Homeರಾಜ್ಯಪ್ಲಾಸ್ಟಿಕ್‌ ಕವರ್‌, ಬಾಟಲಿಗಳಿಂದ ಮಲಿನಗೊಂಡ ಚಿಕ್ಕಮಗಳೂರಿನ ಗಿರಿಧಾಮಗಳು

ಪ್ಲಾಸ್ಟಿಕ್‌ ಕವರ್‌, ಬಾಟಲಿಗಳಿಂದ ಮಲಿನಗೊಂಡ ಚಿಕ್ಕಮಗಳೂರಿನ ಗಿರಿಧಾಮಗಳು

Chikkamagaluru hill stations polluted with plastic covers, bottles

ಚಿಕ್ಕಮಗಳೂರು, ಆ.20- ತಾಲೂಕಿನ ಪುರಾಣ ಪ್ರಸಿದ್ಧ ಹಾಗೂ ಧಾರ್ಮಿಕ, ಪರಿಸರದ ದೃಷ್ಟಿಯಿಂದ ಮಹತ್ವ ಪಡೆದಿರುವ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಮತ್ತು ದತ್ತಪೀಠ ಪ್ರದೇಶಗಳಿಗೆ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ, ಪ್ಲಾಸ್ಟಿಕ್‌ ತ್ಯಾಜ್ಯದಿಂದ ಗಿರಿಧಾಮದ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆ ಉಂಟಾಗಿದೆ. ದೇವಸ್ಥಾನದ ಆವರಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಬಾಟಲಿಗಳು, ತಿಂಡಿ-ತಿನಿಸುಗಳ ಪ್ಯಾಕೆಟ್‌ಗಳು ಹಾಗೂ ಪ್ಲಾಸ್ಟಿಕ್‌ ಕವರ್‌ಗಳು ಎಲ್ಲೆಂದರಲ್ಲಿ ಬಿದ್ದಿರುವುದು ಕಂಡುಬರುತ್ತಿದೆ.

ಜಿಲ್ಲಾಡಳಿತ ಗಿರಿ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧಿಸಿದ್ದರೂ, ಪರಿಣಾಮಕಾರಿ ತಪಾಸಣೆ ಮತ್ತು ನಿಯಂತ್ರಣದ ಕೊರತೆಯಿಂದ ನಿಷೇಧಿತ ವಸ್ತುಗಳ ಬಳಕೆ ಮುಂದುವರಿದಿದೆ.ಹಿಂದೆ ಕೈಮರ ಚೆಕ್‌ಪೋಸ್ಟ್‌ನಲ್ಲಿ ವಾಹನಗಳನ್ನು ತಪಾಸಣೆ ನಡೆಸಿ ಪ್ಲಾಸ್ಟಿಕ್‌ ವಸ್ತುಗಳನ್ನು ಗಿರಿ ಪ್ರದೇಶಕ್ಕೆ ಕೊಂಡೊಯ್ಯುವುದನ್ನು ತಡೆಯಲಾಗುತ್ತಿತ್ತು. ಇದೀಗ ತಪಾಸಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಪ್ರವಾಸಿಗರು ಪ್ಲಾಸ್ಟಿಕ್‌ ಬಾಟಲಿ, ಕವರ್‌ ಹಾಗೂ ಆಹಾರದ ಪ್ಯಾಕೆಟ್‌ಗಳನ್ನು ಗಿರಿ ಪ್ರದೇಶಕ್ಕೆ ಕೊಂಡೊಯ್ದು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ.

ಧಾರ್ಮಿಕವಾಗಿ ಪವಿತ್ರವೆಂದು ಪರಿಗಣಿಸಲ್ಪಡುವ ಸೀತಾಳಯ್ಯನಗಿರಿ ಪ್ರದೇಶದಲ್ಲೂ ಕಸದ ಸಮಸ್ಯೆ ತೀವ್ರಗೊಂಡಿದೆ. ಭಕ್ತರು ಗಂಗೆ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸುವ ಸ್ಥಳದಲ್ಲೇ ಕಸದ ರಾಶಿ ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯ ಕಂಡುಬರುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಹಲವು ಕಡೆ ಕಸದ ಬುಟ್ಟಿಗಳು ಭರ್ತಿಯಾಗಿದ್ದು, ಸುತ್ತಮುತ್ತ ದುರ್ನಾತ ಬೀರುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಶೋಲಾ ಕಾಡುಗಳಲ್ಲಿ ಹುಟ್ಟುವ ಜಲಮೂಲಗಳು, ಝರಿಗಳು ಹಾಗೂ ಸಣ್ಣ ನೀರಿನ ಹರಿವುಗಳಿಗೂ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಅಪಾಯ ಎದುರಾಗಿದೆ. ಪ್ರವಾಸಿಗರು ಬಿಸಾಡುವ ಪ್ಲಾಸ್ಟಿಕ್‌ ಸಮೇತ ಆಹಾರವನ್ನು ಜಾನುವಾರುಗಳು ತಿನ್ನುತ್ತಿರುವ ದೃಶ್ಯಗಳು ಆತಂಕ ಮೂಡಿಸುತ್ತಿದ್ದು, ವನ್ಯಜೀವಿಗಳೂ ತ್ಯಾಜ್ಯ ಸೇವಿಸುವ ಸಾಧ್ಯತೆಯಿದೆ. ಇದರಿಂದ ಸೂಕ್ಷ್ಮ ಪರಿಸರ ವ್ಯವಸ್ಥೆಯ ಮೇಲೆ ದೀರ್ಘಕಾಲೀನ ದುಷ್ಪರಿಣಾಮ ಬೀರುವ ಆತಂಕ ಪರಿಸರ ಪ್ರೇಮಿಗಳಲ್ಲಿದೆ.

ಗಿರಿಧಾಮದ ನೈಸರ್ಗಿಕ ಸೌಂದರ್ಯ ಮತ್ತು ಪಾವಿತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಕೈಮರ ಚೆಕ್‌ಪೋಸ್ಟ್‌ನಲ್ಲಿ ಕಟ್ಟುನಿಟ್ಟಿನ ತಪಾಸಣೆ ಪುನರಾರಂಭಿಸಬೇಕು. ಪ್ಲಾಸ್ಟಿಕ್‌ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು, ಸಮರ್ಪಕ ಕಸ ವಿಲೇವಾರಿ ವ್ಯವಸ್ಥೆ ಕಲ್ಪಿಸುವುದು ಹಾಗೂ ನಿಯಮ ಉಲ್ಲಂಘಿಸುವ ಪ್ರವಾಸಿಗರ ವಿರುದ್ಧ ದಂಡ ವಿಧಿಸುವ ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

RELATED ARTICLES
spot_img

Latest News