ಬೆಂಗಳೂರು : ಕನ್ನಡ ಚಿತ್ರರಂಗದ ಐದು ದಶಕಗಳಿಗೂ ಮೀರಿದ ಸುದೀರ್ಘ ಪಯಣ, ನೈಸರ್ಗಿಕ ಅಭಿನಯ, ಪಾತ್ರಗಳ ವೈವಿಧ್ಯ ಮತ್ತು ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಅಪಾರ ಕೊಡುಗೆ ಇವೆಲ್ಲಕ್ಕೂ ಇದೀಗ ದೇಶದ ಅತ್ಯುನ್ನತ ಚಲನಚಿತ್ರ ಗೌರವದ ಮುದ್ರೆ ಬಿದ್ದಿದೆ. ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ಕೇಂದ್ರ ಸರ್ಕಾರ ಬುಧವಾರ ಪ್ರಶಸ್ತಿ ಘೋಷಿಸಿದ್ದು, ಸೆಪ್ಟೆಂಬರ್ 22ರಂದು ಗುಜರಾತ್ನ ಕೆವಾಡಿಯಾದ ಏಕತಾ ನಗರದಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಂತ್ ನಾಗ್ ಅವರಿಗೆ ಪ್ರಶಸ್ತಿ ಪ್ರದಾನವಾಗಲಿದೆ.
ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ಕುಮಾರ್ ಅವರು 1995ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರಾಗಿದ್ದರು. ಇದೀಗ ಅನಂತ್ ನಾಗ್ ಈ ಗೌರವಕ್ಕೆ ಭಾಜನರಾಗುವ ಮೂಲಕ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಎರಡನೇ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಂಗಭೂಮಿಯಿಂದ ಬೆಳ್ಳಿತೆರೆಗೆ .
1948ರ ಸೆಪ್ಟೆಂಬರ್ 4ರಂದು ಜನಿಸಿದ ಅನಂತ್ ನಾಗ್ ಅವರ ಕಲಾ ಪಯಣ ಕೇವಲ ಚಲನಚಿತ್ರದಿಂದ ಆರಂಭವಾಗಲಿಲ್ಲ. ರಂಗಭೂಮಿಯೊಂದಿಗೆ ಬೆಸೆದುಕೊಂಡ ಕಲಾವಿದರಾಗಿ ತಮ್ಮ ಅಭಿನಯದ ನೆಲೆಯನ್ನು ಗಟ್ಟಿಗೊಳಿಸಿಕೊಂಡ ಅವರು, ಮುಂದೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ಅನಂತನಾಗ್ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಜನಿಸಿ, ತಮ್ಮ ಬಾಲ್ಯವನ್ನು ಕಾರವಾರ ಮತ್ತು ಮಂಗಳೂರಿನಲ್ಲಿ ಕಳೆದರು.
ರಂಗಭೂಮಿ ಅನುಭವ:
ಸಿನಿಮಾರಂಗ ಪ್ರವೇಶಿಸುವ ಮುನ್ನ ಅವರು ಖ್ಯಾತ ನಾಟಕಕಾರ ಬಿ.ವಿ. ಕಾರಂತ ಮತ್ತು ಇತರ ದಿಗ್ಗಜರ ಮಾರ್ಗದರ್ಶನದಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ರಂಗಭೂಮಿಯ ನಟನಾ ಅನುಭವವೇ ಅವರಿಗೆ ಬೆಳ್ಳಿತೆರೆಯಲ್ಲಿ ಸಹಜ ಅಭಿನಯ ನೀಡಲು ಬುನಾದಿಯಾಯಿತು.
