Homeರಾಜಕೀಯಬಿಜೆಪಿ ತೊರೆದು ಕಾಂಗ್ರೆಸ್‌‍ಗೆ ಸೇರಿದ ನೆ.ಲ.ನರೇಂದ್ರ ಬಾಬು

ಬಿಜೆಪಿ ತೊರೆದು ಕಾಂಗ್ರೆಸ್‌‍ಗೆ ಸೇರಿದ ನೆ.ಲ.ನರೇಂದ್ರ ಬಾಬು

ಬೆಂಗಳೂರು, ಸೆ.13- ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಬಿಜೆಪಿ ತೊರೆದು ಇಂದು ಕಾಂಗ್ರೆಸ್‌‍ಗೆ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿಯ ಭವನದಲ್ಲಿ ನಡೆದ ಭಾರತ್‌ ಜೋಡೋ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್‌, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌, ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಚಿವರಾದ ರಾಣಿ ಸತೀಶ್‌, ಎಚ್‌.ಎಂ.ರೇವಣ್ಣ, ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಪಿ.ಆರ್‌.ರಮೇಶ್‌, ರಮೇಶ್‌ ಬಾಬು, ಮುಖಂಡರಾದ ಕೇಶವಮೂರ್ತಿ, ಶಿವರಾಜ್‌, ಎಸ್‌‍.ಕೆ.ಸಿದ್ದಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಇದೇ ಸಮಯದಲ್ಲಿ ಮಾತನಾಡಿದ ಬಿ.ಕೆ.ಹರಿ ಪ್ರಸಾದ್‌, ಅಧಿಕಾರಕ್ಕಾಗಿ ಕೆಲವರು ಬಿಜೆಪಿ ಅಥವಾ ಬೇರೆ ಪಕ್ಷಕ್ಕೆ ಹೋಗಿರಬಹುದು. ಆದರೆ ಅಲ್ಲಿ ಅವರಿಗೆ ಅವಕಾಶಗಳು ಕಡಿಮೆ. ಹೀಗಾಗಿ ಮರಳಿ ಕಾಂಗ್ರೆಸ್‌‍ಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿಯಲ್ಲಿ ಯಾವುದೇ ಕೋಮು ಗಲಭೆಗಳಾದರೂ ಅದಕ್ಕೆ ಬಲಿಪಶುಗಳಾಗುವುದು ಬಡವರ ಮಕ್ಕಳು. ಆಯೋಧ್ಯೆಯಾತ್ರೆ, ಹಿಜಾಬ್‌, ಹಲಾಲ್‌ ನಂತಹ ಗಲಾಟೆಗಳಲ್ಲಿ ಕ್ರಿಮಿನಲ್‌ ಪ್ರಕರಣಕ್ಕೆ ಸಿಲುಕಿದವರು ಶೂದ್ರರ ಮಕ್ಕಳು. ಬಿ.ಎಸ್‌‍.ಯಡಿಯೂರಪ್ಪ, ಸಿ.ಟಿ.ರವಿ ಅವರ ಮಕ್ಕಳು ವಿದೇಶದಲ್ಲಿ ಓದುತ್ತಿದ್ದಾರೆ. ಬಡವರ ಮಕ್ಕಳು ಕೇಸ್‌‍ ಹಾಕಿಸಿಕೊಂಡು ಜೈಲಿನಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

75 ವರ್ಷದಲ್ಲಿ ಕಾಂಗ್ರೆಸ್‌‍ ಏನು ಮಾಡಿದೆ? ಎಂದು ಬಿಜೆಪಿಯವರು ಪ್ರಶ್ನೆ ಮಾಡುತ್ತಾರೆ. ಸ್ವಾತಂತ್ರ್ಯ ಬಂದಾಗ ದೇಶದಲ್ಲಿ 15 ವಿಶ್ವ ವಿದ್ಯಾನಿಲಯಗಳಿದ್ದವು. ಸಾಕ್ಷರತೆ ಶೇ. 11ರಷ್ಟಿತ್ತು. ಈಗ 600 ವಿಶ್ವವಿದ್ಯಾನಿಲಯಗಳಿವೆ. ಸಾಕ್ಷರತಾ ಪ್ರಮಾಣ ಶೇ.76ರ ರಷ್ಟಿದೆ. ಕಳೆದ 12 ವರ್ಷದಲ್ಲಿ ನರೇಂದ್ರ ಮೋದಿ ದ್ವೇಷ ರಾಜಕಾರಣ ಬಿಟ್ಟು ಬೇರೇನೂ ಮಾಡಿಲ್ಲ. ಜನ ಏನನ್ನೂ ಊಟ ಮಾಡಬೇಕು, ಯಾವ ಬಟ್ಟೆ ಹಾಕಬೇಕು ಎಂಬುದರಲ್ಲೇ ಹೆಚ್ಚು ಸಮಯ ಕಳೆದಿದ್ದಾರೆ ಎಂದರು.

