Homeಕ್ರೀಡಾ ಸುದ್ದಿಭಾರತ-ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಪಂದ್ಯಗಳಿಗೆ 48 ಗಂಟೆಯಲ್ಲಿ 26 ಸಾವಿರ ಟಿಕೆಟ್‌ ಮಾರಾಟ

ಭಾರತ-ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಪಂದ್ಯಗಳಿಗೆ 48 ಗಂಟೆಯಲ್ಲಿ 26 ಸಾವಿರ ಟಿಕೆಟ್‌ ಮಾರಾಟ

Cricket Fans Rush For India-New Zealand Tour Tickets

ವೆಲ್ಲಿಂಗ್ಟನ್‌, ಆ.27- ಭಾರತದ ಮುಂಬರುವ ಬಹು-ಸ್ವರೂಪದ ನ್ಯೂಜಿಲೆಂಡ್‌ ಪ್ರವಾಸಕ್ಕೆ ಅಭೂತಪೂರ್ವ ಆರಂಭಿಕ ಬೇಡಿಕೆ ವ್ಯಕ್ತವಾಗಿದ್ದು, ಆತಿಥೇಯ ಮಂಡಳಿಯ ಪೂರ್ವ-ಮಾರಾಟದ ಮೊದಲ 48 ಗಂಟೆಗಳಲ್ಲೇ 26,000 ಟಿಕೆಟ್‌ಗಳು ಮಾರಾಟವಾಗಿವೆ.ಅಕ್ಟೋಬರ್‌ನಲ್ಲಿ ಆರಂಭವಾಗಲಿರುವ 12 ಪಂದ್ಯಗಳ ಪ್ರವಾಸವು ನ್ಯೂಜಿಲೆಂಡ್‌ ಕ್ರಿಕೆಟ್‌ನ ‘ಕ್ರಿಕೆಟ್‌ ನೇಷನ್‌’ ಸದಸ್ಯರ ಪೂರ್ವ-ಮಾರಾಟದಲ್ಲಿ ಅತ್ಯಧಿಕ ಬೇಡಿಕೆ ಕಂಡಿರುವ ಸರಣಿಯಾಗಿ ಹೊರಹೊಮ್ಮಿದೆ.

ಆಕ್ಲೆಂಡ್‌ನ ಈಡನ್‌ ಪಾರ್ಕ್‌ನಲ್ಲಿ ನಡೆಯಲಿರುವ ಸೀಮಿತ ಓವರ್‌ಗಳ ಪಂದ್ಯಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದ್ದು, ಕ್ರೈಸ್ಟ್‌ಚರ್ಚ್‌ ಹಾಗೂ ವೆಲ್ಲಿಂಗ್ಟನ್‌ನಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.9,000 ಆಸನಗಳ ಸಾಮರ್ಥ್ಯ ಹೊಂದಿರುವ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ಅಕ್ಟೋಬರ್‌ 22 ಮತ್ತು 24ರಂದು ನಡೆಯಲಿರುವ ಮೊದಲ ಎರಡು ಟಿ20 ಅಂತರರಾಷ್ಟ್ರೀಯ ಪಂದ್ಯಗಳು ಹಾಗೂ ನವೆಂಬರ್‌ 27ರಿಂದ ಡಿಸೆಂಬರ್‌ 1ರವರೆಗೆ ನಡೆಯಲಿರುವ ಎರಡನೇ ಮತ್ತು ಅಂತಿಮ ಟೆಸ್ಟ್‌ ಪಂದ್ಯಕ್ಕೆ ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾಗುವ ನಿರೀಕ್ಷೆಯಿದೆ.

