ಹೊಳೆನರಸೀಪುರ, ಸೆ.15- ನಾನು ಈ ಹಿಂದೆ ತೋರಿಸಿದ್ದ ಪೆನ್‌ಡ್ರೈವ್ ಖಾಲಿಯಾಗಿರಲಿಲ್ಲ. ಅದರಲ್ಲಿ ಹಣ ವಸೂಲಿ ವಿಚಾರಕ್ಕೆ ಸಂಬಂಧಿಸಿದ ಮಾತುಕತೆಗಳು ದಾಖಲಾಗಿವೆ. ಅದರಲ್ಲಿ ಯಾರ್ಯಾರ ಹೆಸರುಗಳಿವೆ ಎಂಬುದೂ ಗೊತ್ತಿದ್ದು, ಅಗತ್ಯವಿದ್ದರೆ ಆ ಪೆನ್‌ಡ್ರೈವ್ ಈಗಲೂ ನೀಡುತ್ತೇನೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.
ಮಾವಿನಕೆರೆ ಬೆಟ್ಟದಲ್ಲಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆಯ ಆರಂಭದ ದಿನಗಳಲ್ಲೇ ಕೆಲವು ಘಟನೆಗಳು ನಡೆದಿದ್ದವು. ಆಗಲೇ ಪೆನ್‌ಡ್ರೈವ್ ನನ್ನ ಬಳಿ ಇತ್ತು. ಆದರೆ ಅದನ್ನು ಯಾವಾಗ ಬಿಡುಗಡೆ ಮಾಡಬೇಕು ಎಂಬ ಬಗ್ಗೆ ಕೆಲ ಅನುಭವಸ್ಥರು ಸಲಹೆ ನೀಡಿದ್ದರು. ಕಾಂಗ್ರೆಸ್‌ನ ಶಕ್ತಿಯನ್ನು ಯಾವ ರೀತಿಯಲ್ಲಿ ಎದುರಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೇನೆ ಎಂದರು.
ಪೆನ್‌ಡ್ರೈವ್‌ನಲ್ಲಿ ಇಬ್ಬರು ಎಂಜಿನಿಯರ್‌ಗಳ ನಡುವಿನ ಮಾತುಕತೆ ಇದೆ. ವರ್ಗಾವಣೆ ಹಾಗೂ ಬಡ್ತಿ ಪಡೆಯಲು ಹಣ ನೀಡಿರುವ ಬಗ್ಗೆ ಅವರು ಮಾತನಾಡಿರುವುದು ದಾಖಲಾಗಿದೆ. ಬಡ್ಡಿಗೆ ಹಣ ತಂದು ಸಚಿವರಿಗೆ ನೀಡಿ ಬಡ್ತಿ ಪಡೆದಿರುವುದಾಗಿ ಒಬ್ಬರು ಹೇಳಿಕೊಂಡಿದ್ದಾರೆ. ಮತ್ತೊಬ್ಬರು ತಮ ತಂಡ ಹಣ ನೀಡಿ ಕೆಲಸ ಮಾಡಿಸಿಕೊಂಡಿರುವ ಬಗ್ಗೆ ಹೇಳುತ್ತಾರೆ. ಈ ವಿಚಾರವನ್ನು ನಾನು ಸುಮನೆ ಹೇಳುತ್ತಿಲ್ಲ. ಸದ್ಯದಲ್ಲೇ ಎಲ್ಲವೂ ನಿಮ ಮುಂದೆ ಬರಲಿದೆ ಎಂದು ಅವರು ಹೇಳಿದರು.
ನೀಟ್ ಪರೀಕ್ಷೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಕೇಂದ್ರ ಸಚಿವರ ರಾಜೀನಾಮೆ ಕೇಳಿದ್ದ ಕಾಂಗ್ರೆಸ್ ನಾಯಕರು, ರಾಜ್ಯದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಘಟನೆಗಳಿಗೆ ಯಾರ ರಾಜೀನಾಮೆ ಕೇಳುತ್ತಾರೆ? ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ ನಾಯಕ ರಾಹುಲ್ ಗಾಂಧಿ ಅವರನ್ನು ಕೇಳಿಕೊಂಡು ಬಂದ ನಂತರ ಇಲ್ಲಿ ಯಾರ ರಾಜೀನಾಮೆ ಪಡೆಯಬೇಕು ಎಂದು ಹೇಳಲಿ ಎಂದು ಅವರು ವ್ಯಂಗ್ಯವಾಡಿದರು.
