ಚಂಡೀಗಢ, ಆ.25- ಪಂಜಾಬ್ನಲ್ಲಿ ಶಿರೋಮಣಿ ಅಕಾಲಿ ದಳದೊಂದಿಗೆ ಭಾರತೀಯ ಜನತಾ ಪಕ್ಷ ಮತ್ತೆ ಚುನಾವಣಾ ಮೈತ್ರಿ ಮಾಡಿಕೊಳ್ಳಲಿದೆ ಎಂಬ ವದಂತಿಗಳಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಂಪೂರ್ಣ ತೆರೆ ಎಳೆದಿದ್ದಾರೆ.
ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ ಎಲ್ಲಾ 117 ಕ್ಷೇತ್ರಗಳಲ್ಲೂ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಸ್ವಂತ ಬಲದ ಮೇಲೆ ಗೆದ್ದು ಸರ್ಕಾರ ರಚಿಸಲಿದೆ ಎಂದು ಅವರು ಪಟಿಯಾಲದಲ್ಲಿ ತಿಳಿಸಿದ್ದಾರೆ.
ಪಂಜಾಬ್ನಲ್ಲಿ ಎರಡು ದಿನಗಳ ಸಾಂಸ್ಥಿಕ ಪ್ರವಾಸದಲ್ಲಿರುವ ಬಿ.ಎಲ್. ಸಂತೋಷ್, ರಾಜ್ಯದ ವಿವಿಧ ವಲಯಗಳ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಸರಣಿ ಸಭೆಗಳನ್ನು ನಡೆಸಿ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದಾರೆ.
ಪಂಜಾಬ್ ರಾಜಕೀಯ ಬದಲಾವಣೆಗೆ ಸಂಪೂರ್ಣವಾಗಿ ಸಿದ್ಧವಾಗಿದೆ. ಈ ಬದಲಾವಣೆಯನ್ನು ಸಾಕಾರಗೊಳಿಸಲು ಬಿಜೆಪಿ ಸಜ್ಜಾಗಿದೆ. ಎಲ್ಲಾ 117 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸಿ ಜಯಭೇರಿ ಬಾರಿಸಲಿದೆ ಎಂದು ಪಟಿಯಾಲ ವಲಯದ ಸಭೆಯಲ್ಲಿ ಸಂತೋಷ್ ಘೋಷಿಸಿದರು.
ಪಟಿಯಾಲ ಮತ್ತು ಬಟಿಂಡಾ ಸಭೆಗಳ ಬಳಿಕ ಲುಧಿಯಾನ, ಜಲಂಧರ್ ಹಾಗೂ ಅಮೃತಸರದಲ್ಲಿ ಪ್ರಮುಖ ನಾಯಕರು ಮತ್ತು ಜಿಲ್ಲಾ ಪ್ರತಿನಿಧಿಗಳೊಂದಿಗೆ ಸಾಂಸ್ಥಿಕ ಸಭೆಗಳು ನಡೆಯುತ್ತಿವೆ. ಇತ್ತೀಚಿನ ಸಾಂಸ್ಥಿಕ ಪುನರ್ರಚನೆಯಿಂದ ರಾಜ್ಯ ಘಟಕದ ಹಿರಿಯ ಕಾರ್ಯಕರ್ತರಲ್ಲಿ ಉಂಟಾಗಿದ್ದ ಅಸಮಾಧಾನವನ್ನು ಶಮನಗೊಳಿಸಿ, ಎಲ್ಲರನ್ನೂ ಒಗ್ಗೂಡಿಸಿ ಚುನಾವಣೆಗೆ ಅಣಿಗೊಳಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆದ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ, ದಶಕಗಳ ಕಾಲ ಎನ್ಡಿಎ ಮಿತ್ರಪಕ್ಷವಾಗಿದ್ದ ಶಿರೋಮಣಿ ಅಕಾಲಿ ದಳವು ಸೆಪ್ಟೆಂಬರ್ 2020ರಲ್ಲಿ ಬಿಜೆಪಿ ನೇತೃತ್ವದ ಮೈತ್ರಿಯಿಂದ ಹೊರಬಂದಿತ್ತು. ಇತ್ತೀಚೆಗೆ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು.
ಹಿರಿಯ ನಾಯಕರಾದ ಹರ್ಸಿಮ್ರತ್ ಕೌರ್ ಬಾದಲ್ ಹಾಗೂ ಬಿಕ್ರಮ್ ಸಿಂಗ್ ಮಜಿಥಿಯಾ ಅವರ ಹೇಳಿಕೆಗಳು ಬಿಜೆಪಿ-ಅಕಾಲಿ ದಳ ಮೈತ್ರಿ ಮರುಸ್ಥಾಪನೆಯ ಚರ್ಚೆಗೆ ಕಾರಣವಾಗಿದ್ದವು. ಆದರೆ, ಬಿಜೆಪಿ ವರಿಷ್ಠರು ಈ ಸಾಧ್ಯತೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
