ಬೆಂಗಳೂರು, ಸೆ.20 – ಕಾವೇರಿ ನೀರು ಸರಬರಾಜು ವ್ಯವಸ್ಥೆಯ 1ನೇ ಹಂತದ ಜಲರೇಚಕ ಯಂತ್ರಾಗಾರದಲ್ಲಿ ತುರ್ತು ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸೆ.22ರಂದು ನಗರದ ಹಲವು ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಕಾವೇರಿ ನೀರು ಸರಬರಾಜು ಯೋಜನೆಯ 1ನೇ ಹಂತದ ಜಲರೇಚಕ ಯಂತ್ರಾಗಾರದಲ್ಲಿರುವ ಪಂಪ್ ಸಂಖ್ಯೆ-4ರ ಹಾಗೂ ದುರಸ್ತಿ ಕಾಮಗಾರಿ ಕೈಗೊಳ್ಳಲು ಬೆಂಗಳೂರು ಜಲಮಂಡಳಿ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಸೆ.22ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಒಟ್ಟು ಆರು ಗಂಟೆಗಳ ಕಾಲ ಕಾವೇರಿ ನೀರು ಸರಬರಾಜು ಯೋಜನೆಯ 1ನೇ ಹಂತದ ಜಲರೇಚಕ ಯಂತ್ರಾಗಾರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು.
ದುರಸ್ತಿ ಕಾಮಗಾರಿಯ ಅವಧಿಯಲ್ಲಿ ನೀರು ಪಂಪಿಂಗ್ ವ್ಯವಸ್ಥೆ ಸ್ಥಗಿತಗೊಳ್ಳುವುದರಿಂದ ಸಂಬಂಧಪಟ್ಟ ಪ್ರದೇಶಗಳಿಗೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಕಾಮಗಾರಿ ಪೂರ್ಣಗೊಂಡ ಬಳಿಕ ನೀರು ಸರಬರಾಜು ವ್ಯವಸ್ಥೆಯನ್ನು ಹಂತ ಹಂತವಾಗಿ ಪುನರಾರಂಭಿಸಲಾಗುವುದು ಎಂದು ಜಲಮಂಡಳಿ ತಿಳಿಸಿದೆ.
ನೀರಿನ ವ್ಯತ್ಯಯದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಪ್ರಮಾಣದ ನೀರನ್ನು ಮುಂಚಿತವಾಗಿಯೇ ಸಂಗ್ರಹಿಸಿಟ್ಟುಕೊಳ್ಳುವಂತೆ ಬೆಂಗಳೂರು ಜಲಮಂಡಳಿ ನಾಗರಿಕರಿಗೆ ಮನವಿ ಮಾಡಿದೆ.
ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಪ್ರದೇಶಗಳ ವಿವರಗಳನ್ನು ಜಲಮಂಡಳಿ ಪ್ರಕಟಿಸಿರುವ ಮಾಹಿತಿಯೊಂದಿಗೆ ಲಗತ್ತಿಸಲಾಗಿದೆ. ದುರಸ್ತಿ ಕಾಮಗಾರಿ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸುವಂತೆ ಜಲಮಂಡಳಿ ಮನವಿ ಮಾಡಿದೆ.