1973ರಲ್ಲಿ ಪಿ.ವಿ. ನಂಜರಾಜ ಅರಸ್ ನಿರ್ದೇಶನದ ‘ಸಂಕಲ್ಪ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ನಂತರ ಶ್ಯಾಮ್ ಬೆನಗಲ್ ಅವರ ‘ಅಂಕುರ್’ ಮೂಲಕ ಹಿಂದಿ ಸಮಾನಾಂತರ ಚಿತ್ರರಂಗದಲ್ಲೂ ತಮ್ಮ ಅಭಿನಯ ಸಾಮರ್ಥ್ಯವನ್ನು ಪರಿಚಯಿಸಿದರು. ಅನಂತನಾಗ್ ಅವರು ಭಾರತೀಯ ಸಮಾಂತರ (Parallel Cinema) ಹಾಗೂ ವಾಣಿಜ್ಯ (Commercial Cinema) ಚಿತ್ರರಂಗಗಳೆರಡರಲ್ಲೂ ಸಮಾನವಾಗಿ ಮಿಂಚಿದ ಅಪರೂಪದ ನಟ. ಬಳಿಕ ‘ನಿಶಾಂತ್’, ‘ಮಂಥನ್’, ‘ಭೂಮಿಕಾ’, ‘ಕೊಂಡುರಾ’, ‘ಕಲಿಯುಗ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಪ್ರಾದೇಶಿಕ ಗಡಿಗಳನ್ನು ದಾಟಿದರು.
ಹಂಸಗೀತೆ’ಯಿಂದ ಅಭಿನಯದ ಹೊಸ ಅಧ್ಯಾಯ
1975ರ ‘ಹಂಸಗೀತೆ’ ಅನಂತ್ ನಾಗ್ ಅವರ ಸಿನಿಪಯಣದಲ್ಲಿ ಮಹತ್ವದ ತಿರುವು. ಭೈರವಿ ವೆಂಕಟಸುಬ್ಬಯ್ಯ ಪಾತ್ರದಲ್ಲಿ ಅವರು ನೀಡಿದ ಅಭಿನಯ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಚಿತ್ರವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡದ ಅತ್ಯುತ್ತಮ ಚಿತ್ರ ಗೌರವವನ್ನೂ ಪಡೆದುಕೊಂಡಿತು. ಅನಂತ್ ನಾಗ್ ಅವರ ವಿಶೇಷತೆ ಎಂದರೆ ಒಂದೇ ರೀತಿಯ ಪಾತ್ರಕ್ಕೆ ಸೀಮಿತರಾಗದೆ, ಪ್ರೇಮ, ಕೌಟುಂಬಿಕ, ಸಾಮಾಜಿಕ, ಹಾಸ್ಯ, ಗಂಭೀರ, ರಾಜಕೀಯ ಹಾಗೂ ಮನೋವೈಜ್ಞಾನಿಕ ಸ್ವರೂಪದ ಪಾತ್ರಗಳಿಗೂ ಜೀವ ತುಂಬಿದ್ದು.
‘ಬಯಲು ದಾರಿ’ಯಿಂದ ‘ನನ್ನ ನಿನ್ನ ಬಿಡಲಾರೆ’ವರೆಗೆ
1970ರ ದಶಕದಲ್ಲಿ ‘ಬಯಲು ದಾರಿ’, ‘ಕನ್ನೇಶ್ವರ ರಾಮ’, ‘ಚಂದನದ ಗೊಂಬೆ’, ‘ನನ್ನ ನಿನ್ನ ಬಿಡಲಾರೆ’ ಮುಂತಾದ ಚಿತ್ರಗಳ ಮೂಲಕ ಅನಂತ್ ನಾಗ್ ಜನಮನದಲ್ಲಿ ನೆಲೆಸಿದರು.
ವಿಶೇಷವಾಗಿ ಲಕ್ಷ್ಮೀ ಅವರೊಂದಿಗೆ ಅವರು ನಟಿಸಿದ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಜೋಡಿಯಾಗಿ ಗುರುತಿಸಿಕೊಂಡವು. ‘ನನ್ನ ನಿನ್ನ ಬಿಡಲಾರೆ’, ‘ಚಂದನದ ಗೊಂಬೆ’ ಸೇರಿದಂತೆ ಹಲವು ಚಿತ್ರಗಳು ಆ ಕಾಲದ ಪ್ರೇಕ್ಷಕರ ನೆನಪಿನಲ್ಲಿ ಉಳಿದಿವೆ.
