ಹನೂರು, ಆ.20- ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ದೇಗುಲದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, 22 ದಿನಗಳ ಅವಧಿಯಲ್ಲಿ 1,82,45,580 ರೂ. ನಗದು ಸಂಗ್ರಹವಾಗಿದೆ. ಹುಂಡಿ ಹಾಗೂ ಇ-ಹುಂಡಿ ಮೂಲಕ ಭಕ್ತರು ಸಲ್ಲಿಸಿದ ಕಾಣಿಕೆ ಇದಾಗಿದೆ.
ಸಾಲೂರು ಬೃಹನಠಾಧ್ಯಕ್ಷ ಡಾ. ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಿ. ಪುರುಷೋತ್ತಮ್ ಅವರ ನೇತೃತ್ವದಲ್ಲಿ ಬೆಳಿಗ್ಗೆ 7ರಿಂದ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ವೇಳೆ 14 ಗ್ರಾಂ ಚಿನ್ನ, 600 ಗ್ರಾಂ ಬೆಳ್ಳಿ, ಎರಡು ವಿದೇಶಿ ನೋಟುಗಳು ಹಾಗೂ 2 ಸಾವಿರ ಮುಖಬೆಲೆಯ ಏಳು ನೋಟುಗಳು ದೊರೆತಿವೆ.
ಭೀಮನ ಅಮಾವಾಸ್ಯೆ, ಹುಣ್ಣಿಮೆ ಸೇರಿದಂತೆ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಅಲ್ಲದೆ, ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಹಾಗೂ ವಿದೇಶಿ ಪ್ರವಾಸಿಗರ ಹೆಚ್ಚಿನ ಭೇಟಿ ಕೂಡ ಕಾಣಿಕೆ ಮೊತ್ತ ಹೆಚ್ಚಲು ಕಾರಣವಾಗಿದೆ ಎಂದು ತಿಳಿಸಲಾಗಿದೆ.
ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ವಾಣಿಜ್ಯ ಕಟ್ಟಡದಲ್ಲಿ ಸಿಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಹಾಗೂ ಮಲೆ ಮಹದೇಶ್ವರ ಬೆಟ್ಟ ಠಾಣೆ ಪೊಲೀಸರ ಬಿಗಿ ಬಂದೋಬಸ್ತ್ ನಡುವೆ ಹುಂಡಿ ಎಣಿಕೆ ನಡೆಯಿತು. ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ಹಾಗೂ ಕೊಳ್ಳೇಗಾಲದ ಬ್ಯಾಂಕ್ ಆಫ್ ಬರೋಡ ಸ್ಥಳೀಯ ಶಾಖೆಯ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ ಜಿ.ಎಲ್., ಚಾಮರಾಜನಗರ ಜಿಲ್ಲಾಡಳಿತ ಕಚೇರಿಯ ವಿಷಯ ನಿರ್ವಾಹಕ ಸುಮಂತ್, ಹಣಕಾಸು ಮತ್ತು ಲೆಕ್ಕಪತ್ರ ಸಲಹೆಗಾರ ಮಹದೇವು, ಪ್ರಾಧಿಕಾರದ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಮರಿಸ್ವಾಮಿ ಕಾಗಲವಾಡಿ ಮತ್ತು ಗಂಗನ ತಿಮಯ್ಯ ಮೆಲ್ಲಹಳ್ಳಿ ಸೇರಿದಂತೆ ವಿವಿಧ ವಿಭಾಗಗಳ ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.
