Homeರಾಜ್ಯಕೆಪಿಎಸ್‌‍ಸಿ ಅಕ್ರಮದ ಸ್ಫೋಟಕ ಮಾಹಿತಿ ಬಯಲು : 23 ವಿಮಾನ ಟಿಕೆಟ್‌ಗೆ 11 ಲಕ್ಷ

ಕೆಪಿಎಸ್‌‍ಸಿ ಅಕ್ರಮದ ಸ್ಫೋಟಕ ಮಾಹಿತಿ ಬಯಲು : 23 ವಿಮಾನ ಟಿಕೆಟ್‌ಗೆ 11 ಲಕ್ಷ

ಬೆಂಗಳೂರು,ಸೆ.20- ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌‍ಸಿ) 400 ಪಶುವೈದ್ಯಾಧಿಕಾರಿ ಹುದ್ದೆಗಳ ಅಕ್ರಮ ನೇಮಕಾತಿಗೆ ಸಂಬಂಧಿಸಿದ ಹಣಕ್ಕಾಗಿ ಉದ್ಯೋಗ ಹಗರಣದ ತನಿಖೆ ದಿನದಿಂದ ದಿನಕ್ಕೆ ಮತ್ತಷ್ಟು ವಿಸ್ತಾರವಾಗುತ್ತಿದೆ.

ಅಮಾನತುಗೊಂಡಿರುವ ಐಎಎಸ್‌‍ ಅಧಿಕಾರಿ ಹಾಗೂ ಕೆಪಿಎಸ್‌‍ಸಿ ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರಕುಮಾರ್‌ ಗಂಗ್ವಾರ್‌ ಮತ್ತು ಮಧ್ಯವರ್ತಿ ಬಸವರಾಜ ಕನ್ನಾಳೆ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವ ಬೆನ್ನಲ್ಲೇ, ಸಿಐಡಿ ತನಿಖೆಯಲ್ಲಿ ಹಣದ ವಹಿವಾಟು, ವಿಮಾನ ಪ್ರಯಾಣ ಮತ್ತು ದುಬಾರಿ ಆಭರಣ ಖರೀದಿಗೆ ಸಂಬಂಧಿಸಿದ ಹೊಸ ಮಾಹಿತಿಗಳು ನ್ಯಾಯಾಲಯದ ಮುಂದೆ ಬಂದಿವೆ.

ಗಂಗ್ವಾರ್‌ ಹಾಗೂ ಅವರ ಪರಿಚಿತ ಮಹಿಳೆಯೊಬ್ಬರು ಕೈಗೊಂಡಿದ್ದ 23 ವಿಮಾನ ಪ್ರಯಾಣಗಳು ಮತ್ತು ಇತರ ವೆಚ್ಚಗಳಿಗೆ ಸುಮಾರು 11 ಲಕ್ಷವನ್ನು ಬಸವರಾಜ ಕನ್ನಾಳೆ ಪಾವತಿಸಿದ್ದಾರೆ ಎಂದು ಸಿಐಡಿ ನ್ಯಾಯಾಲಯಕ್ಕೆ ತಿಳಿಸಿದೆ. ಐಎಎಸ್‌‍ ಅಧಿಕಾರಿ ಗಂಗ್ವಾರ್‌ ಹಾಗೂ ಅವರ ಸ್ನೇಹಿತೆ ಜೈಸ್ವಾಲ್‌ ಮಾಡಿದ್ದ 23 ವಿಮಾನ ಪ್ರಯಾಣಗಳ ಒಟ್ಟು 11 ಲಕ್ಷ ರೂ. ವೆಚ್ಚವನ್ನು ಕನ್ನಾಳೆಗೆ ಸೇರಿದ ಬೀದರ್‌ನ ಭಗವತಿ ಎಂಟರ್‌ಪ್ರೈಸಸ್‌‍ ಮೂಲಕ ಪಾವತಿಸಲಾಗಿದೆ.

