ಬೆಂಗಳೂರು, ಸೆ.15- ರಾಜ್ಯದಲ್ಲಿ ಪ್ರತಿಭಟನೆ ಹಾಗೂ ಪ್ರಚೋದನೆಗಳ ಮೂಲಕ ಶಾಂತಿಭಂಗ ಉಂಟುಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಂಜಿನಿಯರ್ ದಿನಾಚರಣೆ ಅಂಗವಾಗಿ ನಗರದ ಕೆ.ಆರ್.ಸರ್ಕಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಂದೇ ಮಾತರಂ ವಿಚಾರವಾಗಿ ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿರುವ ಕುರಿತು ಲೇವಡಿ ಮಾಡಿದರು.
ರಾಜ್ಯದ ಹಿತರಕ್ಷಣೆಗಾಗಿ ಕೆಲಸ ಮಾಡಬೇಕು. ಬಿಜೆಪಿಯವರನ್ನು ಏನೇ ಮಾಡಿದರೂ ಬದಲಾಯಿಸಲು ಸಾಧ್ಯ ಇಲ್ಲ. ಎಲ್ಲದರಲ್ಲೂ ತಪ್ಪು ಹುಡುಕುತ್ತಾರೆ. ಟಿ.ನರಸೀಪುರದ ಪೊಲೀಸ್ ಇನ್ಸ್ಪೆಕ್ಟರ್ ಶಾಂತಿಯನ್ನು ಪಾಲನೆ ಮಾಡಿ ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪು ಹುಡುಕುತ್ತಿದ್ದಾರೆ. ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟಿ.ನರಸೀಪುರಕ್ಕೆ ಹೋಗಿ ಪ್ರತಿಭಟನೆ ಮಾಡಿದ್ದಾರೆ. ಮೈಸೂರಿನ ಸಂಸದರೂ ಆಗಿರುವ ಮಹಾರಾಜರನ್ನು ಬೀದಿಗಿಳಿಸಿದ್ದಾರೆ ಎಂದು ವಿಷಾದಿಸಿದರು.
ಒಬ್ಬ ಪಂಚಾಯಿತಿಯ ಸದಸ್ಯ ಮಾಡಬಹುದಾದ ಕೆಲಸಕ್ಕೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಂಬ ಸಾಂವಿಧಾನಿಕ ಹುದ್ದೆಯಲ್ಲಿರುವವರು ಹೋಗಿರುವುದು ಪ್ರಶ್ನಾರ್ಹ. ರಾಜ್ಯದಲ್ಲಿ ಅಶಾಂತಿ ಮೂಡಿಸುವುದು ಮತ್ತು ಕೆಟ್ಟ ಹೆಸರು ತರುವ ಪ್ರಯತ್ನವನ್ನು ಯಾರೂ ಮಾಡಬಾರದು ಎಂದು ಹೇಳಿದರು.
ಪೊಲೀಸರು ಎಂದರೆ ಭಕ್ತಿ ಮತ್ತು ಭಯ ಇರಬೇಕು.ಟಿ.ನರಸೀಪುರದ ಇನ್ಸ್ಪೆಕ್ಟರ್ ಹೇಳಿರುವುದರಲ್ಲಿ ತಪ್ಪೇನೂ ಇಲ್ಲ, ಪೊಲೀಸರು ಅವರದೇ ಭಾಷೆಯಲ್ಲಿ ಮಾತನಾಡುತ್ತಾರೆ. ಹಾಗಲ್ಲದೆ ಇನ್ನೇನು ತಬ್ಬಿಕೊಂಡು ಮಾತನಾಡಬೇಕಿತ್ತೇ ಎಂದು ಪ್ರಶ್ನಿಸಿದರು.
ವಿರೋಧಪಕ್ಷದ ನಾಯಕರಿಂದ ಇನ್ನಷ್ಟು ಎತ್ತರದ ಕೆಲಸಗಳನ್ನು ನಿರೀಕ್ಷೆ ಮಾಡಿದ್ದೆ. ಆದರೆ ಟಿ.ನರಸೀಪುರದ ಪ್ರತಿಭಟನೆಗೆ ಅಶೋಕ್ ಅವರು ಹೋಗಿರುವುದು ಘನತೆಗೆ ತಕ್ಕುದಾಗಿಲ್ಲ.
