Homeರಾಷ್ಟ್ರೀಯಪ್ರವಾಹದಿಂದ ನೇಪಾಳ ತತ್ತರ : ಸಾವಿನ ಸಂಖ್ಯೆ 165ಕ್ಕೆ ಏರಿಕೆ, 823 ಮಂದಿ ನಾಪತ್ತೆ, ನೆರವಿಗೆ...

ಪ್ರವಾಹದಿಂದ ನೇಪಾಳ ತತ್ತರ : ಸಾವಿನ ಸಂಖ್ಯೆ 165ಕ್ಕೆ ಏರಿಕೆ, 823 ಮಂದಿ ನಾಪತ್ತೆ, ನೆರವಿಗೆ ನಿಂತ ಭಾರತ

ಕಠ್ಮಂಡು, ಆ.27- ನೇಪಾಳದ ಟಿಬೆಟ್ ಗಡಿ ಪ್ರದೇಶದ ಭೋಟೆ ಕೋಶಿ ನದಿಯಲ್ಲಿ ಸಂಭವಿಸಿದ ವಿನಾಶಕಾರಿ ಹಠಾತ್ ಪ್ರವಾಹದಿಂದ ಅಪಾರ ಸಾವುನೋವು ಸಂಭವಿಸಿದ್ದು, ದೇಶದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ.ಹಿಮನದಿ ಕುಸಿತ ಹಾಗೂ ಭೂಕಂಪನ ಚಟುವಟಿಕೆಯಿಂದ ಉಂಟಾದ ಈ ದುರಂತದಲ್ಲಿ ಸಾವಿನ ಸಂಖ್ಯೆ 165ಕ್ಕೆ ಏರಿಕೆಯಾಗಿದೆ ಎಂದು ನೇಪಾಳ ಪೊಲೀಸರು ಹಾಗೂ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ ದೃಢಪಡಿಸಿದೆ.

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆಯಾಗಿರುವ ಸಾಧ್ಯತೆಯಿದೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ತಿಳಿಸಿದ್ದಾರೆ. ಸಂವಹನ ಜಾಲಗಳು ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದರಿಂದ ಅವರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದು ನೇಪಾಳದಲ್ಲಿರುವ ಭಾರತೀಯ ರಾಯಭಾರಿ ನವೀನ್ ಶ್ರೀವಾಸ್ತವ ತಿಳಿಸಿದ್ದಾರೆ.

ನೇಪಾಳದ ವಿಪತ್ತು ನಿರ್ವಹಣಾ ಸಂಸ್ಥೆಯ ಪ್ರಕಾರ, ಒಟ್ಟು 823 ಮಂದಿ ಇನ್ನೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಇವರಲ್ಲಿ ನೂರಾರು ವಿದೇಶಿ ಪ್ರವಾಸಿಗರು ಹಾಗೂ ಸ್ಥಳೀಯರು ಸೇರಿದ್ದಾರೆ. ಚೀನಾದ ಸರ್ಕಾರಿ ಮಾಧ್ಯಮದ ವರದಿ ಪ್ರಕಾರ, ಟಿಬೆಟ್‌ನಲ್ಲೂ 260 ವಿದೇಶಿ ಪ್ರಜೆಗಳು ಸೇರಿದಂತೆ 558 ಮಂದಿ ನಾಪತ್ತೆಯಾಗಿದ್ದಾರೆ.ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಇದು ಸಾಂಪ್ರದಾಯಿಕ ಭೂಕಂಪದಿಂದ ಉಂಟಾದ ಪ್ರವಾಹವಲ್ಲ. ಬದಲಾಗಿ ಹಿಮನದಿ ಕುಸಿತ ಹಾಗೂ ಶಿಲಾಖಂಡರಾಶಿಗಳ ಹರಿವಿನಿಂದ ಉಂಟಾದ ಹಠಾತ್ ಪ್ರವಾಹವಾಗಿದೆ.

