ಬೆಂಗಳೂರು, ಸೆ.1-ವಿಳಾಸ ಕೇಳುವ ನೆಪದಲ್ಲಿ ವೃದ್ಧೆಯರ ಸರ ಅಪಹರಣ ಮಾಡುತ್ತಿದ್ದ ಆಟೋ ಚಾಲಕನೊಬ್ಬನನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿ 2.5 ಲಕ್ಷ ರೂ. ಬೆಲೆಬಾಳುವ ಚಿನ್ನದ ಸರ, ಮೊಬೈಲ್ ಹಾಗೂ ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ. ಜೆ.ಪಿ.ನಗರದ 7 ನೇ ಹಂತದ ನಿವಾಸಿ ಸಂತೋಷ (32) ಬಂಧಿತ ಆಟೋ ಚಾಲಕ. ಸಂಜೆ ಮತ್ತು ಬೆಳಿಗ್ಗೆ ಆಟೋದಲ್ಲಿ ಸಂಚರಿಸುತ್ತಾ ವೃದ್ಧೆಯರು ಕಂಡ ತಕ್ಷಣ ಆಟೋ ನಿಲ್ಲಿಸಿ ವಿಳಾಸ ಕೇಳುವ ನೆಪದಲ್ಲಿ ಅವರ ಕೊರಳಲ್ಲಿದ್ದ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಆರೋಪಿಯು ತನ್ನ ಆಟೋರಿಕ್ಷಾದ ನೋಂದಣಿ ಸಂಖ್ಯೆ ಯಾರಿಗೂ ಗೊತ್ತಾಗಬಾರದು ಎಂದು ನೋಂದಣಿ ಫಲಕಕ್ಕೆ ಕಾಗದ ಅಂಟಿಸಿರುವುದು ಸಹ ಗೊತ್ತಾಗಿದೆ. ಕಳೆದ 29ರಂದು ಬೆಳಿಗ್ಗೆ ಲಿಂಗಧೀರನಹಳ್ಳಿಯ ಮನೆ ಮುಂದೆ ವೃದ್ಧೆಯೊಬ್ಬರು ನಿಂತಿದ್ದರು. ಆಗ ಆಟೋದಲ್ಲಿ ಬಂದ ಈ ಆರೋಪಿಯು ವಿಳಾಸ ಕೇಳುವ ನೆಪದಲ್ಲಿ ಅವರ ಕೊರಳಲ್ಲಿದ್ದ ಸರ ಕಿತ್ತುಕೊಂಡು ಆಟೋವನ್ನು ವೇಗವಾಗಿ ಚಾಲನೆ ಮಾಡಿಕೊಂಡು ಪರಾರಿಯಾಗಿದ್ದ.
ಈ ಬಗ್ಗೆ ಅವರು ಠಾಣೆಗೆ ದೂರು ನೀಡಿದ್ದರು. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಾಗ ಈತನ ಬಗ್ಗೆ ಸುಳಿವು ದೊರೆಯಿತು. ನಂತರ ಮನೆ ಬಳಿ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಈ ಸರ ಅಪಹರಣ ಬೆಳಕಿಗೆ ಬಂದಿದೆ. ಅಲ್ಲದೆ, ಮತ್ತೊಂದು ಸರ ಅಪಹರಣ ಮಾಡಲು ಯತ್ನಿಸುತ್ತಿರುವುದು ಸಹ ತಿಳಿದು ಬಂದಿದೆ. ಆರೋಪಿಯಿಂದ 29 ಗ್ರಾಂ ಚಿನ್ನದ ಸರ, ಒಂದು ಮೊಬೈಲ್ ಪೋನು ಹಾಗೂ ಕೃತ್ಯಕ್ಕೆ ಬಳಸಿದ ಆಟೋರಿಕ್ಷಾವನ್ನು ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಯಾಗಿದ್ದಾರೆ.
