ಬೇಲೂರು, ಸೆ.4- ಸಾಮಾನ್ಯವಾಗಿ ಕಾಡಾನೆಗಳು ರಸ್ತೆ ದಾಟುವಾಗ ವಾಹನ ಸವಾರರು ದೂರದಲ್ಲಿ ನಿಂತು ಆನೆಗೆ ದಾರಿ ಮಾಡಿಕೊಡುವುದು ಸಾಮಾನ್ಯ. ಆದರೆ, ಇಲ್ಲೊಂದು ಒಂಟಿ ಕಾಡಾನೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟು ಬಳಿಕ ರಸ್ತೆ ದಾಟಿದ ಅಪರೂಪದ ದೃಶ್ಯ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕೋಗೋಡು ಗ್ರಾಮದ ಬೇಡಿ ಎಸ್ಟೇಟ್‌ನಲ್ಲಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬೇಡಿ ಎಸ್ಟೇಟ್‌ನಿಂದ ಮತ್ತೊಂದು ತೋಟಕ್ಕೆ ತೆರಳಲು ಒಂಟಿ ಕಾಡಾನೆ ರಸ್ತೆ ದಾಟುತ್ತಿದ್ದ ವೇಳೆ ಏಕಾಏಕಿ ವಾಹನಗಳು ಬಂದಿವೆ. ವಾಹನಗಳನ್ನು ಗಮನಿಸಿದ ಆನೆ ಕೂಡಲೇ ಮುಂದೆ ಸಾಗುವುದನ್ನು ನಿಲ್ಲಿಸಿ, ಕೆಲ ಹೆಜ್ಜೆ ಹಿಂದೆ ಸರಿದಿದೆ.
ಕೆಲ ಕ್ಷಣ ರಸ್ತೆ ಬದಿಯಲ್ಲಿ ನಿಂತಿದ್ದ ಆನೆ, ವಾಹನಗಳು ಸಂಚರಿಸಿದ ಬಳಿಕ ನಿಧಾನವಾಗಿ ರಸ್ತೆ ದಾಟಿ ತನ್ನ ಪಾಡಿಗೆ ತೋಟದೊಳಗೆ ತೆರಳಿದೆ.
ಸಾಮಾನ್ಯವಾಗಿ ಕಾಡಾನೆಗಳು ರಸ್ತೆ ದಾಟುವ ಸಂದರ್ಭದಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ದೂರದಲ್ಲಿ ನಿಂತು ಆನೆಗೆ ದಾರಿ ಮಾಡಿಕೊಡುತ್ತಾರೆ. ಆದರೆ, ಈ ಘಟನೆಯಲ್ಲಿ ಕಾಡಾನೆಯೇ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಬಳಿಕ ರಸ್ತೆ ದಾಟಿರುವುದು ವಿಶೇಷವಾಗಿದೆ.
ಈ ಅಪರೂಪದ ದೃಶ್ಯ ಬೇಡಿ ಎಸ್ಟೇಟ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಆನೆಗೂ ವಾಹನಗಳ ಸಂಚಾರದ ಅರಿವಿದೆಯೇ?’ ಎಂಬ ಕುತೂಹಲ ಮೂಡಿಸಿರುವ ಈ ದೃಶ್ಯ ಸಾರ್ವಜನಿಕರು ಹಾಗೂ ನೆಟ್ಟಿಗರ ಗಮನ ಸೆಳೆದಿದೆ.