54 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಉಡುಗೊರೆ:
2024ರ ಮಾರ್ಚ್‌ ಮತ್ತು ಜೂನ್‌ ಅವಧಿಯಲ್ಲಿ ಗಂಗ್ವಾರ್‌ ಅವರು ತಮ ಮಹಿಳಾ ಸ್ನೇಹಿತೆಗೆ ಭೀಮಾ ಜ್ಯುವೆಲರ್ಸ್‌ನಿಂದ ಸುಮಾರು 54 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಲ್ಲಿ 2.9 ಲಕ್ಷ ರೂ.ಗಳನ್ನು ನಗದು/ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿಸಲಾಗಿದ್ದರೆ, ಉಳಿದ ಬೃಹತ್‌ ಮೊತ್ತವನ್ನು ಬೀದರ್‌ ಮೂಲದ ಓಂ ಲಕ್ಷಿ ಸೌಹಾರ್ದ ಸಹಕಾರಿ ಸಂಘಕ್ಕೆ ಸೇರಿದ ಖಾತೆಗಳಿಂದ ವರ್ಗಾಯಿಸಲಾಗಿದೆ.
ಶೋರೂಂ ಸಿಸಿಟಿವಿ ದೃಶ್ಯಾವಳಿ ಸಾಕ್ಷಿ: ಗಂಗ್ವಾರ್‌ ಮತ್ತು ಮಹಿಳೆ ಜಂಟಿಯಾಗಿ ಆಭರಣ ಖರೀದಿಸುತ್ತಿರುವ ದೃಶ್ಯಗಳು ಜ್ಯುವೆಲ್ಲರಿ ಶೋರೂಂನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನು ಪ್ರಮುಖ ಸಾಕ್ಷ್ಯವಾಗಿ ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಅಭ್ಯರ್ಥಿಗಳ ಹಣದಲ್ಲೇ ಮೋಜು:
ಸೋರಿಕೆಯಾದ ಪ್ರಶ್ನೆಪತ್ರಿಕೆ ಮತ್ತು ಸಿದ್ಧ ಉತ್ತರಗಳನ್ನು ಪಡೆದ 11 ಅಭ್ಯರ್ಥಿಗಳಿಂದ ಸುಮಾರು 60 ರಿಂದ 70 ಲಕ್ಷ ರೂಪಾಯಿ ಹಣವನ್ನು ಮಧ್ಯವರ್ತಿಗಳ ಖಾತೆಗಳಿಗೆ ವರ್ಗಾಯಿಸಿಕೊಳ್ಳಲಾಗಿತ್ತು. ಈ ಹಣವನ್ನು ಅಭ್ಯರ್ಥಿಗಳನ್ನು ತಂಗಿಸಲು ದೇವನಹಳ್ಳಿಯ ರೆಸಾರ್ಟ್‌ ಬುಕಿಂಗ್‌ಗೆ ಹಾಗೂ ಅಧಿಕಾರಿಯ ಐಷಾರಾಮಿ ವೆಚ್ಚಗಳಿಗೆ ಬಳಸಲಾಗಿದೆ.

ಕನ್ನಾಳೆ ಒಡೆತನದ ಬೀದರ್‌ ಮೂಲದ ಭಗವತಿ ಎಂಟರ್‌ಪ್ರೈಸಸ್‌‍ ಮೂಲಕ ವಿಮಾನ ಟಿಕೆಟ್‌ಗಳನ್ನು ಖರೀದಿಸಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದೆ. ಜಾಮೀನು ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಎಲ್‌.ಭಾಗ್ಯಲಕ್ಷಿ ಈ ಹಣದ ಹಾದಿಗೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಸಿಐಡಿ ಪ್ರಕಾರ, ಅಭ್ಯರ್ಥಿಗಳಿಂದ ಸಂಗ್ರಹಿಸಲಾಯಿತು ಎನ್ನಲಾದ ಹಣವನ್ನು ಕನ್ನಾಳೆ ವಿವಿಧ ಖರ್ಚುಗಳಿಗೆ ಬಳಸಿರುವ ಸಾಧ್ಯತೆಯ ಕುರಿತು ತನಿಖೆ ನಡೆಯುತ್ತಿದೆ. ಗಂಗ್ವಾರ್‌ ಮತ್ತು ಸ್ನೇಹಿತೆ ಹಲವು ಸ್ಥಳಗಳಿಗೆ ಪ್ರಯಾಣಿಸಿರುವುದನ್ನೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇದೇ ಪ್ರಕರಣದಲ್ಲಿ ಗಂಗ್ವಾರ್‌ ಅವರ ಪರಿಚಿತ ಮಹಿಳೆಗೆ ಸುಮಾರು 52 ಲಕ್ಷ ರೂ.ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಖರೀದಿಸಲಾಗಿದೆ ಎಂಬ ಆರೋಪವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸಿಐಡಿ ನ್ಯಾಯಾಲಯಕ್ಕೆ ನೀಡಿದ ಮಾಹಿತಿಯ ಪ್ರಕಾರ, ಮಾರ್ಚ್‌ ಮತ್ತು ಜೂನ್‌ ಅವಧಿಯಲ್ಲಿ ನಡೆದ ಆಭರಣ ಖರೀದಿಗೆ ಸಂಬಂಧಿಸಿದ ಹಣದ ಮೂಲವನ್ನು ಪರಿಶೀಲಿಸಲಾಗುತ್ತಿದೆ.