ಭಾರತದಿಂದ ನೆರವು

ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಅಗತ್ಯವಿರುವ ಎಲ್ಲ ಮಾನವೀಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಇದರ ಭಾಗವಾಗಿ ಭಾರತೀಯ ವಾಯುಪಡೆಯ ಸಿ-130ಜೆ ವಿಮಾನದ ಮೂಲಕ 10 ಟನ್ ಪರಿಹಾರ ಸಾಮಗ್ರಿಗಳನ್ನು ನೇಪಾಳಕ್ಕೆ ಕಳುಹಿಸಲಾಗಿದೆ. ಔಷಧಿಗಳು, ತಾತ್ಕಾಲಿಕ ಆಶ್ರಯ ಸಾಮಗ್ರಿಗಳು ಹಾಗೂ ಕಂಬಳಿಗಳು ಇದರಲ್ಲಿ ಸೇರಿವೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.

ರಾಜ್ಯಗಳ ಸಹಾಯವಾಣಿ

ಕರ್ನಾಟಕ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ತಮ್ಮ ತುರ್ತು ಸಹಾಯವಾಣಿಗಳನ್ನು ಸಕ್ರಿಯಗೊಳಿಸಿವೆ. ಕರ್ನಾಟಕದ ನಿವಾಸಿಗಳು ನೆರವಿಗಾಗಿ 1070 ಅಥವಾ 080-22253707 ಸಂಖ್ಯೆಗೆ ಸಂಪರ್ಕಿಸಬಹುದು.ಅಮೆರಿಕ ಸರ್ಕಾರ 5 ಲಕ್ಷ ಡಾಲರ್ ತುರ್ತು ನೆರವು ಘೋಷಿಸಿದ್ದು, ಪರಿಣತರ ತಂಡವನ್ನೂ ಕಳುಹಿಸುತ್ತಿದೆ. ಆಸ್ಟ್ರೇಲಿಯಾ ಸರ್ಕಾರ ತನ್ನ ನಾಪತ್ತೆಯಾದ ನಾಗರಿಕರ ಪತ್ತೆಗೂ ಕ್ರಮ ಕೈಗೊಂಡಿದೆ.

ಭಾರತದ ಗಡಿ ಜಿಲ್ಲೆಗಳಾದ ಉತ್ತರ ಪ್ರದೇಶ, ಬಿಹಾರ ಹಾಗೂ ಉತ್ತರಾಖಂಡದಲ್ಲಿ ನದಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ರಕ್ಷಣಾ ಪಡೆಗಳು ಹಾಗೂ ಹೆಲಿಕಾಪ್ಟರ್‌ಗಳ ನೆರವಿನಿಂದ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಭಾರತೀಯರ ಸ್ಥಿತಿ ಇನ್ನೂ ಆತಂಕಕಾರಿ

ಈ ದುರಂತದಲ್ಲಿ ಭಾರತೀಯರ ನಾಪತ್ತೆ ಕುರಿತು ವಿವಿಧ ಹಂತಗಳಲ್ಲಿ ವಿಭಿನ್ನ ಅಂಕಿಅಂಶಗಳು ಹೊರಬಿದ್ದಿವೆ. ಆರಂಭದಲ್ಲಿ ನೇಪಾಳ ಪ್ರವಾಸೋದ್ಯಮ ಮಂಡಳಿಯ ಪಟ್ಟಿಯಲ್ಲಿ 105 ಭಾರತೀಯರು ಸೇರಿದಂತೆ 384 ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ಗುರುತಿಸಲಾಗಿತ್ತು. ಬಳಿಕದ ಅಧಿಕೃತ ಮಾಹಿತಿಯಲ್ಲಿ ಕನಿಷ್ಠ 133 ಭಾರತೀಯರು ಹಾಗೂ 37 ಎನ್‌ಆರ್‌ಐಗಳು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಿಳಿಸಲಾಗಿತ್ತು.