ಸಹೋದರ ಶಂಕರ್ ನಾಗ್ ಜೊತೆಗಿನ ಅಪೂರ್ವ ಪಯಣ
ಅನಂತ್ ನಾಗ್ ಅವರ ಸಿನಿಜೀವನದಲ್ಲಿ ಸಹೋದರ ಶಂಕರ್ ನಾಗ್ ಅವರೊಂದಿಗೆ ನಡೆಸಿದ ಕಲಾ ಪಯಣವೂ ವಿಶೇಷ ಸ್ಥಾನ ಪಡೆದಿದೆ.‘ಮಿಂಚಿನ ಓಟ’, ‘ಜನ್ಮ ಜನ್ಮದ ಅನುಬಂಧ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ಆಕ್ಸಿಡೆಂಟ್’ ಮುಂತಾದ ಚಿತ್ರಗಳಲ್ಲಿ ಇಬ್ಬರು ಸಹೋದರರ ಕಲಾ ಸಹಯೋಗ ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಆಯಾಮ ನೀಡಿತು. 1987ರಲ್ಲಿ ಪ್ರಸಾರವಾದ *
ಮಾಲ್ಗುಡಿ ಡೇಸ್’ನಲ್ಲಿಯೂ ಅನಂತ್ ನಾಗ್ ಕಾಣಿಸಿಕೊಂಡರು.ಹಾಸ್ಯ ಪಾತ್ರಗಳಲ್ಲೂ ಅದೇ ಸಹಜತೆ
1990ರ ದಶಕದಲ್ಲಿ ಅನಂತ್ ನಾಗ್ ತಮ್ಮ ಅಭಿನಯದ ಮತ್ತೊಂದು ಮುಖವನ್ನು ತೆರೆದಿಟ್ಟರು.
‘ಗಣೇಶನ ಮದುವೆ’, ‘ಗೌರಿ ಗಣೇಶ’, ‘ಗೋಲ್ಮಾಲ್ ರಾಧಾಕೃಷ್ಣ’ ಮುಂತಾದ ಚಿತ್ರಗಳಲ್ಲಿನ ಅವರ ಹಾಸ್ಯಭರಿತ ಪಾತ್ರಗಳು ಪ್ರೇಕ್ಷಕರನ್ನು ರಂಜಿಸಿದವು.ಗಂಭೀರ ಪಾತ್ರಗಳನ್ನು ನಿರ್ವಹಿಸಬಲ್ಲ ನಟನೇ ಹಾಸ್ಯ ಪಾತ್ರಗಳಲ್ಲೂ ಅದೇ ಮಟ್ಟದ ಸಹಜತೆಯನ್ನು ತೋರಿಸಬಲ್ಲರು ಎಂಬುದಕ್ಕೆ ಈ ಚಿತ್ರಗಳು ಸಾಕ್ಷಿಯಾದವು.
ಪ್ರತಿದಶಕಕ್ಕೂ ಹೊಸ ಅನಂತ್ ನಾಗ್
1980ರ ದಶಕದಲ್ಲಿ ‘ಮಿಂಚಿನ ಓಟ’, ‘ಹೊಸ ನೀರು’, ‘ಅವಸ್ಥೆ’, ‘ಗಂಗವ್ವ ಗಂಗಾಮಾಯಿ’ ಮುಂತಾದ ಚಿತ್ರಗಳ ಮೂಲಕ ತಮ್ಮ ಅಭಿನಯದ ಗಂಭೀರತೆಯನ್ನು ತೋರಿಸಿದ ಅವರು, ನಂತರದ ವರ್ಷಗಳಲ್ಲಿ ಪೋಷಕ ಪಾತ್ರಗಳಿಗೂ ಅಷ್ಟೇ ಪರಿಣಾಮಕಾರಿ ಜೀವ ತುಂಬಿದರು. ‘ಮುಂಗಾರು ಮಳೆ’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ರಾಜಕುಮಾರ’, ‘ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡು’, ‘ಕೆಜಿಎಫ್: ಚಾಪ್ಟರ್ 1’, ‘ಕೆಜಿಎಫ್: ಚಾಪ್ಟರ್ 2’, ‘ಗಾಳಿಪಟ 2’ ಸೇರಿದಂತೆ ಹೊಸ ತಲೆಮಾರಿನ ಚಿತ್ರಗಳಲ್ಲೂ ಅವರು ತಮ್ಮದೇ ಆದ ಅಭಿನಯದ ಛಾಪು ಮೂಡಿಸಿದರು.
