ಬೆಂಗಳೂರು, ಆ.20- ರಾಜ್ಯವಲಯ ಯೋಜನೆಯಡಿ 2025-26ನೇ ಸಾಲಿನಲ್ಲಿ ರಾಜ್ಯದ 1,250 ಸರ್ಕಾರಿ ಶಾಲೆಗಳಲ್ಲಿ 1,582 ಶೌಚಾಲಯಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಆಡಳಿತ ಪಕ್ಷದ ಶಾಸಕ ಯು.ಬಿ. ಬಣಕಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 136 ಶೌಚಾಲಯಗಳು ಮಂಜೂರಾಗಿವೆ. ಮೊದಲ ಹಂತದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಆದ್ಯತೆ ನೀಡಿ ಪರಿಗಣಿಸಲಾಗುತ್ತಿದೆ. ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ 504.23 ಲಕ್ಷ ರೂ. ಅನುದಾನ ಹಾಗೂ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 2,317 ಲಕ್ಷ ರೂ. ಅನುದಾನ ಉಳಿಕೆಯಾಗಿದೆ ಎಂದರು.
ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 544 ಲಕ್ಷ ರೂ. ಅನುದಾನ ಹಾಗೂ ಪಿಎಂಶ್ರೀ ಯೋಜನೆಯಡಿ 216 ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4,854.60 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.
2025-26ನೇ ಸಾಲಿನ ಆಯವ್ಯಯ ಘೋಷಣೆಯಂತೆ 50 ಸರ್ಕಾರಿ ಪ್ರೌಢಶಾಲೆಗಳನ್ನು ಪದವಿಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲು ಸರ್ಕಾರ ಆದೇಶಿಸಿದೆ. ಅದರಂತೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಪ್ರೌಢಶಾಲೆಯನ್ನು ಪದವಿಪೂರ್ವ ಕಾಲೇಜನ್ನಾಗಿ ಉನ್ನತೀಕರಿಸಲು ಆದೇಶಿಸಲಾಗಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಗೌರವಧನ ಹೆಚ್ಚಳಕ್ಕೆ ಆಗ್ರಹ
ಆಡಳಿತ ಪಕ್ಷದ ಶಾಸಕಿ ನಯನಾ ಮೋಟಮ್ಮ ಅವರು ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ 14 ಸಾವಿರ ರೂ. ಮಾಸಿಕ ಗೌರವಧನ ನೀಡಲಾಗುತ್ತಿದ್ದು, ಅದನ್ನು ಹೆಚ್ಚಿಸಬೇಕು. ಕನಿಷ್ಠ ವೇತನ ನೀಡಬೇಕು. ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಿಗಿಂತಲೂ ಕಡಿಮೆ ಗೌರವಧನ ದೊರೆಯುತ್ತಿದೆ. ಮಾಸಿಕ ರಜೆ, ಹೆರಿಗೆ ಸೌಲಭ್ಯ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ ಅವರು, 12 ಸಾವಿರ ರೂ. ಇದ್ದ ಗೌರವಧನವನ್ನು 14 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಗೌರವಧನದ ಜೊತೆಗೆ ಯಾವುದೇ ಸೌಲಭ್ಯಗಳನ್ನು ನೀಡಲು ನಿಯಮಗಳಲ್ಲಿ ಅವಕಾಶವಿಲ್ಲ. ವಾರದಲ್ಲಿ 10 ಗಂಟೆಗಳ ಕಾರ್ಯಭಾರವನ್ನು ಅತಿಥಿ ಉಪನ್ಯಾಸಕರಿಗೆ ನಿಗದಿಪಡಿಸಲಾಗಿದೆ. ಮೆರಿಟ್ ಆಧಾರದ ಮೇಲೆ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
