Homeಇದೀಗ ಬಂದ ಸುದ್ದಿನೇಪಾಳ ಪ್ರವಾಹ ದುರಂತ : ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ, ಸಹಾಯವಾಣಿ ಆರಂಭ

ನೇಪಾಳ ಪ್ರವಾಹ ದುರಂತ : ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ, ಸಹಾಯವಾಣಿ ಆರಂಭ

ಬೆಂಗಳೂರು, ಆ.27- ನೇಪಾಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ದಿಢೀರ್ ಪ್ರವಾಹದ ಹಿನ್ನೆಲೆಯಲ್ಲಿ ಕರ್ನಾಟಕ ಮೂಲದ ಪ್ರವಾಸಿಗರು ಅಥವಾ ನಾಗರಿಕರು ಯಾರಾದರೂ ನಾಪತ್ತೆಯಾಗಿದ್ದರೆ ಅಥವಾ ಸಂಪರ್ಕಕ್ಕೆ ಸಿಗದೇ ಇದ್ದರೆ, ತಕ್ಷಣವೇ ಅವರ ವಿವರಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಕೇಂದ್ರ ಗೃಹ ಸಚಿವಾಲಯ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ರಾಜ್ಯ ಸರ್ಕಾರ ಸತತ ಸಂಪರ್ಕದಲ್ಲಿದ್ದು, ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸುವುದು ಹಾಗೂ ನಾಪತ್ತೆಯಾದವರನ್ನು ಪತ್ತೆಹಚ್ಚಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ.

ನೇಪಾಳದಲ್ಲಿ ತಮ್ಮ ಕುಟುಂಬಸ್ಥರು, ಸ್ನೇಹಿತರು ಅಥವಾ ಪರಿಚಿತರು ನಾಪತ್ತೆಯಾಗಿದ್ದಾರೆಂದು ಶಂಕೆ ಇದ್ದರೆ, ಸಾರ್ವಜನಿಕರು ನಾಪತ್ತೆಯಾದ ವ್ಯಕ್ತಿಯ ಪೂರ್ಣ ಹೆಸರು, ಮೊಬೈಲ್ ಸಂಖ್ಯೆ, ಕೊನೆಯದಾಗಿ ಸಂಪರ್ಕಿಸಿದ ಸ್ಥಳ ಮತ್ತು ಸಮಯ ಹಾಗೂ ಖಾಯಂ ವಿಳಾಸದ ವಿವರಗಳನ್ನು ತಕ್ಷಣವೇ ಸರ್ಕಾರಕ್ಕೆ ಒದಗಿಸುವಂತೆ ಕೋರಲಾಗಿದೆ. ಈ ವಿವರಗಳನ್ನು ಸಲ್ಲಿಸಲು ರಾಜ್ಯ ಸರ್ಕಾರ ವಿಶೇಷ ಗೂಗಲ್ ಫಾರ್ಮ್‌ ವ್ಯವಸ್ಥೆ ಮಾಡಿದ್ದು, ಅದರ ಮೂಲಕ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ಸಂತ್ರಸ್ತರು ಹಾಗೂ ಅವರ ಕುಟುಂಬಸ್ಥರ ನೆರವಿಗಾಗಿ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ) 24 ಗಂಟೆಯೂ ಸಹಾಯವಾಣಿ ತೆರೆದಿದೆ. ಸಾರ್ವಜನಿಕರು 1070 (ಟೋಲ್ ಫ್ರೀ) ಅಥವಾ 080-22253707 ಸಂಖ್ಯೆಗೆ ಕರೆ ಮಾಡಬಹುದು. ಇ-ಮೇಲ್ ಮೂಲಕವೂ ಮಾಹಿತಿ ನೀಡಬಹುದಾಗಿದೆ.

ಅಲ್ಲದೆ, ನೇಪಾಳದಲ್ಲಿ ಸಿಲುಕಿರುವ ಭಾರತೀಯರಿಗೆ ತುರ್ತು ನೆರವು ಒದಗಿಸಲು ಅಲ್ಲಿನ ಭಾರತೀಯ ರಾಯಭಾರ ಕಚೇರಿ ತುರ್ತು ವಾಟ್ಸ್‌ಆ್ಯಪ್ ಹಾಗೂ ಕರೆ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರು +977 9851316807, +977 9709107500 ಅಥವಾ +977 9810326117 ಸಂಖ್ಯೆಗೆ ನೇರವಾಗಿ ಕರೆ ಮಾಡಬಹುದು ಅಥವಾ ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಹಾಗೂ ನೆರವು ಕೋರಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES
spot_img

Latest News