ಪ್ರಿಯಾಂಕ್‌ ಖರ್ಗೆ ಮತ್ತು ಆರ್‌ಎಸ್‌‍ಎಸ್‌‍ ಕುರಿತು ಪುಸ್ತಕವೊಂದು ಬಿಡುಗಡೆಯಾಗಲಿದೆ. ಅದಕ್ಕೆ ತಡವಾಗಿ ಹೋದರೆ ನಾನು ಹೆದರಿಕೊಂಡಿದ್ದೇನೆ ಎಂದು ಭಾವಿಸುತ್ತಾರೆ. ಅದಕ್ಕಾಗಿ ಈ ಕಾರ್ಯಕ್ರಮ ಬಿಟ್ಟು ಅಲ್ಲಿಗೆ ತೆರಳುತ್ತಿದ್ದೇನೆ ಎಂದು ಹೇಳಿದರು.ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಪಕ್ಷ ಬದಲಾದರೂ ನರೇಂದ್ರ ಬಾಬು ಅವರ ಸಿದ್ಧಾಂತ ಬದಲಾಗಲಿಲ್ಲ. ಬಡವರ ಪರವಾದ ಬದ್ಧತೆ ಹೀಗೆ ಮುಂದುವರೆಯಲಿ ಎಂದರು.

ಪಕ್ಷ ಸೇರ್ಪಡೆಯಾದ ನರೇಂದ್ರ ಬಾಬು ಮಾತನಾಡಿ, 10 ವರ್ಷಗಳ ಹಿಂದೆ ನಾನು ಬಿಜೆಪಿಗೆ ಸೇರುತ್ತೇನೆ ಎಂದಾಗ, ನೀನು ರಾಜಕೀಯವಾಗಿ 10 ವರ್ಷ ಹಿಂದೆ ಉಳಿಯುತ್ತೀಯ ಎಂದು ಹೇಳಿ ಚೀಟಿ ಬರೆದುಕೊಟ್ಟಿದ್ದರು. ಅದನ್ನು ಈಗಲೂ ಇಟ್ಟುಕೊಂಡಿದ್ದೇನೆ. ಅವರು ಭವಿಷ್ಯ ಹೇಳಿದಂತೆಯೇ ಆಗಿ ಹೋಯಿತು ಎಂದು ವಿಷಾದಿಸಿದರು.

ಬಿಜೆಪಿಯಲ್ಲಿ ಸಬ್‌ಕಾ ಸಾತ್‌-ಸಬ್‌ಕಾ ವಿಕಾಸ್‌‍ ಎಂಬುದು ಹೆಸರಿಗಷ್ಟೇ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಯಾರನ್ನು ನೇಮಿಸಿದ್ದಾರೆ ಎಂದು ನೋಡಿದರೆ, ಪರಿಸ್ಥಿತಿ ಅರ್ಥವಾಗುತ್ತದೆ. ಈವರೆಗೂ ಉಪಾಧ್ಯಕ್ಷರನ್ನು ನೇಮಿಸಿಲ್ಲ. ನ್ಯಾಯಮೂರ್ತಿ ರೋಹಿಣಿ ಅವರ ವರದಿ ಶೈತ್ಯಾಗಾರದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೇವರಾಜು ಅರಸು ಹಿಂದುಳಿದ ವರ್ಗಗಳ ಸಮುದಾಯದ ಭರವಸೆ. ಬಿಜೆಪಿಯಲ್ಲಿ ಒಬಿಸಿ ಘಟಕದ ಅಧ್ಯಕ್ಷನಾಗಿ ನಾನು ಅರಸು ಜನ ದಿನಾಚರಣೆ ಮಾಡಿದ್ದಕ್ಕೆ, ಛೀಮಾರಿ ಹಾಕಿಸಿಕೊಂಡೆ ಎಂದು ನೋವು ತೋಡಿಕೊಂಡರು. ತಮ ರಾಜಕೀಯ ಬೆಳವಣಿಗೆಗೆ ಡಿ.ಕೆ.ಶಿವಕುಮಾರ್‌ ಅವರ ಪಾತ್ರ ಮಹತ್ವದ್ದು. ಬಿಜೆಪಿಯಲ್ಲಿ ಬಹಳಷ್ಟು ಸ್ಥಾನಗಳು ಬಿಕರಿಯಾಗುತ್ತಿವೆ. ಕೇಂದ್ರದ ಹಲವು ಸಮಿತಿಗಳಿದ್ದರೂ ಅವುಗಳಲ್ಲಿ ಯಾರಿಗೂ ಸ್ಥಾನ ಸಿಗುತ್ತಿಲ್ಲ ಎಂದು ಹೇಳಿದರು. ಪ್ರೊ. ಚಂದ್ರೇಗೌಡರು ಇದೇ ಸಂದರ್ಭದಲ್ಲಿ ಕಾಂಗ್ರೆಸ್‌‍ ಸೇರ್ಪಡೆಯಾದರು.

RELATED ARTICLES
spot_img

Latest News