ಬೆಂಗಳೂರು, ಸೆ.3- ನಗರದ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಜಿಬಿಎ ವ್ಯಾಪ್ತಿಯಲ್ಲಿರುವ ಹೆರಿಗೆ ಆಸ್ಪತ್ರೆಗಳು, ರೆಫರಲ್ ಕೇಂದ್ರಗಳು ಹಾಗೂ ಜನರಲ್ ಆಸ್ಪತ್ರೆಗಳನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುಪರ್ದಿಗೆ ಹಸ್ತಾಂತರಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆದಿದೆ. ಆರೋಗ್ಯ ಸೇವೆಯನ್ನು ಒಂದೇ ವ್ಯವಸ್ಥೆಯಡಿ ತಂದು, ಆಸ್ಪತ್ರೆಗಳ ನಿರ್ವಹಣೆ, ವೈದ್ಯರು ಮತ್ತು ಸಿಬ್ಬಂದಿ ಕೊರತೆ ಹಾಗೂ ಚಿಕಿತ್ಸೆಯಲ್ಲಿ ಉಂಟಾಗುತ್ತಿರುವ ಸಮನ್ವಯದ ಕೊರತೆಯನ್ನು ನಿವಾರಿಸುವ ಉದ್ದೇಶದಿಂದ ಈ ಪ್ರಸ್ತಾವನೆ ಮುಂದಿಡಲಾಗಿದೆ.
38 ಆಸ್ಪತ್ರೆಗಳ ಹಸ್ತಾಂತರ: ಜಿಬಿಎ ವ್ಯಾಪ್ತಿಯಲ್ಲಿ 28 ಹೆರಿಗೆ ಆಸ್ಪತ್ರೆಗಳು, 6 ರೆಫರಲ್ ಆಸ್ಪತ್ರೆಗಳು ಹಾಗೂ 2 ಜನರಲ್ ಆಸ್ಪತ್ರೆಗಳಿವೆ. ಇದರ ಜೊತೆಗೆ ಹೊಸದಾಗಿ ನಿರ್ಮಾಣವಾಗುತ್ತಿರುವ ಸುಮಾರು 6 ಆಸ್ಪತ್ರೆಗಳೂ ಇವೆ. ಇವುಗಳ ನಿರ್ವಹಣೆಯನ್ನು ರಾಜ್ಯ ಆರೋಗ್ಯ ಇಲಾಖೆಗೆ ವಹಿಸುವ ಕುರಿತು ಚರ್ಚೆ ನಡೆದಿದೆ. ಆದರೆ ಆಸ್ಪತ್ರೆಗಳಿಗೆ ಸಂಬಂಧಿಸಿದ ಜಾಗ ಮತ್ತು ಕಟ್ಟಡಗಳ ಮಾಲೀಕತ್ವವನ್ನು ಹಸ್ತಾಂತರಿಸುವ ಪ್ರಶ್ನೆ ಇಲ್ಲ. ಸಾವಿರಾರು ಕೋಟಿ ರೂ. ಮೌಲ್ಯದ ಭೂಮಿ ಹೊಂದಿರುವ ಆಸ್ಪತ್ರೆಗಳ ನಿರ್ವಹಣೆ ಮತ್ತು ಆರೋಗ್ಯ ಸೇವೆಯ ಜವಾಬ್ದಾರಿಯನ್ನು ಮಾತ್ರ ಆರೋಗ್ಯ ಇಲಾಖೆಗೆ ವಹಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯರಿಲ್ಲದೆ ಬಾಗಿಲು ಮುಚ್ಚಿದ ಆಸ್ಪತ್ರೆಗಳು:ಜಿಬಿಎ ರಚನೆಯಾಗಿ ಐದು ನಗರ ಪಾಲಿಕೆಗಳಾಗಿ ಆಡಳಿತ ವ್ಯವಸ್ಥೆ ಬದಲಾದ ಬಳಿಕ ಆರೋಗ್ಯ ಇಲಾಖೆಯ ಮೇಲೂ ಅದರ ಪರಿಣಾಮ ಬೀರಿದೆ. ಕೆಲವು ಹೆರಿಗೆ ಆಸ್ಪತ್ರೆಗಳು ವೈದ್ಯರು ಹಾಗೂ ಅಗತ್ಯ ಸಿಬ್ಬಂದಿ ಇಲ್ಲದೆ ಕಾರ್ಯನಿರ್ವಹಿಸಲು ಸಾಧ್ಯವಾಗದೆ ತಾತ್ಕಾಲಿಕವಾಗಿ ಬಂದ್ ಆಗಿವೆ. ಇನ್ನೂ ಕೆಲವು ಆಸ್ಪತ್ರೆಗಳು ಕಾಮಗಾರಿ ನೆಪದಲ್ಲಿ ಸೇವೆ ಸ್ಥಗಿತಗೊಳಿಸಿರುವ ಆರೋಪಗಳಿವೆ.
