ಬೆಂಗಳೂರು,ಆ.22-ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರ ಕೊರತೆ ಹಾಗೂ ಬರದ ಆತಂಕದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ 2026-27ನೇ ಸಾಲಿನಲ್ಲಿ ಮೋಡ ಬಿತ್ತನೆ ಕಾರ್ಯಕ್ರಮ ಜಾರಿಗೆ ಮುಂದಾಗಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಳೆ ಕೊರತೆ ಕುರಿತು ಚರ್ಚಿಸಿ, ವೈಜ್ಞಾನಿಕ ಹಾಗೂ ತಾಂತ್ರಿಕ ವಿಧಾನಗಳ ಮೂಲಕ ಮಳೆ ಕೊರತೆ ನೀಗಿಸಲು ಕ್ರಮ ಕೈಗೊಳ್ಳುವಂತೆ ಜನಪ್ರತಿನಿಧಿಗಳು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ M/s. Kyathi Climate Modification Consultants LLP ಸಂಸ್ಥೆ ಆ.13ರಂದು ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ. 60 ದಿನಗಳ ಅವಧಿಯಲ್ಲಿ ಒಂದು ವಿಮಾನದ ಮೂಲಕ ಒಟ್ಟು 200 ಗಂಟೆಗಳ ವೈಮಾನಿಕ ಹಾರಾಟ ನಡೆಸಲು 28.52 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ 27.52 ಕೋಟಿ ರೂ. ಸ್ಥಿರ ವೆಚ್ಚ ಹಾಗೂ 1 ಕೋಟಿ ರೂ. ವೇರಿಯಬಲ್ ವೆಚ್ಚವಾಗಿದ್ದು, ಜಿಎಸ್ಟಿ ಹೆಚ್ಚುವರಿಯಾಗಿರಲಿದೆ.
ಸರ್ಕಾರದ ಆ.19ರ ಆದೇಶದಂತೆ ಯೋಜನೆಗೆ ಆಡಳಿತಾತಕ ಅನುಮೋದನೆ ನೀಡಲಾಗಿದೆ. ಮೋಡ ಬಿತ್ತನೆ ಕಾರ್ಯಾಚರಣೆಯ ತಾಂತ್ರಿಕ ಮತ್ತು ವೈಜ್ಞಾನಿಕ ಉಸ್ತುವಾರಿಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವಹಿಸಲಿದೆ.
ಅಂದಾಜು ತಯಾರಿ, ತಾಂತ್ರಿಕ ಮಾನದಂಡ, ಹವಾಮಾನ ಮೌಲ್ಯಮಾಪನ, ಮೇಲ್ವಿಚಾರಣೆ, ಕಾರ್ಯಾಚರಣೆ ಮೌಲ್ಯಮಾಪನ ಹಾಗೂ ಪೂರ್ಣಗೊಳಿಸುವಿಕೆ ಪ್ರಮಾಣೀಕರಣದ ಜವಾಬ್ದಾರಿ ಕೇಂದ್ರದ್ದಾಗಿದೆ. ಹಣಕಾಸು ಹಾಗೂ ಬಿಲ್ ಪಾವತಿ ಸೇರಿದಂತೆ ಆಡಳಿತಾತಕ ವಿಚಾರಗಳನ್ನು ಕರ್ನಾಟಕ ನೀರಾವರಿ ನಿಗಮ ನಿರ್ವಹಿಸಲಿದೆ.
ಜಲಸಂಪನೂಲ ಸಚಿವ ಎನ್.ಚಲುವರಾಯಸ್ವಾಮಿ ಅವರ ಮಾರ್ಗದರ್ಶನದಲ್ಲಿ ಯೋಜನೆ ಜಾರಿಯಾಗಲಿದ್ದು, ರೈತರು ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳಿಗೆ ಪರಿಹಾರ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ.
