳು ನಾಗರ ಹಾಡುಗಳನ್ನು ಹಾಡುತ್ತಾ ಸಂಭ್ರಮಿಸಿದರು.
ರೈತಾಪಿ ವರ್ಗದವರು ಹೊಲದಂಚಿನ ನಾಗಬನಗಳಿಗೆ ವಿಶೇಷ ಪೂಜೆ ಮಾಡಿ, ಮುಂದಿನ ಬೆಳೆ ಯಾವುದೇ ಕೀಟ-ಸರ್ಪದ ಕಾಟವಿಲ್ಲದೆ ಬೆಳೆ ಚೆನ್ನಾಗಿ ಬರಲಿ ಎಂದು ಪ್ರಾರ್ಥಿಸಿದರು.
ನಾಗರ ಪಂಚಮಿಯ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಜಾಗತಿ ಕಾರ್ಯಕ್ರಮಗಳನ್ನು ಹಮಿಕೊಂಡಿದ್ದವು. ಹಾವುಗಳು ಕಂಡುಬಂದಲ್ಲಿ ಅವುಗಳನ್ನು ಕೊಲ್ಲದೆ ತಕ್ಷಣವೇ ಅರಣ್ಯ ಇಲಾಖೆಯ ಸಹಾಯವಾಣಿಗೆ ಮಾಹಿತಿ ನೀಡುವಂತೆ ತಿಳಿಸಿದರು.
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಆಂಟಿ-ವೆನಮ್ ಸ್ಟಾಕ್ ಮತ್ತು ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಸಜ್ಜುಗೊಳಿಸಲಾಗಿತ್ತು.ಕೃಷಿ ಪ್ರಧಾನವಾಗಿರುವ ಮೈಸೂರು ಭಾಗದಲ್ಲಿ ನಾಗರ ಪಂಚಮಿಗೆ ವಿಶೇಷ ಸ್ಥಾನವಿದೆ. ಹೊಲದಲ್ಲಿ ಬೆಳೆಯನ್ನು ಹಾಳು ಮಾಡುವ ಇಲಿ ಮತ್ತು ಇತರ ಕೀಟಗಳನ್ನು ನಿಯಂತ್ರಿಸುವಲ್ಲಿ ಹಾವುಗಳ ಪಾತ್ರ ಮಹತ್ವದ್ದಾಗಿರುವುದರಿಂದ, ಅವುಗಳನ್ನು ರಕ್ಷಿಸುವ ಸಂದೇಶವನ್ನು ಈ ಹಬ್ಬ ನೀಡುತ್ತದೆ ಎಂದು ಹಿರಿಯರು ಹೇಳಿದರು. ದಿನವಿಡೀ ಭಕ್ತಿ, ಸಂಪ್ರದಾಯ ಮತ್ತು ಪರಿಸರ ಪ್ರಜ್ಞೆಯ ಸಂಗಮವಾಗಿ ಮೈಸೂರಿನಲ್ಲಿ ನಾಗರ ಪಂಚಮಿ ಅರ್ಥಪೂರ್ಣವಾಗಿ ಆಚರಿಸಲ್ಪಟ್ಟಿತು.