ಗುರುವಾರ ಬೆಳಗ್ಗೆ ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಅವರು ಸುಮಾರು 300 ಭಾರತೀಯರು ನಾಪತ್ತೆಯಾಗಿರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಸಂವಹನ ವ್ಯವಸ್ಥೆ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದು ಮತ್ತು ವಿವಿಧ ಸಂಸ್ಥೆಗಳು ಸಿದ್ಧಪಡಿಸಿರುವ ನಾಪತ್ತೆಯಾದವರ ಪಟ್ಟಿಗಳಲ್ಲಿನ ವ್ಯತ್ಯಾಸವೇ ಅಂಕಿಅಂಶಗಳಲ್ಲಿನ ಗೊಂದಲಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ನೇಪಾಳದಲ್ಲಿರುವ ಭಾರತದ ರಾಯಭಾರಿ ನವೀನ್ ಶ್ರೀವಾಸ್ತವ ಕೂಡ ಸಂಪರ್ಕ ವ್ಯವಸ್ಥೆ ಸ್ಥಗಿತಗೊಂಡಿರುವುದರಿಂದ ಅನೇಕ ಭಾರತೀಯರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಪಟ್ಟಿಯಲ್ಲಿ ‘ನಾಪತ್ತೆ’ ಎಂದು ದಾಖಲಾಗಿರುವ ಪ್ರತಿಯೊಬ್ಬರೂ ನಿಜವಾಗಿಯೂ ಕಾಣೆಯಾಗಿದ್ದಾರೆ ಎಂದು ಅರ್ಥೈಸಲು ಸಾಧ್ಯವಿಲ್ಲ. ಅವರ ನೈಜ ಸ್ಥಿತಿಗತಿ ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.

ಕೈಲಾಸ ಮಾನಸ ಸರೋವರ ಯಾತ್ರಿಕರೂ ಸಂಕಷ್ಟದಲ್ಲಿ

ಪ್ರವಾಹದಿಂದಾಗಿ ಟಿಬೆಟ್‌ನ ಕೈಲಾಸ ಮಾನಸ ಸರೋವರ ಯಾತ್ರೆಯ ಮಾರ್ಗವೂ ತೀವ್ರವಾಗಿ ಹಾನಿಗೊಳಗಾಗಿದೆ. ನಾಪತ್ತೆಯಾದ ಭಾರತೀಯರಲ್ಲಿ ಕನಿಷ್ಠ 50 ಮಂದಿ ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿದ್ದವರು ಎಂದು ವರದಿಯಾಗಿದೆ.ಭಾರತೀಯ ಯಾತ್ರಿಕರು ಹಾಗೂ ಪ್ರವಾಸಿಗರ ಜತೆಗೆ ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್, ಕೆನಡಾ, ಮಲೇಷ್ಯಾ, ನೆದರ್‌ಲ್ಯಾಂಡ್ಸ್ ಹಾಗೂ ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳ ನಾಗರಿಕರೂ ಸಂಪರ್ಕಕ್ಕೆ ಸಿಗುತ್ತಿಲ್ಲ.

823 ಮಂದಿ ಸಂಪರ್ಕದಿಂದ ಹೊರಗೆ

ನೇಪಾಳದ ವಿಪತ್ತು ನಿರ್ವಹಣಾ ಸಂಸ್ಥೆಯ ಪ್ರಕಾರ, 823 ಮಂದಿ ಇನ್ನೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಇವರಲ್ಲಿ ನೇಪಾಳಿ ಹಾಗೂ ವಿದೇಶಿ ನಾಗರಿಕರು ಮತ್ತು ಪ್ರವಾಸಿಗರು ಸೇರಿದ್ದಾರೆ. ಒಂದು ಹಂತದಲ್ಲಿ 579 ಪ್ರವಾಸಿಗರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.

ರಕ್ಷಣಾ ತಂಡಗಳು ಪೀಡಿತ ಪ್ರದೇಶಗಳಲ್ಲಿ ಮನೆಗಳು, ವಾಹನಗಳು, ಸೇತುವೆಗಳು ಹಾಗೂ ನದಿಪಾತ್ರಗಳ ಬಳಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ನಾಪತ್ತೆಯಾದವರ ಪತ್ತೆ ಹಾಗೂ ಸಂತ್ರಸ್ತರ ರಕ್ಷಣೆಗೆ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳಿಸಲಾಗಿದೆ.

RELATED ARTICLES
spot_img

Latest News