ಹನೂರು, ಆ.22- ಶೂಟೌಟ್ ಪ್ರಕರಣವನ್ನು ಬಳಸಿಕೊಂಡು ಅಂತರ್‌ರಾಜ್ಯ ಸಂಬಂಧ ಹದಗೆಡುವಂತೆ ಸಂಚು ರೂಪಿಸಿರುವ ಸೋಶಿಯಲ್ ಮೀಡಿಯಾ ವ್ಯಕ್ತಿ ಯಾರೆಂಬುದನ್ನು ಪೊಲೀಸರು ಪತ್ತೆಹಚ್ಚಿ, ಚುರುಕಿನ ತನಿಖೆ ನಡೆಸುವ ಮೂಲಕ ಸತ್ಯಾಸತ್ಯತೆಯನ್ನು ಹೊರತರಬೇಕು ಎಂದು ಆಗ್ರಹಿಸಲಾಗಿದೆ.
ತಾಲ್ಲೂಕಿನ ಶಾಗ್ಯ ಪಂಚಾಯಿತಿ ವ್ಯಾಪ್ತಿಯ ಮರಿಯಮಂಗಲ, ಜಗನ್ನಾಥ್‌ದೊಡ್ಡಿ ಹಾಗೂ ಲಾಸರ್‌ದೊಡ್ಡಿ ಗ್ರಾಮದ ಮೂವರು ಶಂಕಿತ ಬೇಟೆಗಾರರು ಅರಣ್ಯ ಇಲಾಖೆ ನಡೆಸಿದ ಶೂಟೌಟ್‌ನಲ್ಲಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರಿಹಾರದ ಚೆಕ್ ನೀಡಿ, ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆದೇಶಿಸಿದೆ.
ಅದರಂತೆ ತನಿಖೆ ಎಲ್ಲ ರೀತಿಯಲ್ಲೂ ಚುರುಕುಗೊಂಡಿದೆ. ಸಂತ್ರಸ್ತ ಕುಟುಂಬಸ್ಥರು ಎದೆಗುಂದಬಾರದು ಎಂದು ಅವರ ಬೆಂಬಲಕ್ಕೆ ನಿಂತು, ಸರ್ಕಾರದಿಂದ ಹೆಚ್ಚಿನ ಪರಿಹಾರ ನೀಡಬೇಕೆಂಬ ಒತ್ತಾಯವೂ ಕೇಳಿಬಂದಿದೆ.
ಈ ನಡುವೆ ಮೃತ ಡೇವಿಡ್ ಕುಮಾರ್ ಅವರ ಪುತ್ರಿ ಸಾಮಾಜಿಕ ಜಾಲತಾಣದಲ್ಲಿ, ‘ನಮ್ಮ ತಂದೆ ಸತ್ತುಹೋದರು. ನಮಗೆ ಯಾರು ಸಹಾಯಕ್ಕೆ ಬರುತ್ತಿಲ್ಲ. ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಮಾಮ, ನೀವಾದರೂ ಬನ್ನಿ’ ಎಂದು ಮನವಿ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಆದರೆ, ಬಾಲಕಿಯ ಬಾಯಿಯಿಂದ ಬಂದಿರುವ ಈ ಮಾತುಗಳು ಸ್ವಂತ ಹಾಗೂ ವೈಯಕ್ತಿಕವಾಗಿ ಬಂದಿಲ್ಲ. ಯಾರೋ ಸೋಶಿಯಲ್ ಮೀಡಿಯಾ ವ್ಯಕ್ತಿ ಹೇಳಿಕೊಟ್ಟು ಈ ವಿಡಿಯೊ ಮಾಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ರಾಜ್ಯದ ಜನರ ಸ್ವಾಭಿಮಾನಕ್ಕೆ ಧಕ್ಕೆ ತರುವ ವಿಚಾರವಾಗಿದೆ ಎಂದು ಆರೋಪಿಸಲಾಗಿದೆ.
