Homeರಾಜ್ಯಕಾರಾಗೃಹಗಳ ಅವ್ಯವಸ್ಥೆಯ ವಿಚಾರದಲ್ಲಿ ಗೃಹ ಸಚಿವರ ನಿರ್ಲಕ್ಷ್ಯ..?

ಕಾರಾಗೃಹಗಳ ಅವ್ಯವಸ್ಥೆಯ ವಿಚಾರದಲ್ಲಿ ಗೃಹ ಸಚಿವರ ನಿರ್ಲಕ್ಷ್ಯ..?

ಬೆಂಗಳೂರು,ಸೆ.15- ಕಾರಾಗೃಹಗಳ ಭದ್ರತಾ ವಿಷಯಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಕರ್ನಾಟಕ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಮೊದಲು ಜೈಲುಗಳಲ್ಲಿ ಬೀಡಿ,ಸಿಗರೇಟು, ಗಾಂಜಾ ಸಿಗುತ್ತಿದ್ದವು. ನಂತರದ ವರ್ಷಗಳಲ್ಲಿ ಚಾಕು,ಚೂರಿಗಳು ಒಳನುಗ್ಗಿದವು. ಇತ್ತೀಚಿನ ವರ್ಷಗಳಲ್ಲಿ ಮೊಬೈಲ್‌ಗಳು ಮತ್ತು ಸಿಂಥೆಟಿಕ್‌ ಮಾದಕ ವಸ್ತುಗಳು ಪ್ರವೇಶಿಸಿ ರಾರಾಜಿಸುತ್ತಿವೆ.

ಈ ಹಿಂದೆ ಕೆಲವು ರೌಡಿಗಳು ಜೈಲಿನ ಒಳಗೆ ಇದ್ದುಕೊಂಡೇ ಶ್ರೀಮಂತರು, ವ್ಯಾಪಾರಿಗಳಿಗೆ ಫೋನ್‌ ಮಾಡಿ ಧಮ್ಕಿ ಹಾಕಿ ಹಣ ವಸೂಲಿ ಮಾಡುತ್ತಿದ್ದರು. ಇನ್ನೂ ಕೆಲ ರೌಡಿಗಳು ಎದುರಾಳಿ ರೌಡಿಗೆ ಜೈಲಿನಲ್ಲೇ ಕುಳಿತು ಸ್ಕೇಚ್‌ ಹಾಕಿ ಅವರ ಹತ್ಯೆ ಮಾಡಿಸುತ್ತಿದ್ದರು.
ಇದನ್ನು ಮನಗೊಂಡು ಅಂದಿನ ಸರ್ಕಾರ ಪರಪ್ಪನ ಅಗ್ರಹಾರ ಕಾರಾಗೃಹದ ಒಳಗೆ ಮೊಬೈಲ್‌ಗಳು ಬಳಕೆಯಾಗದ ರೀತಿ ಜಾಮರ್‌ ಅಳವಡಿಸಿತು. ಆದರೂ ಸಹ ಅಲ್ಲಿಂದ ಇಲ್ಲಿಯ ತನಕ ಈ ಕಾರಾಗೃಹದಲ್ಲಿ ಮೊಬೈಲ್‌ಗಳ ಬಳಕೆ ನಿರಂತರವಾಗಿ ಆಗುತ್ತಿದೆ.

ಬೆಂಗಳೂರು ನಗರದ ಪೊಲೀಸರು ಪ್ರತಿಸಲ ಈ ಜೈಲು ಮೇಲೆ ದಾಳಿ ಮಾಡಿದಾಗಲೂ ಸಹ ಮೊಬೈಲ್‌ ಹಾಗೂ ಇನ್ನಿತರ ವಸ್ತುಗಳು ಪತ್ತೆಯಾಗುತ್ತಿವೆ. ಜಾಮರ್‌ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ ಜೈಲಿನೊಳಗೆ ಮೊಬೈಲ್‌ ಬಳಕೆಯಾಗುತ್ತಿರಲಿಲ್ಲ. ಆದರೆ ನಿರಂತರವಾಗಿ ಅವುಗಳ ಬಳಕೆ ಆಗುತ್ತಿದೆ. ಅಂದರೆ ಜಾಮರ್‌ ಅಳವಡಿಕೆ ಕೇವಲ ನಾಮಕವಸ್ಥೆಯೇ?

