ಬೆಂಗಳೂರು, ಸೆ.1- ಮುಖ್ಯಮಂತ್ರಿಯಾದ ಬಳಿಕ ಡಿ.ಕೆ.ಶಿವಕುಮಾರ್ ಆಡಳಿತವನ್ನು ಜನರ ಬಳಿಗೆ ತೆಗೆದುಕೊಂಡು ಹೋಗಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಇದೇ ಮೊದಲ ಬಾರಿಗೆ ಕರಾವಳಿ ಪ್ರದೇಶಗಳಲ್ಲಿ ಸಚಿವ ಸಂಪುಟ ಸಭೆ ನಡೆಸಲು ಮುಂದಾಗಿದ್ದಾರೆ. ಸೆ. 18ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಲಾಗಿದೆ.
ಈ ಮೊದಲು ಬೆಳಗಾವಿ, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇತ್ತೀಚೆಗೆ ಸಚಿವ ಸಂಪುಟ ಸಭೆಗಳು ನಡೆದಿದ್ದವು. ಸಾಮಾನ್ಯವಾಗಿ ರಾಜಧಾನಿ ಬೆಂಗಳೂರಿನಲ್ಲೇ ಸಚಿವ ಸಂಪುಟ ಸಭೆಗಳು ನಡೆಯುವುದು ವಾಡಿಕೆ. ಪ್ರಾದೇಶಿಕವಾದ ಬೇಡಿಕೆಗಳು ಹಾಗೂ ಮಹತ್ವದ ಸಂದರ್ಭಗಳಲ್ಲಿ ಬೆಂಗಳೂರಿನ ಹೊರ ಭಾಗದಲ್ಲಿ ಸಚಿವ ಸಂಪುಟ ಸಭೆಗಳು ನಡೆಯಲಿವೆ. ಈಗ ಕರಾವಳಿ ಜಿಲ್ಲೆಗಳಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಸಂಪುಟ ಸಭೆ ನಡೆಸಲು ಚರ್ಚಿಸಲಾಗಿದೆ. ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸುವುದಾಗಿ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಯವರು ಸುಳಿವು ನೀಡಿದ್ದರು. ಈಗ ದಿನಾಂಕ ನಿಗದಿಯಾಗಿದೆ.
ಅಭಿವೃದ್ಧಿಯ ಚರ್ಚೆ:
ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಜಿಲ್ಲೆಗಳ ಅಭಿವೃದ್ಧಿ ಪ್ರಸ್ತಾವನೆಗಳಿಗೆ ವಿಶೇಷ ಆದ್ಯತೆ ನೀಡುವ ಸಾಧ್ಯತೆ ಇದೆ. ಸಭೆಗೆ ಮುನ್ನ ಕರಾವಳಿ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಗಳು ಮತ್ತು ಸಮಸ್ಯೆಗಳ ಕುರಿತು ಪ್ರಸ್ತಾವನೆಗಳನ್ನು ಸಿದ್ಧಪಡಿಸಿ, ಅಗತ್ಯ ಸಚಿವ ಸಂಪುಟ ಟಿಪ್ಪಣಿಗಳನ್ನು ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಎಲ್ಲ ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಭಿವೃದ್ಧಿ ವಿಚಾರಗಳು ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬರುವ ನಿರೀಕ್ಷೆಯಿದೆ. ವಿಶೇಷವಾಗಿ ಕರಾವಳಿ ಪ್ರವಾಸೋದ್ಯಮ, ಮೂಲಸೌಕರ್ಯ, ರಸ್ತೆ-ಸಂಪರ್ಕ, ಬಂದರು, ಕೈಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳ ಪ್ರಸ್ತಾವನೆಗಳಿಗೆ ಒತ್ತು ಸಿಗುವ ಸಾಧ್ಯತೆ ಇದೆ. ಇದರ ಜೊತೆಗೆ ಮಲ್ನಾಡ್-ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಮರಳು ಮತ್ತು ಲ್ಯಾಟರೈಟ್ ಗಣಿಗಾರಿಕೆಗೆ ಸಮಗ್ರ ನೀತಿ ಹಾಗೂ ತುಳು ಭಾಷೆಗೆ ಅಧಿಕೃತ ಭಾಷೆಯ ಸ್ಥಾನಮಾನ ಸೇರಿದಂತೆ ಹಲವು ದೀರ್ಘಕಾಲದ ಬೇಡಿಕೆಗಳ ಬಗ್ಗೆಯೂ ನಿರೀಕ್ಷೆ ಮೂಡಿದೆ.
ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಇದೇ ಮೊದಲ ಬಾರಿಗೆ ಎನ್ನಲಾಗಿದ್ದು, ಕರಾವಳಿ ಭಾಗದ ಅಭಿವೃದ್ಧಿಗೆ ಸರ್ಕಾರದ ಆಡಳಿತಾತಕ ಗಮನವನ್ನು ಹೆಚ್ಚಿಸುವ ಮಹತ್ವದ ಹೆಜ್ಜೆ ಎಂದು ನಿರೀಕ್ಷಿಸಲಾಗಿದೆ.
