ಬೆಂಗಳೂರು, ಆ.25- ನಗರ ಪೊಲೀಸರು ವಿವಿಧೆಡೆ ಕಾರ್ಯಾಚರಣೆ ನಡೆಸಿ ಹೊರರಾಜ್ಯದ ಡ್ರಗ್ ಪೆಡ್ಲರ್ ಸೇರಿದಂತೆ 10 ಮಂದಿಯನ್ನು ಬಂಧಿಸಿ 15.94 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಹೆಬ್ಬಾಳ, ಯಶವಂತಪುರ, ಎಚ್ಎಎಲ್, ವೈಟ್ಫೀಲ್ಡ್ ಹಾಗೂ ಯಲಹಂಕ ಠಾಣಾ ಪೊಲೀಸರು ವಿವಿಧೆಡೆ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂಬಂಧ ಆಯಾ ಠಾಣೆಗಳಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿಕೊಂಡು ದಾಳಿ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಹೊರರಾಜ್ಯದ ಒಬ್ಬ ವ್ಯಕ್ತಿ ಹಾಗೂ ಒಂಬತ್ತು ಮಂದಿ ಸ್ಥಳೀಯರು ಸೇರಿದಂತೆ ಒಟ್ಟು 10 ಡ್ರಗ್ ಪೆಡ್ಲರ್ಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಗಾಂಜಾ, ಹೈಡ್ರೋಗಾಂಜಾ, ಎಂಡಿಎಂಎ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ, ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಹೊರರಾಜ್ಯ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ ನಗರಕ್ಕೆ ತಂದು ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಬ್ಬಾಳ ಠಾಣೆ ಪೊಲೀಸರು 15.32 ಕೋಟಿ ರೂ. ಮೌಲ್ಯದ 7 ಕೆಜಿ 660 ಗ್ರಾಂ ಎಂಡಿಎಂಎ, ಒಂದು ದ್ವಿಚಕ್ರ ವಾಹನ ಹಾಗೂ ಎರಡು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಎಚ್ಎಎಲ್ ಠಾಣೆ ಪೊಲೀಸರು 34 ಲಕ್ಷ ರೂ. ಮೌಲ್ಯದ 170 ಗ್ರಾಂ ಎಂಡಿಎಂಎ, ವೈಟ್ಫೀಲ್ಡ್ ಠಾಣೆ ಪೊಲೀಸರು 10 ಲಕ್ಷ ರೂ. ಮೌಲ್ಯದ 10 ಕೆಜಿ 150 ಗ್ರಾಂ ಗಾಂಜಾ ಹಾಗೂ ಯಲಹಂಕ ಠಾಣೆ ಪೊಲೀಸರು 10 ಲಕ್ಷ ರೂ. ಮೌಲ್ಯದ 10 ಕೆಜಿ 100 ಗ್ರಾಂ ಗಾಂಜಾ, ಎರಡು ಮೊಬೈಲ್ ಫೋನ್ಗಳು ಹಾಗೂ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಯಶವಂತಪುರ ಠಾಣೆ ಪೊಲೀಸರು 8.40 ಲಕ್ಷ ರೂ. ಮೌಲ್ಯದ 1 ಕೆಜಿ 722 ಗ್ರಾಂ ಗಾಂಜಾ, 591 ಗ್ರಾಂ ಹಶೀಶ್ ಆಯಿಲ್, 52 ಗ್ರಾಂ ಹೈಡ್ರೋಗಾಂಜಾ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಬ್ಬಾಳ, ಯಶವಂತಪುರ, ಎಚ್ಎಎಲ್, ವೈಟ್ಫೀಲ್ಡ್ ಹಾಗೂ ಯಲಹಂಕ ಠಾಣೆಗಳ ಇನ್ಸ್ಪೆಕ್ಟರ್ಗಳು ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.