‘ಕೆಜಿಎಫ್’ನಿಂದ ಹೊಸ ತಲೆಮಾರಿಗೂ ಪರಿಚಯ
ಒಂದು ಕಾಲದಲ್ಲಿ ನಾಯಕನಾಗಿ ಜನಮನ ಗೆದ್ದಿದ್ದ ಅನಂತ್ ನಾಗ್, ನಂತರದ ತಲೆಮಾರಿನಲ್ಲಿ ಹಿರಿಯ ನಟನಾಗಿ, ಪೋಷಕ ನಟನಾಗಿ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದರು. ‘ಕೆಜಿಎಫ್’ ಸರಣಿಯ ಆನಂದ್ ಇಂಗಲಗಿ ಪಾತ್ರದ ಮೂಲಕ ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಹೊಸ ತಲೆಮಾರಿನ ಪ್ರೇಕ್ಷಕರ ಗಮನ ಸೆಳೆದರು. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ಯಂತಹ ಚಿತ್ರದಲ್ಲಿ ವಯಸ್ಸು, ನೆನಪು ಮತ್ತು ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಪ್ರತಿಬಿಂಬಿಸುವ ಪಾತ್ರದ ಮೂಲಕ ತಮ್ಮ ಅಭಿನಯದ ಮತ್ತೊಂದು ಮಗ್ಗುಲನ್ನು ತೋರಿಸಿದರು.
ಚಿತ್ರಗಳ ಸಂಖ್ಯೆಯಷ್ಟೇ ಅಲ್ಲ, ಪಾತ್ರಗಳ ವೈವಿಧ್ಯ :
ಅನಂತ್ ನಾಗ್ ಅವರ ವೃತ್ತಿಜೀವನದ ವ್ಯಾಪ್ತಿ ಅವರ ಚಿತ್ರಗಳ ಸಂಖ್ಯೆಯಿಂದ ಮಾತ್ರ ಅಳೆಯಲಾಗದು. ಐದು ದಶಕಗಳಿಗೂ ಮೀರಿದ ವೃತ್ತಿಜೀವನದಲ್ಲಿ ಅವರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದು, ಅದರಲ್ಲಿ 250ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಸೇರಿವೆ ಎಂದು ವರದಿಗಳು ಹೇಳುತ್ತವೆ. ಹಿಂದಿ, ತೆಲುಗು, ತಮಿಳು, ಮರಾಠಿ, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳ ಚಿತ್ರಗಳಲ್ಲಿಯೂ ಅವರು ಅಭಿನಯಿಸಿದ್ದಾರೆ.
ಪ್ರಶಸ್ತಿಗಳ ಸರಮಾಲೆಗೆ ಮತ್ತೊಂದು ಶಿಖರ
ಅನಂತ್ ನಾಗ್ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟ ಗೌರವ ಹಲವು ಬಾರಿ ಸಂದಿದೆ. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ಗೌರವಗಳು ಅವರ ಕಲಾಸೇವೆಯನ್ನು ಗುರುತಿಸಿವೆ. 2013ರಲ್ಲಿ ಅವರಿಗೆ ಡಾ. ವಿಷ್ಣುವರ್ಧನ್ ಪ್ರಶಸ್ತಿಯೂ ಲಭಿಸಿತ್ತು. 2025ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ನೀಡಿ ಗೌರವಿಸಿತ್ತು. ಇದೀಗ ಈ ಪ್ರಶಸ್ತಿಗಳ ಸಾಲಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರ್ಪಡೆಯಾಗಿದೆ.
