ಮಂಗಳೂರು, ಸೆ.18- ನಮಗೆ ರಾಜಕೀಯಕ್ಕಿಂತ ಜನರ ಬದುಕು ಮುಖ್ಯ. ಯಾವುದೇ ಪಕ್ಷದ ನಾಯಕರು ಗಾಬರಿಯಾಗುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ಮಂಗಳೂರಿನ ಸರ್ಕಿಟ್ ಹೌಸ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆಯೇ ಹೊರತು, ಜನರ ಭಾವನೆಗಳ ಮೇಲೆ ರಾಜಕೀಯ ಮಾಡುವುದಿಲ್ಲ. ಎಲ್ಲರ ಚಿಂತನೆಯಂತೆ ನಮ್ಮ ಸರ್ಕಾರ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.
ಗಾಂಧೀಜಿ ಅವರು ಉಳಿದುಕೊಂಡಿದ್ದ ಮನೆಗೆ ತೆರಳಿ ಅಲ್ಲಿ ಉಪಾಹಾರ ಸೇವಿಸಿದೆ. ಮಂಗಳೂರು ಬನ್ಸ್, ದೋಸೆ ಸವಿದಿದ್ದೇನೆ. ಜಿಲ್ಲಾ ಸಚಿವರು ಎಲ್ಲಿಗೆ ಕರೆದುಕೊಂಡು ಹೋಗುತ್ತಾರೋ ಅಲ್ಲಿಗೆಲ್ಲಾ ಹೋಗುತ್ತೇನೆ ಎಂದು ಹೇಳಿದರು.
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸುತ್ತಿರುವುದರಿಂದ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲಿದೆ ಎಂಬ ವ್ಯಾಖ್ಯಾನಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ನಿನ್ನೆ ಮುಖ್ಯಮಂತ್ರಿ ಅವರ ಔತಣಕೂಟವನ್ನು ಬಿಜೆಪಿ ಬಹಿಷ್ಕರಿಸಿತ್ತು.
ಈ ಹಿನ್ನೆಲೆಯಲ್ಲಿ ಇಂದು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ಯಾರೂ ಆತಂಕ ಪಡುವ ಅಗತ್ಯವಿಲ್ಲ. ನಾವು ಭಾವನೆಗಳ ಮೇಲೆ ರಾಜಕಾರಣ ಮಾಡುವುದಿಲ್ಲ, ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾವನಾತ್ಮಕ ರಾಜಕಾರಣ ಹೆಚ್ಚಾಗಿದೆ. ಕೋಮು ಸಂಘರ್ಷಗಳೇ ಬಿಜೆಪಿಯ ಮತ ಬ್ಯಾಂಕ್ ಅನ್ನು ಭದ್ರಗೊಳಿಸಿವೆ ಎಂಬ ಅಭಿಪ್ರಾಯವೂ ಇದೆ.