ಕೆಂಪೇಗೌಡನಗರ, ಚಾಮರಾಜಪೇಟೆ, ಶಾಂತಿನಗರ, ಅಡುಗೋಡಿ, ಯಡಿಯೂರು, ಯಶವಂತಪುರ ಸೇರಿದಂತೆ ಸುಮಾರು 10 ಹೆರಿಗೆ ಆಸ್ಪತ್ರೆಗಳು ತಾತ್ಕಾಲಿಕವಾಗಿ ಬಂದ್ ಆಗಿರುವ ಬಗ್ಗೆ ವರದಿಗಳಿವೆ. ಆಸ್ಪತ್ರೆ ಸಿಬ್ಬಂದಿಗೆ ವೇತನ ಪಾವತಿ ಸೇರಿದಂತೆ ಹಲವು ಆಡಳಿತಾತ್ಮಕ ಸಮಸ್ಯೆಗಳು ಎದುರಾಗಿರುವುದೂ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ. ಇದೇ ವೇಳೆ ಕೆ.ಆರ್. ಪುರ, ಗೋವಿಂದರಾಜನಗರ ಹಾಗೂ ಯಶವಂತಪುರದಲ್ಲಿ ಹೊಸ ಆಸ್ಪತ್ರೆ ಕಟ್ಟಡಗಳನ್ನು ನಿರ್ಮಿಸಿದ್ದರೂ, ಅಗತ್ಯ ವೈದ್ಯಕೀಯ ಸಿಬ್ಬಂದಿ ನೇಮಕವಾಗದ ಕಾರಣ ಅವುಗಳನ್ನು ಸಮರ್ಪಕವಾಗಿ ಕಾರ್ಯಾರಂಭಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಕಡೆ ಆಸ್ಪತ್ರೆ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಸೇವೆ ಸ್ಥಗಿತಗೊಂಡಿರುವ ಉದಾಹರಣೆಗಳೂ ಅಧಿಕಾರಿಗಳ ಗಮನಕ್ಕೆ ಬಂದಿವೆ.
ರೋಗಿಯ ಪೂರ್ವಾಪರವೇ ಗೊತ್ತಿಲ್ಲ!:ಪ್ರಸ್ತುತ ಜಿಬಿಎ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳ ಅಡಿಯಲ್ಲಿ ವಿವಿಧ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರತ್ಯೇಕ ಇಲಾಖೆಗಳ ಅಡಿಯಲ್ಲಿ ಸೇವೆ ನಡೆಯುತ್ತಿರುವುದರಿಂದ ಪರಸ್ಪರ ಸಮನ್ವಯದ ಕೊರತೆ ಎದುರಾಗುತ್ತಿದೆ.ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದ ರೋಗಿ ಹೆಚ್ಚಿನ ಚಿಕಿತ್ಸೆಗಾಗಿ ಆರೋಗ್ಯ ಇಲಾಖೆ ಅಥವಾ ವೈದ್ಯಕೀಯ ಶಿಕ್ಷಣ ಇಲಾಖೆಯ ಆಸ್ಪತ್ರೆಗೆ ತೆರಳಿದಾಗ, ಹಿಂದಿನ ಚಿಕಿತ್ಸೆಯ ವಿವರ, ರೋಗಿಯ ಆರೋಗ್ಯದ ಪೂರ್ವಾಪರ ಹಾಗೂ ಈಗಾಗಲೇ ನೀಡಿರುವ ಔಷಧಿಗಳ ಮಾಹಿತಿ ಅಲ್ಲಿನ ವೈದ್ಯರಿಗೆ ಸಮರ್ಪಕವಾಗಿ ಲಭ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ತೆರಳುವಂತಾಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.
ಪಿಎಚ್‌ಸಿ, ನಮ್ಮ ಕ್ಲಿನಿಕ್ ಮಾತ್ರ ಜಿಬಿಎ ಬಳಿ?:ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ನಮ್ಮ ಕ್ಲಿನಿಕ್‌ಗಳಂತಹ ಮೂಲಭೂತ ಆರೋಗ್ಯ ಸೇವೆಗಳನ್ನು ಜಿಬಿಎ ವ್ಯಾಪ್ತಿಯಲ್ಲೇ ಉಳಿಸಿಕೊಂಡು, ಹೆರಿಗೆ, ರೆಫರಲ್ ಮತ್ತು ಜನರಲ್ ಆಸ್ಪತ್ರೆಗಳ ನಿರ್ವಹಣೆಯನ್ನು ರಾಜ್ಯ ಆರೋಗ್ಯ ಇಲಾಖೆಗೆ ವಹಿಸುವ ಪ್ರಸ್ತಾವನೆ ಚರ್ಚೆಯಲ್ಲಿದೆ.ಕಳೆದ ಐದಾರು ತಿಂಗಳಿಂದ ಈ ಕುರಿತು ಪ್ರಾಥಮಿಕ ಹಂತದ ಸಿದ್ಧತೆಗಳು ನಡೆಯುತ್ತಿದ್ದು, ಹೊಸ ವ್ಯವಸ್ಥೆಯ ರೂಪುರೇಷೆಗಳನ್ನೂ ಸಿದ್ಧಪಡಿಸಲಾಗಿದೆ ಎನ್ನಲಾಗಿದೆ.ಅಧಿಕಾರಿಗಳ ಸಭೆಗೆ ಸೂಚನೆಆಸ್ಪತ್ರೆಗಳನ್ನು ಒಂದೇ ಆರೋಗ್ಯ ವ್ಯವಸ್ಥೆಯಡಿ ತರುವ ಮೂಲಕ ಸಾರ್ವಜನಿಕರಿಗೆ ಉತ್ತಮ ಹಾಗೂ ನಿರಂತರ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ.
ಈ ಹಿನ್ನೆಲೆಯಲ್ಲಿ ಜಿಬಿಎ ಆರೋಗ್ಯ ಇಲಾಖೆಯ ಅಧಿಕಾರಿಗಳು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಂಬಂಧಪಟ್ಟ ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಹಸ್ತಾಂತರದ ಸಾಧಕ-ಬಾಧಕಗಳು ಹಾಗೂ ಆಡಳಿತಾತ್ಮಕ ರೂಪುರೇಷೆಗಳನ್ನು ಅಂತಿಮಗೊಳಿಸುವಂತೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮುಂದಿನ ದಿನಗಳಲ್ಲಿ ನೂತನ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೆ ತರುವ ಸಾಧ್ಯತೆ ಇದೆ.