ರಾಜಕೀಯ ಲೆಕ್ಕಾಚಾರ:
ಮಲೆನಾಡು ಮತ್ತು ಕರಾವಳಿ ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಬಂಡವಾಳ ಹೂಡಿಕೆಗೆ ಉದ್ಯಮಿಗಳು ಹಿಂದೇಟು ಹಾಕುವುದು ಸಾಮಾನ್ಯವಾಗಿದೆ. ಪ್ರವಾಸೋದ್ಯಮ ಶಿಕ್ಷಣ ಸೇರಿದಂತೆ ಹಲವು ವಿಚಾರಗಳಲ್ಲಿ ಕರಾವಳಿ ಮುಂಚೂಣಿಯ ಜಿಲ್ಲೆಗಳಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಸಾಧ್ಯವಾಗಿಲ್ಲ. ಐಟಿ ಪಾರ್ಕ್ ಸ್ಥಾಪನೆಗೆ ಹಲವು ವರ್ಷಗಳ ಹಿಂದೆಯೇ ಘೋಷಣೆಯಾಗಿದೆ. ಆದರೆ ಇಲ್ಲಿಯವರೆಗೂ ಅಧಿಕೃತವಾಗಿ ಅದು ಸಾಧ್ಯವಾಗಿಲ್ಲ. ಕಾಂಗ್ರೆಸ್‌ಗೆ ಹಳೇ ಮೈಸೂರು ಭಾಗ ಒಂದಿಷ್ಟು ಬಲವಾಗಿದೆ. ಜೆಡಿಎಸ್‌ಗೆ ಪೈಪೋಟಿಯೊಂದಿಗೆ ತನ್ನ ನಿಗದಿತ ಸ್ಥಾನಗಳನ್ನು ಕಾಂಗ್ರೆಸ್ ಕಾಯ್ದಿರಿಸಿಕೊಂಡಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಯೊಂದಿಗಿನ ಪೈಪೋಟಿಯ ನಡುವೆಯೂ ಕನಿಷ್ಠ ಸ್ಥಾನಗಳನ್ನು ಉಳಿಸಿಕೊಂಡಿದೆ. ಆದರೆ ಕರಾವಳಿ ಮಲೆನಾಡು ಜಿಲ್ಲೆಯಲ್ಲಿ ಬಿಜೆಪಿ ಎದುರು ಕಾಂಗ್ರೆಸ್ ಬಲ ಕುಗ್ಗಿದೆ. ಉಡುಪಿಯ 5ಕ್ಕೆ 5 ಕ್ಷೇತ್ರಗಳಲ್ಲೂ ಬಿಜೆಪಿಯ ಅಭ್ಯರ್ಥಿಗಳೇ ಗೆದ್ದಿದ್ದಾರೆ.
ಶಿವಮೊಗ್ಗದ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೂರು ಕಡೆ ಗೆದ್ದಿದೆ. ಜೆಡಿಎಸ್-1, ಬಿಜೆಪಿ ಮೂರು ಸ್ಥಾನ ಗೆದ್ದಿದೆ. ಚಿಕ್ಕಮಗಳೂರಿನ 5ಕ್ಕೆ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ದಕ್ಷಿಣ ಕನ್ನಡದ 8 ಕ್ಷೇತ್ರಗಳಲ್ಲಿ 6 ಕಡೆ ಬಿಜೆಪಿ ಗೆದ್ದಿದ್ದು, ಎರಡರಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ಉತ್ತರ ಕನ್ನಡದ 6 ಕ್ಷೇತ್ರಗಳಲ್ಲಿ ಎರಡರಲ್ಲಿ ಕಾಂಗ್ರೆಸ್ ನಾಲ್ಕರಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ.
2028ರ ಚುನಾವಣೆಯಲ್ಲಿ ಕಾಂಗ್ರೆಸ್ ಮರಳಿ ಅಧಿಕಾರ ಹಿಡಿಯಲು ಹವಣಿಸುತ್ತಿದ್ದು, ಇದಕ್ಕಾಗಿ ಡಿ.ಕೆ.ಶಿವಕುಮಾರ್ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳ ಮೇಲೂ ಕಣ್ಣಿಟ್ಟಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮೂಲತಃ ಕರಾವಳಿಯವರು. ಹೀಗಾಗಿ ಆ ಪ್ರದೇಶವನ್ನು ಹೆಚ್ಚು ಬಲಗೊಳಿಸುವ ನಿಟ್ಟಿನಲ್ಲಿ ನೀಲ ನಕ್ಷೆಗಳು ಸಿದ್ಧಗೊಳ್ಳುತ್ತಿವೆ. ಈ ಕಾರಣಕ್ಕಾಗಿ ಮೊದಲ ಬಾರಿಗೆ ಕರಾವಳಿ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ನಡೆಸುವ ತಯಾರಿಗಳಾಗಿವೆ.
ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿ ಎನ್‌ಐಟಿಕೆ, ಮಂಗಳೂರು ವಿಶ್ವ ವಿದ್ಯಾಲಯ ಸೇರಿದಂತೆ ಕೆಲವು ಸ್ಥಳಗಳನ್ನು ಸಚಿವ ಸಂಪುಟ ಸಭೆಗಾಗಿ ಗುರುತಿಸಲಾಗಿದೆ.