‘ಅನಂತ’ವಾದ ಕಲಾ ಪಯಣಕ್ಕೆ ರಾಷ್ಟ್ರೀಯ ಮನ್ನಣೆ
ಅನಂತ್ ನಾಗ್ ಅವರ ಅಭಿನಯದ ವಿಶೇಷತೆ ಅವರ ಸಹಜತೆಯಲ್ಲಿ ಅಡಗಿದೆ. ಸಂಭಾಷಣೆ ಹೇಳುವುದಕ್ಕಿಂತ ಪಾತ್ರದೊಳಗೆ ಪ್ರವೇಶಿಸಿ ಅದನ್ನು ಬದುಕುವ ಶೈಲಿ ಅವರದ್ದು. ನಾಯಕ, ಪ್ರೇಮಿ, ತಂದೆ, ಪತಿ, ಹಾಸ್ಯನಟ, ಗಂಭೀರ ಪಾತ್ರಧಾರಿ, ಪೋಷಕ ನಟ—ಹೀಗೆ ಹಲವು ಮುಖಗಳಲ್ಲಿ ಅವರು ಪ್ರೇಕ್ಷಕರ ಮುಂದೆ ಕಾಣಿಸಿಕೊಂಡಿದ್ದಾರೆ. ರಂಗಭೂಮಿಯಿಂದ ಆರಂಭವಾದ ಪಯಣ ‘ಸಂಕಲ್ಪ’ದ ಮೂಲಕ ಬೆಳ್ಳಿತೆರೆಗೆ, ‘ಅಂಕುರ್’ ಮೂಲಕ ಸಮಾನಾಂತರ ಚಿತ್ರರಂಗಕ್ಕೆ, ‘ಹಂಸಗೀತೆ’ ಮೂಲಕ ಕಲಾತ್ಮಕ ಅಭಿನಯಕ್ಕೆ, ‘ಗಣೇಶನ ಮದುವೆ’ ಮೂಲಕ ಹಾಸ್ಯಕ್ಕೆ, ‘ಮುಂಗಾರು ಮಳೆ’ ಮತ್ತು ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಮೂಲಕ ಹೊಸ ತಲೆಮಾರಿಗೆ ಹಾಗೂ ‘ಕೆಜಿಎಫ್’ ಮೂಲಕ ರಾಷ್ಟ್ರಮಟ್ಟದ ಪ್ರೇಕ್ಷಕರಿಗೆ ವಿಸ್ತರಿಸಿದೆ.
ಕನ್ನಡ ಚಿತ್ರರಂಗದ ಈ ದೀರ್ಘ ಪಯಣಕ್ಕೆ ಈಗ ದೇಶದ ಅತ್ಯುನ್ನತ ಚಲನಚಿತ್ರ ಗೌರವದ ಮನ್ನಣೆ ದೊರೆತಿದೆ. ಡಾ. ರಾಜ್ಕುಮಾರ್ ಬಳಿಕ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆಯುತ್ತಿರುವ ಎರಡನೇ ಕನ್ನಡಿಗ ಎಂಬ ಹೆಗ್ಗಳಿಕೆಯೊಂದಿಗೆ ಅನಂತ್ ನಾಗ್ ಅವರ ‘ಅನಂತ’ ಕಲಾಯಾನ ಮತ್ತೊಂದು ಶಿಖರವನ್ನು ತಲುಪಿದೆ.
ಈಗಾಗಲೇ ಹಲವಾರು ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅನಂತನಾಗ್ ಅವರಿಗೆ ಈಗ ದೇಶದ ಅತ್ಯುನ್ನತ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ ಲಭಿಸಿರುವುದು ಸಮಸ್ತ ಕನ್ನಡಿಗರಿಗೆ ಹಾಗೂ ಕನ್ನಡ ಚಿತ್ರರಂಗಕ್ಕೆ ಸಂದ ಅತ್ಯುನ್ನತ ಗೌರವವಾಗಿದೆ.
ಐದು ದಶಕಗಳ ಕಾಲ ಕಲಾ ಸೇವೆಯನ್ನುಗೈದು, ನಟನೆ ಎಂದರೆ ಕೇವಲ ಹಾವಭಾವಗಳಲ್ಲ, ಅದು ಪಾತ್ರದೊಂದಿಗೆ ಜೀವಿಸುವುದು ಎಂದು ಸಾಬೀತುಪಡಿಸಿದ ಅನಂತನಾಗ್ ಅವರ ಈ ಸಾಧನೆ ಯುವ ಪೀಳಿಗೆಯ ಕಲಾವಿದರಿಗೆ ಸದಾ ಸ್ಫೂರ್ತಿದಾಯಕ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯು ಈ ಮೇರು ನಟನ ಕಿರೀಟಕ್ಕೆ ಮತ್ತೊಂದು ಹೊಂಗಿರಿದಂತೆ ಶೋಭಿಸುತ್ತಿದೆ.