ವೆಲ್ಲಿಂಗ್ಟನ್‌ನಲ್ಲಿ ನಡೆಯಲಿರುವ ಮೂರನೇ ಟಿ20ಐ ಹಾಗೂ ಎರಡನೇ ಏಕದಿನ ಪಂದ್ಯಕ್ಕೂ ಆರಂಭಿಕ ಮಾರಾಟ ಉತ್ತಮವಾಗಿದೆ. ಇದೇ ವೇಳೆ, ನವೆಂಬರ್‌ 19ರಿಂದ ಬೇಸಿನ್‌ ರಿಸರ್ವ್‌ನಲ್ಲಿ ಮೊದಲ ಟೆಸ್ಟ್‌ ಪಂದ್ಯ ಆರಂಭವಾಗಲಿದೆ.ಅಭಿಮಾನಿಗಳು ಟಿಕೆಟ್‌ಗಳನ್ನು ಮುಂಚಿತವಾಗಿ ಪಡೆದುಕೊಳ್ಳುವಂತೆ ನೀಡಿದ್ದ ಕರೆಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಎಂದು ನ್ಯೂಜಿಲೆಂಡ್‌ ಕ್ರಿಕೆಟ್‌ನ ಮುಖ್ಯ ಮಾರ್ಕೆಟಿಂಗ್‌ ಮತ್ತು ವಾಣಿಜ್ಯ ಅಧಿಕಾರಿ ಗ್ಲೆನ್‌ ಕ್ರಿಚ್ಲಿ ತಿಳಿಸಿದ್ದಾರೆ.

ಭಾರತವನ್ನು ಒಳಗೊಂಡ ಕ್ರಿಕೆಟ್‌ ಸರಣಿಯ ಉತ್ಸಾಹವನ್ನು ಅನುಭವಿಸಲು ಹಾಗೂ ವಿಶ್ವದ ಕೆಲವು ಶ್ರೇಷ್ಠ ಕ್ರಿಕೆಟಿಗರು ಕಣಕ್ಕಿಳಿಯುವುದನ್ನು ವೀಕ್ಷಿಸಲು ನ್ಯೂಜಿಲೆಂಡ್‌ ಅಭಿಮಾನಿಗಳಿಗೆ ಇದೊಂದು ಅಪರೂಪದ ಅವಕಾಶವಾಗಿದೆ ಎಂದು ಅವರು ಹೇಳಿದ್ದಾರೆ.

ಹಿಂದಿನ ಋತುವಿನ ಬೆಲೆಗಳನ್ನೇ ಈ ಬಾರಿಯೂ ಮುಂದುವರಿಸಲಾಗಿದ್ದು, ‘ಕ್ರಿಕೆಟ್‌ ನೇಷನ್‌’ ಪ್ರವೇಶ ಕೋಡ್‌ ಬಳಸುವ ಸದಸ್ಯರಿಗೆ ಟಿಕೆಟ್‌ಗಳಲ್ಲಿ ಶೇ.15ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಸಾರ್ವಜನಿಕ ಟಿಕೆಟ್‌ ಮಾರಾಟ ಸೆಪ್ಟೆಂಬರ್‌ 7ರಂದು ಆರಂಭವಾಗಲಿದೆ.

ಕ್ರಿಕೆಟ್‌ ನೇಷನ್‌ಗೆ ನೋಂದಾಯಿಸಿಕೊಳ್ಳುವ ಮೂಲಕ ಅಭಿಮಾನಿಗಳು ಪೂರ್ವ-ಮಾರಾಟದ ಅವಕಾಶ ಪಡೆಯಬಹುದು. ಸಾರ್ವಜನಿಕ ಮಾರಾಟ ಆರಂಭವಾಗಲು ಇನ್ನೂ 11 ದಿನಗಳಿರುವುದರಿಂದ, ಅಭಿಮಾನಿಗಳು ಮುಂಚಿತವಾಗಿಯೇ ಟಿಕೆಟ್‌ ಕಾಯ್ದಿರಿಸುವಂತೆ ನ್ಯೂಜಿಲೆಂಡ್‌ ಕ್ರಿಕೆಟ್‌ ಮನವಿ ಮಾಡಿದೆ.

RELATED ARTICLES
spot_img

Latest News