Homeರಾಷ್ಟ್ರೀಯಜಾರ್ಖಂಡ್‌: ಮನೆಯೊಳಗೆ ನುಗ್ಗಿ ವೃದ್ಧ ದಂಪತಿಗೆ ಗುಂಡಿಕ್ಕಿ ಹತ್ಯೆ

ಜಾರ್ಖಂಡ್‌: ಮನೆಯೊಳಗೆ ನುಗ್ಗಿ ವೃದ್ಧ ದಂಪತಿಗೆ ಗುಂಡಿಕ್ಕಿ ಹತ್ಯೆ

ಬೊಕಾರೊ, ಸೆ.18- ಅಪರಿಚಿತ ದುಷ್ಕರ್ಮಿಗಳು ಮನೆಯೊಳಗೆ ನುಗ್ಗಿ ವೃದ್ಧ ದಂಪತಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ನಡೆದಿದೆ.ದಂಪತಿಯ ಪುತ್ರನ ಮೇಲೂ ಗುಂಡಿನ ದಾಳಿ ನಡೆಸಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ನರೇಶ್‌ ಸಿನ್ಹಾ (60) ಮತ್ತು ರೇಣು ಸಿನ್ಹಾ ಎಂದು ಗುರುತಿಸಲಾಗಿದೆ. ಅವರ 30 ವರ್ಷದ ಪುತ್ರ ರೋಹಿತ್‌ ಸಿನ್ಹಾ ಬೊಕಾರೊ ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಂದ್ರಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಡಿವಿಸಿ ವಸತಿ ಕಾಲನಿಯ ಪಶ್ಚಿಮ ಪಲ್ಲಿಯಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ದಂಪತಿಯ ಕ್ವಾರ್ಟರ್ಸ್‌ನ ಬಾಗಿಲು ತಟ್ಟಿದ್ದು, ಬಾಗಿಲು ತೆರೆದ ಕೂಡಲೇ ನರೇಶ್‌ ಮತ್ತು ರೇಣು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟಿನಿಂದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಪುತ್ರ ರೋಹಿತ್‌ ಮೇಲೂ ಗುಂಡು ಹಾರಿಸಲಾಗಿದ್ದು, ಅವರಿಗೆ ಮೂರು ಗುಂಡುಗಳು ತಗುಲಿವೆ.

ಘಟನೆ ನಡೆದ ಸಂದರ್ಭದಲ್ಲಿ ಪ್ರದೇಶದಲ್ಲಿ ಗುಡುಗು, ಸಿಡಿಲಿನೊಂದಿಗೆ ಭಾರಿ ಮಳೆಯಾಗುತ್ತಿದ್ದ ಕಾರಣ ಗುಂಡಿನ ಸದ್ದು ನೆರೆಹೊರೆಯವರಿಗೆ ಕೇಳಿಸಿರಲಿಲ್ಲ. ಇಬ್ಬರು ಅಥವಾ ಮೂವರು ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಚಂದ್ರಪುರ ಠಾಣಾಧಿಕಾರಿ ವಿಕ್ರಮ್‌ ಕುಮಾರ್‌ ಬಾದಲ್‌ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಹಿಂದಿನ ದ್ವೇಷವೇ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕುಟುಂಬದ ಸಂಬಂಧಿಕರ ಪಾತ್ರವೂ ಇರಬಹುದಾದ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಬರ್ಮೊ ಉಪವಿಭಾಗದ ಪೊಲೀಸ್‌ ಅಧಿಕಾರಿ ರವೀಂದ್ರ ಕುಮಾರ್‌ ತಿಳಿಸಿದ್ದಾರೆ.

ಗಾಯಗೊಂಡ ರೋಹಿತ್‌ಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಕುಟುಂಬ ಮೂಲತಃ ಬಿಹಾರದ ಗಯಾ ಜಿಲ್ಲೆಯವರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಹಾಗೂ ಶ್ವಾನದಳದ ತಂಡಗಳನ್ನು ನಿಯೋಜಿಸಲಾಗಿದೆ. ದಾಳಿಕೋರರು ಕನಿಷ್ಠ 12 ಸುತ್ತು ಗುಂಡು ಹಾರಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳ ಬಂಧನಕ್ಕಾಗಿ ಹಲವು ಸ್ಥಳಗಳಲ್ಲಿ ಪೊಲೀಸರು ದಾಳಿ ನಡೆಸುತ್ತಿದ್ದು, ಹತ್ಯೆಯ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

RELATED ARTICLES
spot_img

Latest News