ಮುಂಬೈ, ಆ.24 (ಪಿಟಿಐ)- ಮೀಸಲಾತಿಯನ್ನು ವಿರೋಧಿಸುವವರು ಅಥವಾ ಅದನ್ನು ರದ್ದುಗೊಳಿಸಲು ಪ್ರಯತ್ನಿಸುವವರ ವಿರುದ್ಧ ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲಿಸಬೇಕು ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಒತ್ತಾಯಿಸಿದ್ದಾರೆ. ಮೀಸಲಾತಿ ಸಾಂವಿಧಾನಿಕ ಹಕ್ಕು ಎಂದು ಅವರು ಹೇಳಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಗಳು ಸೇರಿದಂತೆ ಮೀಸಲಾತಿ ವಿರೋಧಿ ಹೋರಾಟಗಳು ಈ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದಿವೆ ಎಂದು ಅಠಾವಳೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಮೀಸಲಾತಿ ವ್ಯವಸ್ಥೆಯನ್ನು ತೆಗೆದುಹಾಕುವಂತೆ ಅಥವಾ ಬದಲಾಯಿಸುವಂತೆ ಒತ್ತಾಯಿಸುವ ಅಭಿಯಾನಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.
ಮೀಸಲಾತಿಗೆ ವಿರೋಧ ಎಂದರೆ ಸಂವಿಧಾನಕ್ಕೆ ವಿರೋಧ. ಮೀಸಲಾತಿ ವಿರೋಧಿ ನಿಲುವು ತೆಗೆದುಕೊಳ್ಳುವವರು ಸಾಂವಿಧಾನಿಕ ವಿರೋಧಿಗಳಾಗಿದ್ದು, ಅವರ ವಿರುದ್ಧ ದೇಶದ್ರೋಹದಂತಹ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ) ಮುಖ್ಯಸ್ಥರೂ ಆಗಿರುವ ಅವರು ಹೇಳಿದ್ದಾರೆ.
ಕೆಲವರು ಮೀಸಲಾತಿಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ, ಮೀಸಲಾತಿ ಸಾಂವಿಧಾನಿಕ ಹಕ್ಕಾಗಿರುವುದರಿಂದ ಅದನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.ಮೀಸಲಾತಿ ಸುಧಾರಣೆಗಳ ಕುರಿತು ಜಂತರ್ ಮಂತರ್ನಲ್ಲಿ ಪ್ರತಿಭಟನೆ ಅಥವಾ ಸಭೆ ನಡೆಸಲು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಅನುಮತಿ ನೀಡಲಾಗಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ದಾರಿತಪ್ಪಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ಗಳ ಆಧಾರದ ಮೇಲೆ ಜಂತರ್ ಮಂತರ್ನಲ್ಲಿ ಸೇರದಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಜಂತರ್ ಮಂತರ್ನಲ್ಲಿ ಬೃಹತ್ ಸಂಖ್ಯೆಯ ಪ್ರತಿಭಟನಾಕಾರರು ಬ್ಯಾನರ್ಗಳು, ಪೋಸ್ಟರ್ಗಳು ಮತ್ತು ಕೇಸರಿ ಧ್ವಜಗಳನ್ನು ಹಿಡಿದುಕೊಂಡು ಜಾತಿ ಆಧಾರಿತ ಮೀಸಲಾತಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಸರ್ಕಾರಿ ಸೌಲಭ್ಯಗಳು ಹಾಗೂ ಮೀಸಲಾತಿಗೆ ಅರ್ಹತೆಯನ್ನು ನಿರ್ಧರಿಸುವಲ್ಲಿ ಜಾತಿಗಿಂತ ಆರ್ಥಿಕ ಮಾನದಂಡಗಳಿಗೆ ಆದ್ಯತೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
