Homeರಾಷ್ಟ್ರೀಯಮಾನವ ಕಳ್ಳಸಾಗಣೆ ಪ್ರಕರಣದಲ್ಲಿ 8 ಬಾಂಗ್ಲಾ ಪ್ರಜೆಗಳಿಗೆ ಜೀವಾವಧಿ ಶಿಕ್ಷೆ

ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ 8 ಬಾಂಗ್ಲಾ ಪ್ರಜೆಗಳಿಗೆ ಜೀವಾವಧಿ ಶಿಕ್ಷೆ

ನವದೆಹಲಿ, ಸೆ.18 (ಪಿಟಿಐ)- ಬಾಂಗ್ಲಾದೇಶದ ಮಹಿಳೆಯರನ್ನು ಒಳಗೊಂಡ 2019ರ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಹೈದರಾಬಾದ್‌ನ ಎನ್‌ಐಎ ನ್ಯಾಯಾಲಯವು ಒಂಬತ್ತು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಶಿಕ್ಷೆಗೊಳಗಾದವರಲ್ಲಿ ಎಂಟು ಮಂದಿ ಬಾಂಗ್ಲಾದೇಶಿ ಪ್ರಜೆಗಳಾಗಿದ್ದು, ಒಬ್ಬರು ಭಾರತೀಯ ಪ್ರಜೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯಾಯಾಲಯವು ಶಿಕ್ಷೆಗೊಳಗಾದ ಪ್ರತಿಯೊಬ್ಬರಿಗೂ ಒಟ್ಟು ₹1.37 ಲಕ್ಷ ದಂಡ ವಿಧಿಸಿದ್ದು, ದಂಡ ಪಾವತಿಸಲು ವಿಫಲರಾದರೆ ಹೆಚ್ಚುವರಿಯಾಗಿ ಮೂರು ತಿಂಗಳ ಸರಳ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದೆ.

ಆರೋಪಿಗಳು ಆಕರ್ಷಕ ಉದ್ಯೋಗ ಮತ್ತು ಉತ್ತಮ ವೇತನದ ಭರವಸೆ ನೀಡಿ ಬಾಂಗ್ಲಾದೇಶದ ಮಹಿಳೆಯರನ್ನು ಭಾರತಕ್ಕೆ ಕರೆತಂದು, ಬಳಿಕ ಅವರನ್ನು ಬಲವಂತವಾಗಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸೆಪ್ಟೆಂಬರ್‌ 2019ರಲ್ಲಿ ತೆಲಂಗಾಣ ಪೊಲೀಸರು ನಡೆಸಿದ ಕಾರ್ಯಾಚರಣೆಯ ಬಳಿಕ ಹೈದರಾಬಾದ್‌ನಲ್ಲಿ ಮೂಲ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆಯ ವೇಳೆ ಜಲ್ಪಲ್ಲಿ ಗ್ರಾಮದಲ್ಲಿ ನಡೆಯುತ್ತಿದ್ದ ವೇಶ್ಯಾಗೃಹದಿಂದ ಮೂವರು ಬಾಂಗ್ಲಾದೇಶಿ ಮಹಿಳೆಯರನ್ನು ಹಾಗೂ ಹೈದರಾಬಾದ್‌ನ ಬಾಲಾಪುರದ ಮಹೀಮೂದ್‌ ಕಾಲೋನಿಯ ಮನೆಯೊಂದರಿಂದ ಮತ್ತೊಬ್ಬ ಮಹಿಳೆಯನ್ನು ರಕ್ಷಿಸಲಾಗಿತ್ತು.

ಬಳಿಕ ಎನ್‌ಐಎ ತನಿಖೆಯನ್ನು ಕೈಗೆತ್ತಿಕೊಂಡು, 2019ರ ಅಕ್ಟೋಬರ್‌ 12ರಂದು ಪ್ರಕರಣವನ್ನು ಮರುನೋಂದಾಯಿಸಿತು. ತನಿಖೆಯ ಅವಧಿಯಲ್ಲಿ 2019 ಮತ್ತು 2020ರಲ್ಲಿ ಪಶ್ಚಿಮ ಬಂಗಾಳ, ತೆಲಂಗಾಣ ಸೇರಿದಂತೆ ವಿವಿಧ ಸ್ಥಳಗಳಿಂದ ಆರೋಪಿಗಳನ್ನು ಬಂಧಿಸಲಾಗಿತ್ತು.

ರೂಹುಲ್‌ ಅಮೀನ್‌ ಧಾಲಿ, ಮೊಹಮ್ಮದ್‌ ಯೂಸುಫ್‌ ಖಾನ್‌ ಅಲಿಯಾಸ್‌ ಮೊಹಮ್ಮದ್‌ ಇಮ್ರಾನ್‌, ಬಿಥಿ ಬೇಗಂ ಅಲಿಯಾಸ್‌ ಖದೀಜಾ ಶೇಖ್‌, ಇಮಾಮುಲ್‌ ಗಾಜಿ ಅಲಿಯಾಸ್‌ ಮೊಹಮ್ಮದ್‌ ರಾಣಾ ಹುಸೇನ್‌, ಮೊಹಮ್ಮದ್‌ ಅಲ್‌ ಮಾಮುನ್‌, ಸೋಜಿಬ್‌ ಶೇಖ್‌, ಸುರೇಶ್‌ ಕುಮಾರ್‌ ದಾಸ್‌ ಅಲಿಯಾಸ್‌ ಸಾಗರ್‌, ಮೊಹಮ್ಮದ್‌ ಅಬ್ದುಲ್ಲಾ ಮುನ್ಶಿ ಅಲಿಯಾಸ್‌ ಅಬ್ದುಲ್‌ ಸರ್ಕಾರ್‌ ಮತ್ತು ಮೊಹಮ್ಮದ್‌ ಅಯೂಬ್‌ ಶೇಖ್‌ ವಿರುದ್ಧ ಭಾರತೀಯ ದಂಡ ಸಂಹಿತೆ, ವಿದೇಶಿಯರ ಕಾಯ್ದೆ-1946 ಮತ್ತು ಅನೈತಿಕ ಸಾಗಣೆ (ತಡೆಗಟ್ಟುವಿಕೆ) ಕಾಯ್ದೆ-1956ರ ವಿವಿಧ ನಿಬಂಧನೆಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿತ್ತು ಎಂದು ಎನ್‌ಐಎ ಹೇಳಿದೆ.

RELATED ARTICLES
spot_img

Latest News