ತುಮಕೂರು, ಆ.22- ಕಾಡುಪ್ರಾಣಿಗಳಿಂದ ಬೆಳೆ ರಕ್ಷಣೆಗಾಗಿ ಜಮೀನಿನ ಸುತ್ತ ಅಳವಡಿಸಿದ್ದ ಉರುಳಿಗೆ ಸಿಲುಕಿದ್ದ ಚಿರತೆಯನ್ನು ಸುಟ್ಟ ಆರೋಪದ ಮೇಲೆ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ತಾಲ್ಲೂಕಿನ ಗೌರಗೊಂಡನಹಳ್ಳಿ ಗ್ರಾಮದ ಜಿ.ಡಿ. ಶಿವಕುಮಾರ್, ನಾರಾಯಣಪ್ಪ ಹಾಗೂ ಚಂದ್ರಶೇಖರ್ ಬಂಧಿತರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಗೌರಗೊಂಡನಹಳ್ಳಿ ಗ್ರಾಮದ ನಾರಾಯಣಪ್ಪ ಅವರಿಗೆ ಬೆಟ್ಟದ ಬುಡದಲ್ಲಿ ಜಮೀನಿದ್ದು, ಅಲ್ಲಿ ರಾಗಿ ಬೆಳೆಯಲಾಗಿತ್ತು. ಕಾಡುಹಂದಿ, ನವಿಲು ಹಾಗೂ ಚಿರತೆಗಳ ಹಾವಳಿಯಿಂದ ಬೆಳೆ ಪದೇಪದೇ ಹಾನಿಗೊಳಗಾಗುತ್ತಿದ್ದ ಹಿನ್ನೆಲೆಯಲ್ಲಿ ಉಳಿದ ಬೆಳೆಯನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ಜಮೀನಿನ ಸುತ್ತ ಉರುಳು ಅಳವಡಿಸಲಾಗಿತ್ತು ಎನ್ನಲಾಗಿದೆ.
ಎರಡು ದಿನಗಳ ಹಿಂದೆ ಇದೇ ಉರುಳಿಗೆ ಚಿರತೆ ಸಿಲುಕಿಕೊಂಡಿತ್ತು. ವಿಷಯ ತಿಳಿದ ಆರೋಪಿಗಳು ಹಾಗೂ ಗ್ರಾಮದ ಕೆಲ ಯುವಕರು ನಿನ್ನೆ ಬೆಳಿಗ್ಗೆ ಸ್ಥಳಕ್ಕೆ ತೆರಳಿ ಚಿರತೆಯನ್ನು ಸುಟ್ಟಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಚಿರತೆಯನ್ನು ಸುಟ್ಟ ದೃಶ್ಯಗಳನ್ನು ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹಂಚಿಕೊಂಡಿದ್ದರು ಎನ್ನಲಾಗಿದೆ. ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪ್ರಕರಣದ ಮಾಹಿತಿ ಲಭಿಸಿದೆ.
ಖಚಿತ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಚಿರತೆಯ ಸುಟ್ಟ ಅವಶೇಷಗಳು ಹಾಗೂ ಮಾಂಸ ಪತ್ತೆಯಾಗಿವೆ. ಸ್ಥಳದಲ್ಲಿದ್ದ ಸಾಕ್ಷ್ಯಾಧಾರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಬಂಧಿತ ಮೂವರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಚಿರತೆ ಉರುಳಿಗೆ ಸಿಲುಕಿದ ಸಂದರ್ಭದಿಂದ ಅದನ್ನು ಸುಟ್ಟವರೆಗಿನ ಘಟನೆಯ ಕುರಿತು ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಚಿರತೆ ಸೇರಿದಂತೆ ಸಂರಕ್ಷಿತ ವನ್ಯಜೀವಿಗಳನ್ನು ಬೇಟೆಯಾಡುವುದು, ಬಲೆಗೆ ಬೀಳಿಸುವುದು ಅಥವಾ ಅವುಗಳಿಗೆ ಹಾನಿ ಮಾಡುವುದು ಗಂಭೀರ ಅಪರಾಧವಾಗಿದೆ. ಬೆಳೆ ಹಾನಿ ಹಾಗೂ ಕಾಡುಪ್ರಾಣಿಗಳ ಹಾವಳಿ ಕಂಡುಬಂದಲ್ಲಿ ಕಾನೂನುಬಾಹಿರವಾಗಿ ಉರುಳು ಅಳವಡಿಸುವ ಬದಲು ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳು ಸ್ಥಳೀಯರಿಗೆ ಸೂಚಿಸಿದ್ದಾರೆ.