ಕರ್ನಾಟಕದಲ್ಲಿ ಬದುಕು ಕಟ್ಟಿಕೊಂಡು, ರಾಜ್ಯದ ಜಲ, ನೆಲ ಹಾಗೂ ಭಾಷೆಯ ಋಣ ಹೊಂದಿದ್ದರೂ ತಮಿಳುನಾಡಿನ ವ್ಯಾಮೋಹ ಹೊಂದಿರುವ ವ್ಯಕ್ತಿಯೇ ಇಂತಹ ಕೃತ್ಯದ ಹಿಂದೆ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಇಂತಹ ವ್ಯಕ್ತಿಗಳಿಂದ ಅಂತರ್‌ರಾಜ್ಯ ಸಂಬಂಧ ಹದಗೆಡುವ ಸಾಧ್ಯತೆಯೂ ಇದೆ. ತಮಿಳುನಾಡಿನ ವ್ಯಾಮೋಹದಿಂದ ಕರ್ನಾಟಕಕ್ಕೆ ಅವಮಾನವಾಗುವಂತಹ ಬೆಳವಣಿಗೆಗಳಿಗೆ ಅವಕಾಶ ನೀಡಬಾರದು ಎಂದು ಹೇಳಲಾಗಿದೆ.
ಇಂತಹ ವ್ಯಕ್ತಿಗಳನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ರಾಜ್ಯದ ಘನತೆಗೆ ಧಕ್ಕೆ ಉಂಟಾಗುವುದರ ಜೊತೆಗೆ, ರಾಜ್ಯಕ್ಕೆ ಸಂಬಂಧಿಸಿದ ಗೌಪ್ಯ ಮಾಹಿತಿಗಳನ್ನು ರಹಸ್ಯವಾಗಿ ನೀಡುವ ಮೂಲಕ ಮಾರಕ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತಪಡಿಸಲಾಗಿದೆ.
ಬಾಲಕಿಯ ಹೇಳಿಕೆಯಿಂದ ರಾಜ್ಯದ ಜನತೆಗೆ ನೋವಾಗಿದೆ. ಸಂತ್ರಸ್ತರ ಪರವಾಗಿ ಹೋರಾಟ ನಡೆಸಿದ ಸಂಘಟನೆಗಳ ಹೋರಾಟಗಾರರಿಗೂ ಇದು ಒಂದು ರೀತಿಯಲ್ಲಿ ಅವಮಾನವಾಗಿದೆ ಎಂದು ಹೇಳಲಾಗಿದೆ. ಅನ್ಯ ರಾಜ್ಯದವರು ಸಹಾಯ ಮಾಡುವುದು ತಪ್ಪಲ್ಲ. ಆದರೆ, ನಮ್ಮ ರಾಜ್ಯವನ್ನು ಹೀಯಾಳಿಸಿ ಅನ್ಯ ರಾಜ್ಯದವರಿಂದ ಸಹಾಯ ಪಡೆಯುವುದು ತಪ್ಪು ಎಂದು ಆಕ್ಷೇಪಿಸಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬ ಸತ್ಯ ಹೊರಬರಬೇಕು ಎಂಬುದು ಜನತೆಯ ಆಶಯವಾಗಿದೆ.
ಅದೇ ರೀತಿ ಶೂಟೌಟ್ ಪ್ರಕರಣವನ್ನು ಮುಂದಿಟ್ಟುಕೊಂಡು ಅರಣ್ಯ ಸಂಪತ್ತು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿರುವ ವ್ಯಕ್ತಿಗಳಿಗೂ ಈ ಸೋಶಿಯಲ್ ಮೀಡಿಯಾ ವ್ಯಕ್ತಿಯ ಸಂಚಿನೊಂದಿಗೆ ಸಂಬಂಧವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಬೇಕು. ಬಾಲಕಿಯ ಹೇಳಿಕೆಯನ್ನು ಹಗುರವಾಗಿ ಪರಿಗಣಿಸದೆ, ಇದನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆ ತನಿಖೆ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