ಕೇಂದ್ರ ಸಚಿವ ಪ್ರಹ್ಲಾದ್ಜೋಶಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಇನ್್ಸಸ್ಪೆಕ್ಟರ್ ಅವರನ್ನು ಅಮಾನತು ಪಡಿಸಬೇಕು ಎನ್ನುತ್ತಾರೆ. ಬಿಜೆಪಿಯವರಿಗೆ ಇನ್ನೂ ಸರಿಯಾಗಿ ಅರ್ಥವಾದಂತಿಲ್ಲ. ವಿದೇಶೀಯರು ಕರ್ನಾಟಕದ ಮೂಲಕ ಭಾರತವನ್ನು ನೋಡುತ್ತಿದ್ದಾರೆ. ಇದಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡಬೇಡಿ ಎಂದು ಮನವಿ ಮಾಡಿದರು.
ಬರ ಘೋಷಣೆಯ ಬಗ್ಗೆ ಶಾಸಕರು ಆತಂಕಕ್ಕೊಳಗಾಗಬಾರದು.ಕೇಂದ್ರದ ತಂಡ ಬಂದು ಅಧ್ಯಯನ ಮಾಡಿದ ವೇಳೆಯಲ್ಲಿ ತಪ್ಪು ಮಾಹಿತಿ ಹೋದರೆ ತೊಂದರೆಯಾಗುತ್ತದೆ. ಅದಕ್ಕಾಗಿ ಈಗಾಗಲೇ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದೇವೆ. ಇನ್ನಷ್ಟು ವರದಿಗಳನ್ನು ಪಡೆದು ಕಂದಾಯ ಸಚಿವರಾಗಿರುವ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರ ಜೊತೆ ಚರ್ಚಿಸಿ ಮತ್ತಷ್ಟು ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸುವುದಾಗಿ ಹೇಳಿದರು.
ರಾಜ್ಯದಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಈ ವಾರ, ಅಥವಾ ಮುಂದಿನ ವಾರ ಮಳೆಯಾಗಬಹುದು ಎಂಬ ಮುನ್ಸೂಚನೆ ಇತ್ತು. ಆದರೆ ಸದ್ಯದ ವಾತಾವರಣದಲ್ಲಿ ಮಳೆಯ ಲಕ್ಷಣಗಳಿಲ್ಲ, ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ರಾಜಕೀಯವಾಗಿ ಯಾರೂ ಪ್ರತಿಭಟನೆ ಮಾಡಬಾರದು, ವಿರೋಧ ಪಕ್ಷದವರು ಇದರಲ್ಲಿ ರಾಜಕೀಯ ಮಾಡಲು ಯತ್ನಿಸುತ್ತಿದ್ದಾರೆ. ಆದರೆ ಸರ್ಕಾರಕ್ಕೆ ರಾಜ್ಯದ ಜನರ ಬಗ್ಗೆ ಕಾಳಜಿ ಇದೆ ಎಂದು ಹೇಳಿದರು.
ವಿದ್ಯುತ್ ಪೂರೈಕೆಗೂ ತೊಂದರೆಯಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ, ಮಾನಸಿಕವಾಗಿ ಜನರನ್ನು ಇದಕ್ಕೆ ಸಜ್ಜುಗೊಳಿಸಬೇಕು, ಸರ್ಕಾರ ಬರ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದರು. ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಬರ ಘೋಷಣೆಯ ಬಗ್ಗೆ ಚರ್ಚೆ ನಡೆಸಲಾಗುವುದು. ರೈತರ ಸಮಸ್ಯೆಗಳ ಚರ್ಚೆಯ ಸಲುವಾಗಿ ವಿಶೇಷ ಅಧಿವೇಶನ ಕರೆಯಲಾಗಿದೆ. ರೈತರ ಜೊತೆ ಕೂಡ ಚರ್ಚಿಸಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.