ಹಣದ ಒಂದು ಭಾಗವನ್ನು ನಗದು ಹಾಗೂ ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿಸಲಾಗಿದ್ದು, ಉಳಿದ ಮೊತ್ತವು ಬೀದರ್‌ನ ಓಂ ಲಕ್ಷಿ ಸೌಹಾರ್ದ ಸಹಕಾರಿ ಸಂಘಕ್ಕೆ ಸಂಬಂಧಿಸಿದ ಖಾತೆಗಳಿಂದ ಆಭರಣ ವ್ಯಾಪಾರಿಗೆ ವರ್ಗಾವಣೆಯಾಗಿದೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.

ಆಭರಣ ಮಳಿಗೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಗಂಗ್ವಾರ್‌ ಮತ್ತು ಮಹಿಳೆ ಆಭರಣ ಖರೀದಿಸುತ್ತಿರುವ ದೃಶ್ಯಗಳು ಪತ್ತೆಯಾಗಿವೆ ಎಂದು ಪ್ರಾಸಿಕ್ಯೂಷನ್‌ ನ್ಯಾಯಾಲಯಕ್ಕೆ ತಿಳಿಸಿದೆ. ಕನ್ನಾಳೆಗೆ ಪರಿಚಿತರಾಗಿರುವ ವ್ಯಕ್ತಿಗಳ ಖಾತೆಗಳಿಗೆ ಕೆಪಿಎಸ್‌‍ಸಿ ಅಭ್ಯರ್ಥಿಗಳು ಹಣ ವರ್ಗಾವಣೆ ಮಾಡಿರುವ ಸಾಧ್ಯತೆಯನ್ನೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಅಭ್ಯರ್ಥಿಗಳಿಂದ ಕೋಟ್ಯಂತರ ರೂ. ಸಂಗ್ರಹ
ಕೆಪಿಎಸ್‌‍ಸಿ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ 11 ಅಭ್ಯರ್ಥಿಗಳು ತಲಾ 35 ಲಕ್ಷದಿಂದ 80 ಲಕ್ಷದವರೆಗೆ ಹಣ ಪಾವತಿಸಿದ್ದಾರೆ ಎಂಬುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಮತ್ತೊಂದು ಹಂತದ ತನಿಖೆಯಲ್ಲಿ 24 ಅಭ್ಯರ್ಥಿಗಳಿಂದ 12 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಲಾಯಿತು ಎಂಬ ಮಾಹಿತಿ ಕೂಡ ಹೊರಬಂದಿದೆ. ಈ ಪ್ರಕರಣದ ತನಿಖೆ ಆರಂಭವಾಗಲು ಪ್ರಮುಖ ಕಾರಣಗಳಲ್ಲಿ ಒಬ್ಬ ಅಭ್ಯರ್ಥಿಯ ಹೇಳಿಕೆಯೂ ಸೇರಿದೆ. ತನಗೆ 40 ಲಕ್ಷ ರೂ. ನೀಡಿದರೆ ಕೆಪಿಎಸ್‌‍ಸಿ ನೇಮಕಾತಿಯಲ್ಲಿ ಆಯ್ಕೆ ಮಾಡಿಸುವುದಾಗಿ ಕನ್ನಾಳೆ ಭರವಸೆ ನೀಡಿದ್ದ ಎಂದು ಅಭ್ಯರ್ಥಿಯೊಬ್ಬರು ಸಿಐಡಿಗೆ ಹೇಳಿಕೆ ನೀಡಿದ್ದರು.

RELATED ARTICLES
spot_img

Latest News