ಆದುದ್ದರಿಂದ ಕೆಲವು ಪ್ರತಿಷ್ಠಿತ ಖೈದಿ, ವಿಚಾರಣಾಧೀನ ಖೈದಿಗಳು ಮೊಬೈಲ್‌ ಬಳಕೆಗೆ ಕಾರಾಗೃಹದ ಆಡಳಿತವೇ ಅವಕಾಶ ಮಾಡಿಕೊಟ್ಟಿದೆಯೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.ಜೈಲುಗಳಲ್ಲಿ ಮೊಬೈಲ್‌ ಬಳಕೆ ಇಂದು-ನಿನ್ನೆಯಿಂದ ಆಗುತ್ತಿಲ್ಲ. ಹಲವಾರು ವರ್ಷಗಳಿಂದ ನಿರಂತರವಾಗಿ ಆಗುತ್ತಿದೆ. ಎಷ್ಟೋ ಸರ್ಕಾರಗಳು ಅಧಿಕಾರಕ್ಕೆ ಬಂದು ಹೋಗಿವೆ. ಬಹಳಷ್ಟು ಮಂದಿ ಗೃಹ ಸಚಿವರು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿ, ಪರಿಶೀಲಿಸಿ ಸಭೆ ನಡೆಸಿ ಆತಿಥ್ಯ ಸ್ವೀಕರಿಸಿ ಹೋಗಿದ್ದಾರೆ ಅಷ್ಟೇ. ಯಾವುದೇ ಸುಧಾರಣೆಯಾಗಿಲ್ಲ.

ಜೈಲಿನ ಒಳಗೆ ಯಾರನ್ನೂ ಸಹ ಬಿಡುವುದಿಲ್ಲ. ಪ್ರತಿಯೊಂದು ಹಂತದಲ್ಲೂ ಪರಿಶೀಲನೆ ಇರುತ್ತದೆ. ಇಷ್ಟೊಂದು ಕಠಿಣ ನಿಯಮಗಳು ಇದ್ದರೂ ಮೊಬೈಲ್‌, ಚಾರ್ಜರ್‌ ಹಾಗೂ ಇನ್ನಿತರ ವಸ್ತುಗಳು ಹೇಗೆ ಒಳಗೆ ಹೋಗುತ್ತಿವೆ ?

ಒಂದು ವೇಳೆ ಹೇಗೋ ಕಣ್ತಪ್ಪಿಸಿ ಒಳಗೆ ಹೋದರೆ ಅಲ್ಲಿ ಮೊಬೈಲ್‌ ಕೆಲಸಮಾಡುವಂತಿಲ್ಲ/ಬಳಕೆಯಾಗುವಂತಿಲ್ಲ. ಏಕೆಂದರೆ ಜಾಮರ್‌ ಹಾಕಿದ್ದಾರೆ. ಆದರೂ ಸಹ ಜೈಲಿನ ಒಳಗೆ ಮೊಬೈಲ್‌ಗಳ ಬಳಕೆ ನಿರಂತರವಾಗಿ ಆಗುತ್ತಿದೆ ಎಂದರೆ ಇದು ಸರ್ಕಾರ ಹಾಗೂ ಗೃಹ ಸಚಿವಾಲಯದ ಬೇಜವಬ್ದಾರಿತನ ಮತ್ತು ಲೋಪದೋಷ ಅಲ್ಲವೇ ?

ಇತ್ತೀಚೆಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರ ತವರು ಜಿಲ್ಲೆ ಕಲ್ಬುರ್ಗಿ ಕಾರಾಗೃಹದ ಮೇಲೆ ಪೊಲೀಸರು ದಾಳಿ ಮಾಡಿದಾಗ ಮೊಬೈಲ್‌ ಫೋನ್‌ ಪತ್ತೆಯಾಗಿದೆ.ಮಂಗಳೂರು ಕಾರಾಗೃಹದ ಮೇಲೆ ಪೊಲೀಸರು ದಾಳಿ ಮಾಡಿದಾಗಲೂ ಸಹ ಅಲ್ಲಿ 10 ಮೊಬೈಲ್‌ಗಳು ಕಂಡು ಬಂದಿದ್ದು, ಅವುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಪ್ರತಿಯೊಂದು ವಿಷಯದಲ್ಲೂ ಮಾತನಾಡುವ ಗೃಹ ಸಚಿವರೇ, ಮೊದಲು ತಮ ಖಾತೆ ವ್ಯಾಪ್ತಿಗೆ ಬರುವ ಕಾರಾಗೃಹದಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಿ, ಮೊಬೈಲ್‌ ಬಳಕೆಯಾಗದಂತೆ, ಮಾದಕ ವಸ್ತುಗಳು ಒಳಗೆ ಹೋಗದಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಇದುವರೆಗೂ ಬಂದು ಹೋದ ಗೃಹ ಸಚಿವರುಗಳ ಪಟ್ಟಿಯಲ್ಲಿ ನೀವೂ ಸಹ ಸೇರಿಕೊಳ್ಳುತ್ತೀರಿ.

RELATED ARTICLES
spot_img

Latest News